ಕನ್ನಡಪ್ರಭ ವಾರ್ತೆ, ತುಮಕೂರು ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಯುವಜನರಿಗೆ ತಿಳಿಸಲು, ಹೆಚ್ಚಿನ ಅಧ್ಯಯನ ಕೈಗೊಳ್ಳಲು ವಾಲ್ಮೀಕಿ ಅಧ್ಯಯನ ಪೀಠವನ್ನು ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒಂದು ಅಧ್ಯಯನ ಪೀಠ ವಿಶ್ವವಿದ್ಯಾಲಯದಲ್ಲೇ ಸ್ಥಾಪನೆ ಆಗಬೇಕು. ರಾಮಾಯಣವನ್ನು ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಅದರ ಬಗ್ಗೆ ಸಂಶೋಧನೆಗಳಾಗಬೇಕು. ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ನಾನು ಬದ್ಧ ಎಂದರು.ಇಡೀ ದೇಶ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿದೆ. ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ ಇಡೀ ದೇಶದ ಚರಿತ್ರೆಯಲ್ಲಿ ವಾಲ್ಮೀಕಿ ಹೆಸರು ಸೂರ್ಯ-ಚಂದ್ರ ಇರುವವರೆಗೂ ಅಜರಾಮರವಾಗಿರುತ್ತದೆ. ರಾಮಾಯಣದಲ್ಲಿನ ಸಾರವನ್ನು ಓದಿದಾಗ ಆಧುನಿಕ ಭಾರತಕ್ಕೆ ಬಂದಿದ್ದೇವೆ. ತ್ರೇತಾಯುಗದಲ್ಲಿ ರಾಮಾಯಣ ರಚನೆಯಾಗಿದೆ.ಆದರೆ ಪ್ರಸ್ತುತ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅದು ಅತ್ಯಂತ ಹತ್ತಿರವಾಗಿದೆ. ನಿಷ್ಠೆ ಇವತ್ತಿನ ಮನುಷ್ಯನಿಗೆ ಬಹಳ ಮುಖ್ಯವಾಗಿದೆ. ಪ್ರಾಮಾಣಿಕವಾಗಿರಬೇಕು, ಕೃತಜ್ಞತಾ ಆಗಿರಬೇಕು, ಮನುಷ್ಯನಿಗೆ ಇರಬೇಕಾದದ್ದನ್ನು ವಾಲ್ಮೀಕಿ ರಾಮಾಯಣದಲ್ಲಿ ಹೇಳಲಾಗಿದೆ ಎಂದು ನುಡಿದರು.ರಾಮ ರಾಜ್ಯ ಎಂದು ಕರೆಯುತ್ತೇವೆ. ಆದರೆ ರಾಮಾಯಣ ಮಹಾಭಾರತ ಹೇಳಿದ ಮಾರ್ಗಗಳನ್ನು ಬಿಟ್ಟುಇಂದು ಬೇರೆ ಜೀವನವನ್ನು ಮಾಡುತ್ತಿದ್ದೇವೆ. ಜಾತಿ ಧರ್ಮಗಳ ಹಿಂದೆ ಬಿದ್ದು ಒಳ್ಳೆಯ ರೀತಿಯಿಂದ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಮಹಾಪುರುಷರನ್ನು ನಾವು ಸಮುದಾಯಗಳಿಗೆ ಸೀಮಿತಗೊಳಿಸಿದ್ದೇವೆ ವಾಲ್ಮೀಕಿ ದೇಶಕ್ಕೆ ರಾಮಾಯಣ ಕೊಟ್ಟು ವಿಶ್ವಕ್ಕೆ ಮಾದರಿಯಾದ ರಾಮಾಯಣಕ್ಕೆ ಅಪಮಾನ ಮಾಡುತ್ತಿದ್ದಾರೆ, ಸಮಾಜ ವಿಭಿನ್ನ ಚಿಂತನೆಗಳಿಗೆ ಜೋತು ಬಿದ್ದಿರುವುದು ಬೇಸರದ ಸಂಗತಿ ಎಂದು ಡಾ.ಜಿ.ಪರಮೇಶ್ವರ್ ಕಳವಳ ವ್ಯಕ್ತಪಡಿಸಿದರು.ಕನ್ನಡ ಪ್ರಾಧ್ಯಾಪಕಿ ಡಾ. ಅನಸೂಯ ಎಸ್ ಕೆಂಪನಹಳ್ಳಿ ಉಪನ್ಯಾಸ ನೀಡಿ, ಮನುಕುಲದ ಶ್ರೇಯೋಭಿವೃದ್ಧಿಗೆ ವಾಲ್ಮೀಕಿ ರಾಮಾಯಣ ರಚಿಸಿದ್ದಾರೆ. ಹಿಂಸೆಯಿಂದ ವಾಲ್ಮೀಕಿ ಮನ ಪರಿವರ್ತನೆಯಾಗಿ ಅಹಿಂಸೆ ಮಾರ್ಗದಲ್ಲಿ ಸಾಗಿದರು. ಇಂದು ಮನುಷ್ಯ ಒಬ್ಬರನ್ನ ಒಬ್ಬರು ತುಳಿದು ಬದುಕುತ್ತಿದ್ದಾರೆ. ವಾಲ್ಮೀಕಿ ಶಿಕ್ಷಣಕ್ಕೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ನಾವು ಶಿಕ್ಷಣವಂತರಾಗಬೇಕು ಸಂಘಟಿತರಾಗಬೇಕು ಎಂಬುದು ವಾಲ್ಮೀಕಿ ತಿಳಿಸಿದ್ದಾರೆ ಎಂದರು.