ಹಿರೇಬೆಣಕಲ್ ತ್ವರಿತ ಅಭಿವೃದ್ಧಿಗೆ ಕ್ರಮ

KannadaprabhaNewsNetwork |  
Published : Mar 09, 2026, 02:15 AM IST
8ಕೆಪಿಎಲ್23 ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಶಿಲಾಸಮಾಧಿ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಭೇಟಿ ನೀಡಿರುವುದು. | Kannada Prabha

ಸಾರಾಂಶ

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಭೂಮಿಯಾಗಿರುವುದರಿಂದ ಅರಣ್ಯ ಇಲಾಖೆಯವರು ಮುತುವರ್ಜಿ ವಹಿಸಿ,ನಿಯಮಾನುಸಾರ ಕ್ರಮ ಕೈಗೊಂಡು, ಅರಣ್ಯ ಪ್ರದೇಶದಡಿಯಲ್ಲಿ ಇರುವ ನಿಯಮಗಳಡಿ ಅಭಿವೃದ್ಧಿಪಡಿಸುವುದಕ್ಕೆ ಸಹಕಾರ ನೀಡಬೇಕು

ಕೊಪ್ಪಳ: ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯ್ಕೆ ಮಾಡಿದ ಕರ್ನಾಟಕ ಏಳು ಅದ್ಭುತಗಳೊಂದಾಗಿರುವ ಹಿರೇಬೆಣಕಲ್ ಶಿಲಾಸಮಾಧಿ ಪ್ರದೇಶಾಭಿವೃದ್ಧಿ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಸೂಚಿಸಿದ್ದಾರೆ.

ಭಾನುವಾರ ಶಿಲಾಸಮಾಧಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಅವರು, ಪ್ರವಾಸೋದ್ಯಮ ಇಲಾಖೆಯ ಸಚಿವರು ಭೇಟಿ ನೀಡಿದ್ದ ವೇಳೆ ಇಲ್ಲಿಯ ಅಭಿವೃದ್ಧಿಗೆ ಸೂಚನೆ ನೀಡಿದ್ದರು ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ₹80 ಲಕ್ಷ ಬಿಡುಗಡೆ ಮಾಡಿದ್ದರು. ಇದರ ಅಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಈಗಾಗಲೇ ಟೆಂಡರ್ ಆಹ್ವಾನ ಮಾಡಲಾಗಿದೆ. ಹೀಗಾಗಿ, ಇದನ್ನು ತ್ವರಿತ ಗತಿಯಲ್ಲಿ ಮಾಡುವಂತೆ ಸೂಚಿಸಿದರು.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಭೂಮಿಯಾಗಿರುವುದರಿಂದ ಅರಣ್ಯ ಇಲಾಖೆಯವರು ಮುತುವರ್ಜಿ ವಹಿಸಿ,ನಿಯಮಾನುಸಾರ ಕ್ರಮ ಕೈಗೊಂಡು, ಅರಣ್ಯ ಪ್ರದೇಶದಡಿಯಲ್ಲಿ ಇರುವ ನಿಯಮಗಳಡಿ ಅಭಿವೃದ್ಧಿಪಡಿಸುವುದಕ್ಕೆ ಸಹಕಾರ ನೀಡಬೇಕು ಎಂದು ಸ್ಥಳದಲ್ಲಿಯೇ ಇದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಇದು ಜಿಲ್ಲೆಯ ಹೆಮ್ಮೆ ಅಷ್ಟೇ ಅಲ್ಲ, ರಾಜ್ಯದ ಹೆಮ್ಮೆಯಾಗಿದೆ. ಕರ್ನಾಟಕದ ಏಳು ಅದ್ಭುತಗಳಲ್ಲೊಂದಾಗಿ ಆಯ್ಕೆಯಾಗಿರುವುದರಿಂದ ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ರಸ್ತೆ ಸೇರಿದಂತೆ ಮೂಲಸೌಕರ್ಯ ಇರದೆ ಇರುವುದು ಸಮಸ್ಯೆಯಾಗಿದೆ. ಹೀಗಾಗಿಯೇ ಪ್ರವಾಸೋದ್ಯಮ ಸಚಿವರು ಕೂಡಲೇ ಮೂಲಭೂತ ಸೌಕರ್ಯಕ್ಕೆ ಹಣ ಬಿಡುಗಡೆ ಮಾಡಿದ್ದಾರೆ. ವಿಶ್ವಪಾರಂಪರಿಕ ತಾಣಗಳಲ್ಲಿಯೂ ತಾತ್ಕಾಲಿಕ ಸ್ಥಾನ ಪಡೆದಿದ್ದು, ಶೀಘ್ರದಲ್ಲಿಯೇ ಶಾಶ್ವತ ಸ್ಥಾನ ಪಡೆಯುವ ಸಾಧ್ಯತೆ ಇದೆ. ಹೀಗಾಗಿ, ಇದಕ್ಕೆ ಈಗ ಬಿಡುಗಡೆಯಾಗಿರುವ ಅನುದಾನ ಬಳಕೆ ಮಾಡುವುದಕ್ಕೆ ಎಲ್ಲ ರೀತಿಯ ಸಹಕಾರ ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಬೇಕು. ಈ ಕುರಿತಂತೆ ಏನೇ ಸಮಸ್ಯೆ ಇದ್ದರೂ ಕೂಡಲೇ ಬಂದು, ಚರ್ಚಿಸಿ ಇತ್ಯರ್ಥ ಮಾಡಿಕೊಳ್ಳಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಕನ್ನಡಪ್ರಭ ಕಾರ್ಯ ಶ್ಲಾಘನೀಯ

ವಿಶ್ವಪ್ರಸಿದ್ಧ ತಾಣವಾಗಬೇಕಾಗಿದ್ದ ಹಿರೇಬೆಣಕಲ್ ಶಿಲಾಸಮಾಧಿ ತೀವ್ರ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಇದರ ಕುರಿತು ಗಮನ ಹರಿಸುವಂತೆ ಸ್ಥಳೀಯರು ಎಷ್ಟೇ ಪ್ರಯತ್ನ ಮಾಡಿದರೂ ಕೈಗೂಡಿರಲಿಲ್ಲ. ಆದರೆ, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಮ್ಮಿಕೊಂಡಿದ್ದ ಕರ್ನಾಟಕ ಏಳು ಅದ್ಭುತಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮೊದಲನೇ ಸ್ಥಾನ ಪಡೆದ ಮೇಲೆ ಇದಕ್ಕೊಂದು ಮೆರಗು ಬಂದಿದೆ. ಸರ್ಕಾರವೂ ಇತ್ತ ಕಣ್ಣು ಹಾಯಿಸುವಂತಾಗಿದೆ. ಹಿರೇಬೆಣಕಲ್ ಶಿಲಾಸಮಾಧಿ ಇಷ್ಟೆಲ್ಲ ಪ್ರಸಿದ್ಧಿಗೆ ಬರಲು ಮತ್ತು ಇಲ್ಲಿ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಲು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಗಂಗಾವತಿ ಚಾರಣ ಬಳಗ ಮಂಜುನಾಥ ಗುಡ್ಲಾನೂರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ: ರಾಜೇಂದ್ರ ರಾಣೆ
ಸಿದ್ಧಾಂತದ ಅಡಿಯಲ್ಲಿ ಪಕ್ಷ ಕಟ್ಟುವುದು ಬಹಳ ಮುಖ್ಯ