ಸ್ಟೆಮ್ ಲ್ಯಾಬ್ ಭವಿಷ್ಯದ ಪ್ರತಿಭೆಗಳ ಸೃಷ್ಟಿಸುವ ಕೇಂದ್ರ: ಸಹಾಯಕ ಆಯುಕ್ತೆ ಕಾವ್ಯಾರಾಣಿ

KannadaprabhaNewsNetwork | Published : Dec 14, 2024 12:46 AM

ಸಾರಾಂಶ

ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ವಿನೂತನ ಪರಿಕಲ್ಪನೆಯೊಂದಿಗೆ ಆರಂಭಿಸಲಾದ ಸ್ಟೆಮ್ ಲ್ಯಾಬ್ ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ವಿಭಾಗ ಹಾಗೂ ರೋಬೊಟಿಕ್ ವಿಜ್ಞಾನಗಳ ಕುರಿತ ಹೆಚ್ಚಿನ ಸಾಮರ್ಥ್ಯ ಬಲವರ್ಧನೆಗೆ ಸಹಾಯವಾಗುತ್ತದೆ.

ಶಿರಸಿ: ಸ್ಟೆಮ್ ಲ್ಯಾಬ್ ಭವಿಷ್ಯದ ಪ್ರತಿಭೆಗಳನ್ನು ಸೃಷ್ಟಿಸುವ ಕೇಂದ್ರವಾಗಲಿದೆ ಎಂದು ಸಹಾಯಕ ಆಯುಕ್ತೆ ಕಾವ್ಯಾರಾಣಿ ತಿಳಿಸಿದರು.ಶುಕ್ರವಾರ ನಗರದ ಮಾರಿಕಾಂಬಾ ಪ್ರೌಢಶಾಲಾ ಆವರಣದಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಗುಜರಾತಿನ ದೇಸಾಯಿ ಫೌಂಡೇಶನ್ ಟ್ರಸ್ಟ್ ಸಹಭಾಗಿತ್ವದಲ್ಲಿ ನೂತನವಾಗಿ ಆರಂಭಿಸಿರುವ ಸ್ಟೆಮ್ ಲ್ಯಾಬ್ ಹಾಗೂ ಬಾಲ ಹೆಲ್ತ್ ಮೇಳ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ವಿನೂತನ ಪರಿಕಲ್ಪನೆಯೊಂದಿಗೆ ಆರಂಭಿಸಲಾದ ಸ್ಟೆಮ್ ಲ್ಯಾಬ್ ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ವಿಭಾಗ ಹಾಗೂ ರೋಬೊಟಿಕ್ ವಿಜ್ಞಾನಗಳ ಕುರಿತ ಹೆಚ್ಚಿನ ಸಾಮರ್ಥ್ಯ ಬಲವರ್ಧನೆಗೆ ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಮುಂದಿನ ಉದ್ಯೋಗಪೂರಕ ಶಿಕ್ಷಣ ಹೊಂದಲು ಸಾಧ್ಯವಾಗುತ್ತದೆ ಎಂದರು. ದೇಸಾಯಿ ಫೌಂಡೇಶನ್ ಅಧ್ಯಕ್ಷೆ ಮೇಘಾ ದೇಸಾಯಿ ಮಾತನಾಡಿ, ಗ್ರಾಮೀಣ ಭಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಲ್ಲಿ ಅಗಾಧವಾದ ಪ್ರತಿಭೆಯಿದ್ದರೂ ಅಗತ್ಯ ಸೌಲಭ್ಯ ಹಾಗೂ ತರಬೇತಿಯ ಕೊರತೆಯಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಭವಿಷ್ಯದ ಎಲ್ಲ ಅವಕಾಶಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಸ್ಟೆಮ್ ಲ್ಯಾಬ್ ಯೋಜನೆಯನ್ನು ಆರಂಭಿಸಿದ್ದೇವೆ.

ಎಷ್ಟೇ ಸೌಲಭ್ಯಗಳನ್ನು ಒದಗಿಸಿದರೂ ಅನಾರೋಗ್ಯದ ಕಾರಣದಿಂದ ಇಂದಿಗೂ ಸುಮಾರು ಶೇ. ೨೨ರಿಂದ ಶೇ. ೨೭ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗುವುದು, ಶಾಲೆಯಿಂದ ಹೊರಗುಳಿಯುವುದನ್ನು ಗಮನಿಸಿದ್ದೇವೆ. ಈ ಕಾರಣಕ್ಕಾಗಿ ಮಕ್ಕಳಲ್ಲಿ ಆರೋಗ್ಯ ಪ್ರಜ್ಞೆ ಮೂಡಿಸುವ ಪ್ರಾರಂಭದಲ್ಲಿಯೇ ಕಾಯಿಲೆಗಳ ಬಗ್ಗೆ ಜಾಗೃತಿ ಹೊಂದುವಂತೆ ಮಾಡುವ ಉದ್ದೇಶದಿಂದ ಬಾಲ ಹೆಲ್ತ್ ಮೇಳ ಎಂಬ ಬೃಹತ್ ಕಾರ್ಯಕ್ರಮವನ್ನೂ ಆಯೋಜಿಸುತ್ತಾ ಬರಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಆಯ್ದ ಸರ್ಕಾರಿ ಪ್ರೌಢಶಾಲೆಗಳಿಗೆ ಸಂಸ್ಥೆಯ ವತಿಯಿಂದ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿನಿಯರಲ್ಲಿ ಮುಟ್ಟಿನ ನೈರ್ಮಲ್ಯ ಹಾಗೂ ಸುರಕ್ಷತೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವಪೂರ್ಣವಾದದ್ದು. ಅದೇ ರೀತಿ ಸ್ಟೆಮ್ ಲ್ಯಾಬ್ ಯೋಜನೆಯು ಮಾದರಿ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಲಭ್ಯವಾಗುವಂತೆ ಕ್ರಮವಹಿಸಲಾಗುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್. ರವಿ ಮಾತನಾಡಿ, ಇಂದು ಚಾಲನೆಗೊಂಡ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಸ್ಥಳೀಯ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ದೇಸಾಯಿ ಫೌಂಡೇಶನ್ ಟ್ರಸ್ಟ್, ಗುಜರಾತ್‌ನ ದಕ್ಷಿಣ ವಲಯದ ಕಾರ್ಯಕ್ರಮ ಅಧಿಕಾರಿ ಪ್ರಣವ್ ಸಿಂಗ್, ಮಾರಿಕಾಂಬಾ ಪ್ರೌಢಶಾಲೆಯ ಉಪಪ್ರಾಂಶುಪಾಲ ರಾಜೇಶ ನಾಯ್ಕ, ಸ್ಕೊಡ್‌ವೆಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ. ಕೂರ್ಸೆ, ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಕೆ.ಎನ್. ಹೊಸಮನಿ ಉಪಸ್ಥಿತರಿದ್ದರು.ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿ ಹೇಮಲತಾ ಚೌಗುಲೆ ವಂದಿಸಿದರು. ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಿ ಯಶಸ್ವಿಗೊಳಿಸಿದರು.

Share this article