6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಧಾರಣೆಗೆ ಕ್ರಮ

KannadaprabhaNewsNetwork |  
Published : Jun 19, 2025, 11:49 PM IST
19ಡಿಡಬ್ಲೂಡಿ9ಧಾರವಾಡ ಐಐಐಟಿ ಸಭಾಂಗಣದಲ್ಲಿ ಮಿಷನ್ ವಿದ್ಯಾಕಾಶಿ ಯೋಜನೆಯಡಿ ಗುರುವಾರ ನಡೆದ ವಿದ್ಯಾಶಕ್ತಿ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು.  | Kannada Prabha

ಸಾರಾಂಶ

ವಿದ್ಯಾಶಕ್ತಿ ಕಾರ್ಯಕ್ರಮದ ಮೂಲಕ ಈಗಾಗಲೇ ಸ್ಮಾರ್ಟ್‌ಬೋರ್ಡ್‌ ಹೊಂದಿರುವ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಐಐಐಟಿ ಸಹಯೋಗದಲ್ಲಿ ಮೂರು ತರಗತಿಯ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಿಂದ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಆನ್‌ಲೈನ್ ತರಗತಿಗಳ ಮೂಲಕ ಉಚಿತ ಮತ್ತು ನೇರವಾಗಿ ಲೈವ್ ಕ್ಲಾಸ್ ಮಾಡಲಾಗುತ್ತದೆ.

ಧಾರವಾಡ: ಪ್ರಸಕ್ತ ವರ್ಷದ ಮಿಷನ್ ವಿದ್ಯಾಕಾಶಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ಸುಧಾರಣೆ ಮತ್ತು ಬಲವರ್ಧನೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದು ಬರುವ ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕಾಣಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಧಾರವಾಡ ಐಐಐಟಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಶಾಲಾ ಶಿಕ್ಷಣ ಇಲಾಖೆ ಗುರುವಾರ ಆಯೋಜಿಸಿದ್ದ ಮಿಷನ್ ವಿದ್ಯಾಕಾಶಿ ಯೋಜನೆಯಡಿ ವಿದ್ಯಾಶಕ್ತಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಧಾರವಾಡ ಐಐಐಟಿ ಸಹಯೋಗದಲ್ಲಿ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಶಾಲೆಯ ಸ್ಮಾರ್ಟ್‌ಬೋರ್ಡ್‌ಗಳಿಂದ ನೇರ ಪಾಠ ಮಾಡಲಾಗುತ್ತದೆ. ವಿದ್ಯಾಶಕ್ತಿ ಕಾರ್ಯಕ್ರಮದ ಮೂಲಕ ಈಗಾಗಲೇ ಸ್ಮಾರ್ಟ್‌ಬೋರ್ಡ್‌ ಹೊಂದಿರುವ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಐಐಐಟಿ ಸಹಯೋಗದಲ್ಲಿ ಮೂರು ತರಗತಿಯ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಿಂದ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಆನ್‌ಲೈನ್ ತರಗತಿಗಳ ಮೂಲಕ ಉಚಿತ ಮತ್ತು ನೇರವಾಗಿ ಲೈವ್ ಕ್ಲಾಸ್ ಮಾಡಲಾಗುತ್ತದೆ ಎಂದರು.

ಕಳೆದ ಸಾಲಿನಲ್ಲಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆಸಿದ ಬೇಸ್‌ಲೈನ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳು ಕಠಿಣವಾಗಿದ್ದು, ಈ ವಿಷಯಗಳ ಬೇಸಿಕ್ ಅಂಶಗಳು ತಿಳಿಯದಿರುವುದು ಕಂಡುಬಂದಿತ್ತು. ಈ ಸಮಸ್ಯೆಯ ಪರಿಹಾರ ಮತ್ತು ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವಿಶೇಷವಾಗಿ ಗ್ರಾಮೀಣ ಹಾಗೂ ಸ್ಲಂ ವ್ಯಾಪ್ತಿಗೆ ಒಳಪಡುವ ಪ್ರದೇಶದ ಶಾಲೆಗಳ ಮಕ್ಕಳಲ್ಲಿ ಕಠಿಣವೆನಿಸುವ ವಿಷಯಗಳ ಕುರಿತು ಅಗತ್ಯ ಜ್ಞಾನ, ತರಬೇತಿ ಮತ್ತು ಕಲಿಕೆ ರೂಢಿಗೊಳಿಸುವುದು ಮಹತ್ವದ್ದಾಗಿದೆ ಎಂದವರು ಹೇಳಿದರು.

ಶಿಕ್ಷಕರ ಸಮಸ್ಯೆಗೂ ಪರಿಹಾರ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ಮಿಷನ್ ವಿದ್ಯಾಕಾಶಿಯ ಕಾರ್ಯಕ್ರಮಗಳು ಮತ್ತು ಶಾಲಾ ಶಿಕ್ಷಣ ಇಲಾಖೆಯ ಯೋಜನೆಗಳನ್ನು ಯಶಸ್ವಿಯಾಗಿ ಜರುಗಿಸಬೇಕು ಎಂಬ ಸೂಚನೆ ನೀಡಿದ ಅವರು, ನಿರಂತರವಾಗಿ ಶಾಲೆಯಲ್ಲಿದ್ದು, ಮಕ್ಕಳಿಗೆ ನಿಯಮಾನುಸಾರ ಪಾಠ ಮಾಡಲು ಅನುಕೂಲವಾಗುವಂತೆ ಮತ್ತು ಆಡಳಿತಾತ್ಮಕವಾಗಿ ಆಗುತ್ತಿರುವ ಸಮಸ್ಯೆಗಳ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿಯೂ ತಿಳಿಸಿದರು. ನೌಕರಸ್ನೇಹಿ ಆಡಳಿತದ ಭಾಗವಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಮತ್ತೊಂದು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಸಾಧಕರಿಗೆ ಸನ್ಮಾನ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಸಾಧನೆ ಮಾಡಿರುವ ಸರ್ಕಾರಿ ಶಾಲೆಗಳಿಗೆ ಮತ್ತು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರ‍್ಯಾಂಕ್ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರ, ಮುಖ್ಯೋಪಾಧ್ಯಾಯರ ಸಭೆ ಜರುಗಿಸಿ, ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಧನೆಗೆ ಮಾರ್ಗದರ್ಶನ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚು ಆಯೋಜಿಸಬೇಕು. ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗಳಿಗೆ ಹಾಜರಾಗಿ ವೇಳಾಪಟ್ಟಿ ಅನುಸಾರ ವರ್ಗಗಳನ್ನು ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಿದರು.

ಐಐಐಟಿ ನಿರ್ದೇಶಕ ಪ್ರೊ. ಎಸ್.ಆರ್. ಮಹಾದೇವ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವಸುಬ್ರಹ್ಮಣ್ಯ ಎಸ್, ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಕುಲಸಚಿವ ಡಾ. ಮೂರುಗನಾಥಂ ಪೊನ್ನುಸ್ವಾಮಿ ವಂದಿಸಿದರು. ಡಾ. ರಾಜೇಶ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಯ 106 ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 50ಕ್ಕಿಂತ ಕಡಿಮೆಯಾಗಿದೆ. ಆರು ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಈ ಕುರಿತು ಶೈಕ್ಷಣಿಕ ತಂಡಗಳಿಂದ ಆಯಾ ಶಾಲೆಗಳಿಗೆ ಭೇಟಿ ನೀಡಿ, ಫಲಿತಾಂಶ ಕಡಿಮೆಯಾಗಲು ಕಾರಣ, ಅಲ್ಲಿನ ಸೌಲಭ್ಯಗಳ ಕುರಿತು ವಿವರ ಸಂಗ್ರಹಿಸಿದ್ದು, ಲೋಪ ಕಂಡು ಬಂದಲ್ಲಿ ನಿಯಮಾನುಸಾರ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ