- ತರೀಕೆರೆಯಲ್ಲಿ ನೂತನವಾಗಿ ನಿರ್ಮಿಸಲಿರುವ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಅನುಕೂಲವಾಗುವಂತೆ ಹೆಚ್ಚು ಗ್ರಾಮೀಣ ಬಸ್ ಗಳ ಸಂಚಾರಕ್ಕೆ ಕ್ರಮ ವಹಿಸಲಾಗುವುದು ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬುಧವಾರ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ವಿಭಾಗದ ತರೀಕೆರೆ ಪಟ್ಟಣದ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣ ಆವರಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಶಕ್ತಿ ಯೋಜನೆಯಿಂದ ಒಂದು ಕೋಟಿ ಮಹಿಳೆಯರು ಕೆಎಸ್.ಆರ್.ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದಾರೆ. ಪ್ರತಿನಿತ್ಯ ಬೆಂಗಳೂರಿನಲ್ಲಿ 4 ಲಕ್ಷ ಮಹಿಳೆಯರು ಬಿಎಂಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದಾರೆ. ನಿಗಮಕ್ಕೆ ಹೊಸದಾಗಿ 2000 ಬಸ್ ಗಳನ್ನು ಖರೀದಿಸಲಾಗುತ್ತಿದೆ. ಮಹಿಳೆಯರು ಸಂಚರಿಸಲು ಆದಷ್ಟು ಶೀಘ್ರದಲ್ಲಿ ಗ್ರಾಮೀಣ ಬಸ್ ಗಳ ಸಂಚಾರಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ತರೀಕೆರೆ ಪಟ್ಟಣದಲ್ಲಿ ಆಧುನಿಕವಾದ ನೂತನ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಮತ್ತು ಡಿಪೋ ಸ್ಥಾಪಿಸಲಾಗುವುದು. ಈ ಎ.ಆರ್.ಟಿ.ಒ.ಕಚೇರಿಗೆ ಸ್ಥಳ ನೀಡಿದರೆ, ನೂತನ ಕಚೇರಿ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಶಾಸಕ ಜಿ.ಎಚ್.ಶ್ರೀನಿವಾಸ್ ಪಟ್ಟಣದ ಬಹಳ ವರ್ಷಗಳ ಕನಸನ್ನು ನನಸು ಮಾಡುತ್ತಿದ್ದಾರೆ. ಪಟ್ಟಣದಲ್ಲಿ ರಸ್ತೆ ನಿರ್ಮಾಣ, ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಮತ್ತು ಡಿಪೋ ಕ್ರೀಡಾಂಗಣ, ಪುರಸಭೆ ನೂತನ ಕಟ್ಟಡ ಇತ್ಯಾದಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪಟ್ಟಣದಲ್ಲಿ ₹9.15 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ಸಂತೋಷ ತಂದಿದೆ. ಸಚಿವ ಭೈರತಿ ಸುರೇಶ್ ಅವರು ಪಟ್ಟಣದ ರಸ್ತೆ ನಿರ್ಮಾಣಕ್ಕೆ ₹5 ಕೋಟಿ ಅನುದಾನ, ಕೆ.ಎಸ್.ಆರ್.ಟಿ.ಸಿ ನಿಲ್ದಾಣ ಮತ್ತು ಡಿಪೋ ಸ್ಥಾಪನೆಗೂ ಅನುದಾನ ನೀಡಿದ್ದಾರೆ. ಅವರಿಗೆ ಧನ್ಯವಾದಗಳು, ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ನೀಡಿರುವ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನರ ತಲಾ ಆದಾಯ ಹೆಚ್ಚಾಗಿದೆ ಎಂದು ಹೇಳಿದರು.ಪಟ್ಟಣದಲ್ಲಿ ₹8 ಕೋಟಿ ವೆಚ್ಚದಲ್ಲಿ ನೂತನ ಪುರಸಭಾ ಕಟ್ಟಡ ನಿರ್ಮಾಣವಾಗಲಿದೆ. ಪಟ್ಚಣದಲ್ಲಿ ₹1 ಕೋಟಿ ಗಳಲ್ಲಿ ರಂಗ ಮಂದಿರ ನಿರ್ಮಿಸಲಾಗುವುದು. ಸಚಿವ ರಾಮಲಿಂಗಾರೆಡ್ಡಿ ಅವರು ಈ ಹಿಂದೆ ತರೀಕೆರೆ ತಾಲೂಕಿಗೆ ಎ.ಆರ್.ಟಿ.ಒ.ಕಚೇರಿ ಕೊಟ್ಟಿದ್ದಾರೆ, ಗ್ರಾಮೀಣ ಪ್ರದೇಶಗಳಿಂದ ಮಹಿಳೆಯರು ಮತ್ತು ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಂಚರಿಸಲು ಅನುಕೂಲವಾಗುವ ಹಾಗೆ ತಾಲೂಕಿಗೆ ಹೆಚ್ಚು ಗ್ರಾಮೀಣ ಬಸ್ಸುಗಳನ್ನು ಮಂಜೂರು ಮಾಡಬೇಕು. ಶಿವಪುರ, ಬೆಟ್ಟದಹಳ್ಳಿ ಮತ್ತು ತಾಲೂಕಿನ ಮತ್ತಿತರ ಕಡೆಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ಪಟ್ಟಣದಲ್ಲಿ ₹56 ಕೋಟಿ ಗಳಲ್ಲಿ ಎನ್. ಎಚ್.ರಸ್ತೆ ನಿರ್ಮಾಣವಾಗುತ್ತಿದೆ. ಇದೀಗ ಕೆಎಸ್.ಆರ್.ಟಿಸಿ ಬಸ್ ನಿಲ್ಣಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಇದರಿಂದ ತರೀಕೆರೆ ಪಟ್ಟಣ ಬಹಳ ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಪುರಸಭೆ ಸದಸ್ಯರು, ಜಿ.ಪಂ.ಮಾಜಿ ಅಧ್ಯಕ್ಷ ಹೆಚ್.ವಿಶ್ವನಾಥ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ರಮೇಶ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಟಿ.ಎನ್.ಜಗದೀಶ್, ಚಿಕ್ಕಮಗಳೂರು ವಿಭಾಗದ ಸಹಾಯಕ ಲೆಕ್ಕಾಧಿಕಾರಿ ಕೆ.ಎ.ಜಯಣ್ಣ ಮತ್ತಿತರರು ಭಾಗವಹಿಸಿದ್ದರು.ನೂತನ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಕಾಮಗಾರಿ ಮುಗಿದ ನಂತರ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ಹೆಸರು ನಾಮಕರಣ ಮಾಡಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ, ಸದಸ್ಯರು, ಮುಖಂಡರು ಹಾಗೂ ನಾಗರಿಕರು,ವಿವಿಧ ಸಂಘ ಸಂಸ್ಥೆಗಳಿಂದ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.--
24ಕೆಟಿಆರ್.ಕೆ.6ಃ ತರೀಕೆರೆಯಲ್ಲಿ ಚಿಕ್ಕಮಗಳೂರು ವಿಭಾಗದ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕೆ.ಎಸ್.ಆರ್.ಟಿ..ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಎಚ್.ಯು.ಫಾರೂಕ್, ಟಿ.ಎಸ್.ಪ್ರಕಾಶ್ ವರ್ಮ, ಎಚ್.ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.