ಕನ್ನಡಪ್ರಭ ವಾರ್ತೆ ರಾಮನಾಥಪುರ
ಪುತ್ಥಳಿ ಅನಾವರಣದ ನಂತರ ನಡೆದ ಸಭೆಯಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಮಾತನಾಡಿ, ಕೊಣನೂರು ಕಸಬಾ ಶ್ಯಾನುಭೋಗರು, ಕೊಣನೂರು ಗ್ರಾಮ ಪಂಚಾಯಿತಿಯ ಸದಸ್ಯರು, ಉಪಾಧ್ಯಕ್ಷರು ಹಾಗೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಗ್ರಾಮ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಲ್ಲಿ ಹಾಗೂ ಡೀವಿಯೇಶನ್ ರಸ್ತೆ, ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಕಾರಣೀಭೂತರಾದ ಮತ್ತು ಆಸ್ಪತ್ರೆಗಳು, ರಸ್ತೆ, ಚರಂಡಿ ಮುಂತಾದ ಕೊಣನೂರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ, ಹಿಂದೆ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ಆಗಿದ್ದ ವೆಂಕಟರಾಮಯ್ಯನವರ ಪ್ರತಿಮೆಯನ್ನು ಈ ಹಿಂದೆಯೇ ಮಾಡಬೇಕಿತ್ತು. ತಡವಾಗಿದೆಯಾದರೂ ಅವರ ಪ್ರತಿಮೆ ಇಂದು ಅನಾವರಣಗೊಂಡಿರುವುದು ಸಂತಸ ತಂದಿದೆ. ಅವರು ನೀಡಿದ್ದ ಕೊಡುಗೆಗಳನ್ನು ಇಂದಿಗೂ ಸಹ ಇಲ್ಲಿ ಕಾಣಬಹುದು. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಮಾಡುತ್ತೇನೆ ಎಂದರು.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ. ಎಂ. ಜಾನಕಿರವರು ಮಾತನಾಡಿ, ದಿ. ವೆಂಕಟರಾಮಯ್ಯನವರದ್ದು ದೂರದೃಷ್ಟಿ. ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವುದು ಎಲ್ಲರಿಗೂ ಸ್ಫೂರ್ತಿದಾಯಕ. ಅದೇ ರೀತಿ ಸ್ಥಳೀಯ ಆಡಳಿತ, ಸರ್ಕಾರ ಗಮನಹರಿಸಿ ಅವರು ಮಾಡಿರುವಂತಹ ಕೆಲಸಗಳನ್ನು ಉನ್ನತೀಕರಣ ಮಾಡಿ ಅವರ ಹೆಸರನ್ನು ಎಲ್ಲರೂ ಸ್ಮರಿಸುವಂತೆ ಮಾಡಬೇಕು. ವೆಂಕಟರಾಮಯ್ಯನವರ ಹೆಸರು ಸದಾ ಸ್ಮರಣೀಯವಾಗುವಂತೆ ಅವರ ಹೆಸರನ್ನು ನಮ್ಮೂರಿನ ಮುಖ್ಯ ರಸ್ತೆಗೋ, ವಾಚನಾಲಯಕ್ಕೋ, ಉದ್ಯಾನವನಕ್ಕೋ ಇಡಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ ಎಂದರು.ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮಾತನಾಡಿ, ನಮ್ಮ ಪೂರ್ವಜರು ಋಷಿ ಸದೃಶ್ಯವಾಗಿ ಜೀವನವನ್ನು ಕಳೆದಿದ್ದಾರೆ ಎಂಬುದನ್ನು ನಾವು ನೆನಪಿಗೆ ತಂದುಕೊಳ್ಳಬೇಕು. ನಾವು ಸ್ವಾರ್ಥವನ್ನು ಬಿಟ್ಟು ಮಾಡುವ ಧರ್ಮಕಾರ್ಯಗಳೇ ನಮ್ಮ ಜೊತೆಗೆ ಬರುತ್ತವೆ. ನಮ್ಮ ಪೂರ್ವಜರು ಮಾಡಿದ ಸತ್ಕಾರ್ಯ ಹಾಗೂ ಸಮಾಜ ಸೇವೆಯಿಂದ ನಾವುಗಳು ಇಂದು ಉತ್ತಮ ಸ್ಥಿತಿಯಲ್ಲಿದ್ದು ಅನೇಕ ಅವಕಾಶಗಳು ಸಿಕ್ಕಿದೆ ಎಂಬುದನ್ನು ಮರೆಯಬಾರದು ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ಬಬ್ಬೂರು ಕಮ್ಮೆ ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಸತ್ಯಪ್ರಕಾಶ್ ಮಾತನಾಡಿ ನಾನೂ ಸಹ ದಿ. ವೆಂಕಟರಾಮಯ್ಯನವರ ಮನೆಯಲ್ಲಿ ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದವನು. ನಾನಿಂದು ಈ ಮಟ್ಟದಲ್ಲಿ ಇದ್ದೇನೆಂದರೆ ದಿ. ವೆಂಕಟರಾಮಯ್ಯನವರೇ ಕಾರಣ ಎಂದು ಸ್ಮರಿಸುತ್ತಾ ವೆಂಕಟರಾಮಯ್ಯನವರ ಜೀವನ ಚರಿತ್ರೆಯ ಬಗ್ಗೆ ಒಂದು ಪುಸ್ತಕ ಹೊರತರಬೇಕು ಎಂದುಕೊAಡಿದ್ದು ಇದಕ್ಕೆ ಕುಟುಂಬದವರೆಲ್ಲರೂ ಸಹಕಾರ ನೀಡಿದರೆ ಅವರ ಬಗೆಗಿನ ಪುಸ್ತಕ ಹೊರತಂದು ಕೊಣನೂರಿನ ಪ್ರತೀ ಮನೆಗೂ ತಲುಪಿಸುವ ಕೆಲಸ ಮಾಡುತ್ತೇನೆ ಎಂದರು.ದಿ. ವೆಂಕಟರಾಮಯ್ಯನವರ ಮೊಮ್ಮಗ, ನಿವೃತ್ತ ಐಎಎಸ್ ಅಧಿಕಾರಿ ಎ. ರಾಮಸ್ವಾಮಿ ಮಾತನಾಡುತ್ತಾ ನಮ್ಮ ತಾತನ ಕಾಲದಲ್ಲಿ ಕೊಣನೂರಿನಲ್ಲಿ ಹತ್ತೇ ಹತ್ತು ಮನೆಗಳಿದ್ದವು. ಅಂತಹ ಗ್ರಾಮದಲ್ಲಿ ಶಾಲೆ, ಆಸ್ಪತ್ರೆ, ಕಾಲೇಜು, ಪಶು ಆಸ್ಪತ್ರೆ, ಬಸ್‌ನಿಲ್ದಾಣ. ಪುರಸಭೆ, ವಾರದ ಸಂತೆ, ಪೋಲೀಸ್‌ಠಾಣೆ, ಕಾವೇರಿ ನದಿಗೆ ಮೆಟ್ಟಿಲುಗಳು, ಶುದ್ದಕುಡಿಯುವ ನೀರಿನ ಘಟಕ ಮುಂತಾದ ಅನೇಕ ಕಾರ್ಯಗಳನ್ನು ಮಾಡಿದರು. ೧೯೫೬ರಲ್ಲಿ ಕೊಣನೂರಿಗೆ ವಿದ್ಯುತ್ ಸಂಪರ್ಕ ಹಾಗೂ ಪ್ರತೀ ಮನೆಗೂ ಕುಡಿಯುವ ನೀರಿನ ಸಂಪರ್ಕ ತಂದ ಕೀರ್ತಿ ನಮ್ಮ ತಾತನವರಿಗೆ ಸಲ್ಲುತ್ತದೆ. ನಮ್ಮ ತಾತನವರು ಸತತವಾಗಿ ಮೂರು ಬಾರಿ ಎಂಆರ್‌ಎ ಆದ ಕಾರಣ ಮೈಸೂರು ಮಹಾರಾಜರು ಬೆಳ್ಳಿ ತಟ್ಟೆಯನ್ನು ಕೊಟ್ಟಿದ್ದರು ಎಂಬುದನ್ನೂ ನೆನೆಸಿಕೊಂಡರು.
ಇದೇ ಸಂದರ್ಭದಲ್ಲಿ ಕೊಣನೂರಿಗೆ ದಿವಾನರಾದ ಮಿರ್ಜಾ ಇಸ್ಮಾಯಿಲ್, ಮುಖ್ಯಮಂತ್ರಿಗಳಾದ ಕೆಂಗಲ್ ಹನುಂತಯ್ಯ, ದೇವರಾಜ ಅರಸು ಬಂದುದ್ದನ್ನು ನೆನೆಸಿಕೊಂಡು ಎ.ಜಿ. ರಾಮಚಂದ್ರರಾಯರು, ಎಸ್. ಆರ್. ಕಂಠಿ, ಎಸ್. ನಿಜಲಿಂಗಪ್ಪ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಹಾರನಹಳ್ಳಿ ರಾಮಸ್ವಾಮಿ ರವರೊಂದಿಗಿನ ತಮ್ಮ ತಾತನ ಭಾಂಧವ್ಯವನ್ನು ಹಾಗೂ ಹೊಳೇನರಸೀಪುರಕ್ಕೆ ಮಹಾತ್ಮಾ ಗಾಂಧೀಜಿ ರವರು ಬಂದದ್ದನ್ನು ಮೆಲುಕು ಹಾಕಿದರು.ಈ ಸಂದರ್ಭದಲ್ಲಿ ಕೊಣನೂರು ವೆಂಕಟರಾಮಯ್ಯ ಸೇವಾ ಸಮಿತಿಯವರು, ಕೊಣನೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.