ಬಾಂಧವ್ಯ ಮಹಿಳಾ ಸಮಾಜದ 21ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಶಾಸಕ ಜ್ಯೋತಿ ಗಣೇಶ
ಸ್ಥಳೀಯ ಸಂಸ್ಥೆಗಳ ರೀತಿ ಲೋಕಸಭೆ ಮತ್ತು ವಿಧಾನಸಭೆಗಳಿಗೂ ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು, ಪ್ರಧಾನಿ ನರೇಂದ್ರಮೋದಿ ರಾಜಕೀಯವಾಗಿಯೂ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸಿದ್ದು, ಇದರ ಪ್ರಯೋಜನ ಪಡೆಯಲು ಮಹಿಳೆಯರು ಸನ್ನದ್ಧರಾಗುವಂತೆ ತುಮಕೂರು ನಗರ ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದ್ದಾರೆ.
ಮಾರುತಿ ನಗರದ ಸಂಜೀವಿನಿ ಪಾರ್ಕಿನಲ್ಲಿರುವ ಬಯಲು ರಂಗಮಂದಿರದಲ್ಲಿ ಬಾಂಧವ್ಯ ಮಹಿಳಾ ಸಮಾಜದ 21 ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಮಂಡಿಸಿದ ಮಹಿಳಾ ರಾಜಕೀಯ ಮೀಸಲಾತಿ ಮಸೂದೆ ಉಭಯ ಸದನಗಳಲ್ಲಿ ಪಾಸಾಗಿದ್ದು, 2023 ಕ್ಕೆ ಚಾಲ್ತಿಗೆ ಬರಲಿದೆ. ಸ್ಥಳೀಯ ಸಂಸ್ಥೆಗಳ ರೀತಿ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿಯೂ ಮಹಿಳೆಯರು ರಾಜಕೀಯ ಅಧಿಕಾರ ಪಡೆಯಬುದು ಎಂದರು.ಕಳೆದ 10 ವರ್ಷಗಳಿಂದಲೂ ಬಾಂಧವ್ಯ ಮಹಿಳಾ ಸಮಾಜವನ್ನು ನೋಡುತ್ತಿದ್ದು, ಮಾರುತಿ ನಗರದ ಅಭಿವೃದ್ಧಿಯಲ್ಲಿ ಮಾರುತಿ ನಗರ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಬಾಂಧವ್ಯ ಮಹಿಳಾ ಸಮಾಜ ಬಹಳ ಸಕ್ರಿಯವಾಗಿ ತೊಡಗಿ ಕೊಂಡಿವೆ. ಎರಡು ಸಂಘಟನೆಗಳು ಒಗ್ಗೂಡಿ, ರಾಜಕಾರಣಿಗಳು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಮಾರುತಿ ನಗರದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜೀವಿನ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ವಸ್ತುಗಳು ಮತ್ತು ವಯೋವೃದ್ಧರಿಗೆ ಅಗತ್ಯವಿರುವ ವಸ್ತುಗಳನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಜಿ.ಬಿ. ಜೋತಿಗಣೇಶ್ ಭರವಸೆ ನೀಡಿದರು.
ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ಮಹಾಲಕ್ಷ್ಮಿ ಮಾತನಾಡಿ, ಡಿಸೆಂಬರ್ ತಿಂಗಳಲ್ಲಿ ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ಹಮ್ಮಿಕೊಂಡಿದೆ. ಬೇರೆ ಬಡಾವಣೆಗಳಿಗೆ ಹೊಲಿಕೆ ಮಾಡಿದರೆ ಮಾರುತಿ ನಗರದಲ್ಲಿ ಕಳ್ಳತನ ಪ್ರಕರಣ ಕಡಿಮೆ. ಆದರೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರು ಸಿಸಿ ಕ್ಯಾಮೆರಾಅಳವಡಿಸಿಕೊಂಡರೆ ನಿಮ್ಮಗೂ ಕ್ಷೇಮ, ಪೊಲೀಸ್ ಇಲಾಖೆಗೆ ಸಹಕಾರಿಯಾಗಲಿದೆ. ಕಳ್ಳತನ ಮತ್ತಿತರ ವಿದ್ವಂಸಕ ಕೃತ್ಯಗಳು ನಡೆದಾಗ ಸುಲಭವಾಗಿ ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಧ್ಯ. ಹಾಗಾಗಿ ಎಲ್ಲಾ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಬಾಂಧವ್ಯ ಮಹಿಳಾ ಸಮಾಜದ ಜಯಲಕ್ಷ್ಮಿ ರಾಮಚಂದ್ರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ವಸುಂಧರ ನಾಗರಾಜು ವಾರ್ಷಿಕ ವರದಿ ವಾಚಿಸಿದರು.
ಬಾಂಧವ್ಯ ಮಹಿಳಾ ಸಮಾಜದ 21 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಅಧೀಕ್ಷಕ ವೆಂಕಟೇಶ್ ಟಿ.ಎಂ., ಬಾಲ ಪ್ರತಿಭೆ, ಇಂಡಿಯಾ ಬುಕ್ ಅಫ್ ರೆಕಾರ್ಡ್ ಪ್ರಶಸ್ತಿ ಪುರಸ್ಕೃತ ಸಾಯಿ ಸುಮುಖ್ ಎಸ್. ಗುಪ್ತ ಹಾಗೂ ಸ್ಮಶಾನ ಕಾಯುವ ಮಹಿಳೆ ಯಶೋಧಮ್ಮ ಅವರನ್ನು ಸನ್ಮಾನಿಸಲಾಯಿತು.