ಸಂಡೂರು: ಪಟ್ಟಣದಲ್ಲಿ ಅಪೂರ್ಣಗೊಂಡಿರುವ ಅಂಜುಮನ್ ಶಾದಿಮಹಲ್ ನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ಒದಗಿಸಿ ಪೂರ್ಣಗೊಳಿಸಿ, ಮುಂಬರುವ ಮೇ ತಿಂಗಳಲ್ಲಿ ಶಾದಿ ಮಹಲ್ ನ್ನು ಉದ್ಘಾಟಿಸುವ ಕಾರ್ಯಕ್ರಮವನ್ನು ಇಟ್ಟುಕೊಳ್ಳೋಣ ಎಂದು ಸಂಸದ ತುಕಾರಾಂ ತಿಳಿಸಿದರು.
ಸಂಡೂರು ಕ್ಷೇತ್ರ ಸರ್ವ ಜನಾಂಗದ ಶಾಂತಿಯ ತೋಟ. ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಇದೆ. ಕ್ಷೇತ್ರದಲ್ಲಿ ಹಿಂದಿನಿಂದಲೂ ಈ ಸಂಸ್ಕಾರ ಹಾಗೂ ಸಂಪ್ರದಾಯ ಬೆಳೆದು ಬಂದಿದೆ. ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಗೆ ಕೇಂದ್ರದ ನವೋದಯ ಶಾಲೆ ಹಾಗೂ ತಾಲೂಕಿಗೆ ಕೇಂದ್ರದ ಏಕಲವ್ಯ ಶಾಲೆ ಮಂಜೂರಾಗಿದೆ. ನಿಡಗುರ್ತಿ ಬಳಿಯಲ್ಲಿ ₹೪೦ ಕೋಟಿ ವೆಚ್ಚದಲ್ಲಿ ಏಕಲವ್ಯ ಶಾಲೆ ನಿರ್ಮಿಸಲಾಗುವುದು. ಸಂಸದರ ಅನುದಾನದಲ್ಲಿ ಮಹಿಳೆಯರಿಗೆ ಕೆಎಎಸ್, ಐಎಎಸ್ ಕೋಚಿಂಗ್ ಕೊಡಿಸಲಾಗವುದು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಮಾಜಿ ಶಾಸಕ ಸಿರಾಜ್ ಶೇಖ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಲ ಕಾರಣಗಳಿಂದ ಅಂಜುಮನ್ ಶಾದಿಮಹಲ್ ಅಪೂರ್ಣವಾಗಿದೆ. ಈಗಾಗಲೇ ಶಾದಿ ಮಹಲ್‌ಗೆ ಸುಮಾರು ಒಂದು ಕೋಟಿಯಷ್ಟು ಖರ್ಚಾಗಿದೆ. ಸಂಸದರು ಶಾಸಕರಾಗಿದ್ದಾಗ, ಶಾದಿ ಮಹಲ್‌ಗೆ ₹೨೫ ಲಕ್ಷ ಅನುದಾನ ಒದಗಿಸಿದ್ದಾರೆ. ಮುಸ್ಲಿಂ ಮುಖಂಡರು ಹಾಗೂ ಇಲ್ಲಿನ ಕೆಲವು ಕಂಪನಿಗಳವರು ಶಾದಿಮಹಲ್ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಶಾದಿ ಮಹಲ್ ಪೂರ್ಣಗೊಳಿಸಲು ಈಗ ಆಗಿರುವ ಖರ್ಚಿನಷ್ಟೇ ಹಣ ಬೇಕಾಗಬಹುದು. ಕ್ಷೇತ್ರದಲ್ಲಿ ೩೫ ಸಾವಿರ ಅಲ್ಪ ಸಂಖ್ಯಾತರ ಮತಗಳಿವೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಯಾವಾಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಎಸ್.ಸಿರಾಜ್ ಹುಸೇನ್ ಶಾದಿಮಹಲ್ ನಿರ್ಮಾಣಕ್ಕೆ ₹೭ ಲಕ್ಷ ಧನ ಸಹಾಯವನ್ನು ಚೆಕ್ ಮೂಲಕ ನೀಡಿದರು.
ಮುಖಂಡರಾದ ಜಮೀರ್‌ಸಾಬ್, ಜಿಲಾನ್‌ಸಾಬ್, ಶಫಿವುಲ್ಲಾ, ಟಿ. ಖಾಸಿಂಪೀರ, ಫಾರುಕ್ ಅಹಮ್ಮದ್, ಫಾರುಕ್, ನೇಮಗಲ್ ರಾಮಕೃಷ್ಣ, ಹಾಲಪ್ಪ ಉಪಸ್ಥಿತರಿದ್ದರು.