ಪ್ರಸಕ್ತ ಸಾಲಿನ ಸಿಇಟಿಯಲ್ಲಿ ಜನಿವಾರ ಮತ್ತು ಹಿಜಾಬ್ ವಿಚಾರಕ್ಕೆ ಸಮಸ್ಯೆಗೊಳಗಾಗಿದ್ದ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲು ಬಯಸಿದರೆ, ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಆದರೆ, ಯಾವುದೇ ಕೃಪಾಂಕ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ಬೆಂಗಳೂರು : ಪ್ರಸಕ್ತ ಸಾಲಿನ ಸಿಇಟಿಯಲ್ಲಿ ಜನಿವಾರ ಮತ್ತು ಹಿಜಾಬ್ ವಿಚಾರಕ್ಕೆ ಸಮಸ್ಯೆಗೊಳಗಾಗಿದ್ದ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲು ಬಯಸಿದರೆ, ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಆದರೆ, ಯಾವುದೇ ಕೃಪಾಂಕ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಿವಾರ ತೆಗೆಯುವಂತೆ ಸೂಚಿಸಲ್ಪಟ್ಟ ನಾಲ್ವರು ವಿದ್ಯಾರ್ಥಿಗಳು ಕೆಇಎಗೆ ಪತ್ರ ಬರೆದಿದ್ದು, ಈ ಘಟನೆಯಿಂದ ನಮಗೆ ತೊಂದರೆಯಾಯಿತು ಮತ್ತು ಪರೀಕ್ಷೆ ಮೇಲೆ ಗಮನಹರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಕೃಪಾಂಕ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಹಿಜಾಬ್‌ ವಿಚಾರದಿಂದಾಗಿ ಒಬ್ಬ ವಿದ್ಯಾರ್ಥಿನಿ ಭೌತಶಾಸ್ತ್ರ ಪರೀಕ್ಷೆ ಬರೆದಿಲ್ಲ. ಹಾಗಾಗಿ ಈ ವಿದ್ಯಾರ್ಥಿಗಳು ಬಯಸಿದರೆ ಮರು ಪರೀಕ್ಷೆಗೆ ಅವಕಾಶ ನೀಡಲು ತೀರ್ಮಾನಿಸುತ್ತೇವೆ. ಆದರೆ, ಕಾನೂನು ಸಮಸ್ಯೆ ಆಗಬಹುದಾದ ಕಾರಣದಿಂದ ಕೃಪಾಂಕ ನೀಡಲು ಆಗುವುದಿಲ್ಲ ಎಂದರು.

ತರಬೇತಿ ನೀಡಲಾಗಿತ್ತು:

ಸಿಬ್ಬಂದಿಗೆ ಡ್ರೆಸ್ ಕೋಡ್ ಬಗ್ಗೆ ತರಬೇತಿ ನೀಡಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ 2 ಗಂಟೆ ಮುಂಚಿತವಾಗಿ ತಲುಪಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೂ ಮೂರು ಕಾಲೇಜುಗಳ ಸಿಬ್ಬಂದಿ ನಿಯಮ ಉಲ್ಲಂಘಿಸಿದ್ದಾರೆ. ಈ ಘಟನೆಗಳು ಕೆಲ ಸಿಬ್ಬಂದಿಯಿಂದ ಉದ್ದೇಶಪೂರ್ವಕವಾಗಿ ನಡೆದಿವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ​ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ರಚಿಸಿದ ಸಮಿತಿ ಸಲ್ಲಿಸಿದ ವರದಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು. ಜೊತೆಗೆ ಮುಂದಿನ ವರ್ಷಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

 - ಜನಿವಾರ ಗದ್ದಲ ಬಗ್ಗೆ 4 ಮಕ್ಕಳು ಪತ್ರ ಬರೆದಿದ್ದಾರೆ

- ಪರೀಕ್ಷೆ ಬರೆಯಲು ಸಮಸ್ಯೆಯಾಯ್ತು ಎಂದಿದ್ದಾರೆ

- ಹಿಜಾಬ್‌ ವಿಚಾರವಾಗಿ ಒಬ್ಬಾಕೆ ಪರೀಕ್ಷೆ ಬರೆದಿಲ್ಲ

- ಈ ಮಕ್ಕಳು ಬಯಸಿದ್ರೆ ಮರುಪರೀಕ್ಷೆಗೆ ಅವಕಾಶ

- ಕಾನೂನು ಸಮಸ್ಯೆ ಹಿನ್ನೆಲೆಯಲ್ಲಿ ಕೃಪಾಂಕ ನೀಡಲ್ಲ