ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಕರಡಹಳ್ಳಿಯಲ್ಲಿ ನೂತನ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ತಾಲೂಕಿನಲ್ಲಿ ಹೈನುಗಾರಿಕೆಯನ್ನೇ ಅವಲಂಬಿಸಿರುವ ಬಹುತೇಕ ಗ್ರಾಮಗಳ ಪೈಕಿ ಕರಡಹಳ್ಳಿಯೂ ಒಂದು. ಅತಿ ಹೆಚ್ಚು ಜಾನುವಾರುಗಳಿರುವುದರಿಂದ ಇಲ್ಲಿ ಪಶು ಆಸ್ಪತ್ರೆ ತೆರೆಯಬೇಕೆಂಬುದು ಬಹುವರ್ಷಗಳ ಬೇಡಿಕೆಯಾಗಿತ್ತು. ನಾನು ಕೊಟ್ಟ ಭರವಸೆಯಂತೆ ಪಶು ಚಿಕಿತ್ಸಾಲಯವನ್ನು ಮಂಜೂರು ಮಾಡಿಸಿ ಉದ್ಘಾಟಿಸಿದ್ದೇನೆ ಎಂದರು.
ನಾನು ಕೃಷಿ ಸಚಿವನಾದ ನಂತರ ತಾಲೂಕಿನ ಮಾಯಿಗೋನಹಳ್ಳಿ, ಹೊನ್ನೇನಹಳ್ಳಿ ಮತ್ತು ಕರಡಹಳ್ಳಿ ಗ್ರಾಮಗಳಿಗೆ ಪಶು ಚಿಕಿತ್ಸಾಲಯವನ್ನು ಮಂಜೂರು ಮಾಡಿಸಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ನಾನು ಸೋತಾಗ ಐದು ವರ್ಷದಲ್ಲಿ ಯಾವುದಾದರೊಂದು ಗ್ರಾಮಕ್ಕೆ ಪಶು ಆಸ್ಪತ್ರೆ ಮಂಜೂರಾಗಿದ್ದರೆ ಅಥವಾ ತಾಲೂಕಿನ ಜನರಿಗೆ ಉಪಯೋಗವಾಗುವಂತಹ ಯಾವುದೇ ಅಭಿವೃದ್ಧಿ ಕೆಲಸಗಳಾಗಿದ್ದರೆ ತಿಳಿಸಿ ಎಂದರು.ವಿರೋಧಿಗಳು ಗೆದ್ದು ಕೆಲಸ ಮಾಡದಿದ್ದರೂ ಕೇಳಲ್ಲ:
ರಾಜ್ಯದ ಜನರ ಹಿತದೃಷ್ಟಿಯಿಂದ ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದೆ. ಈ ಹಿಂದೆ ಅಧಿಕಾರ ನಡೆಸಿದ ಸರ್ಕಾರಗಳು ಇಂತಹ ಜನಪರ ಯೋಜನೆಗಳನ್ನು ಏಕೆ ಕೊಡಲಿಲ್ಲ. ನಾನು ಶಾಸಕನಾಗಿರಲಿ, ಮಂತ್ರಿಯಾಗಿರಲಿ, ತಾಲೂಕು ಮತ್ತು ಜಿಲ್ಲೆಯ ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ಮಾಡುವ ಒಟ್ಟಾರೆ ಕೆಲಸಗಳನ್ನು ನೋಡಬೇಕೇ ವಿನಃ ಪ್ರತಿ ಕುಟುಂಬ ಮತ್ತು ವ್ಯಕ್ತಿಗೆ ಏನಾಯಿತು ಎಂದರೆ ನನಗೆ ಬಹಳ ಕಷ್ಟ ಮತ್ತು ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿರುದ್ಯೋಗಿ ಯುವಕರಿಗೆ ವಾಹನ ಚಾಲನಾ ತರಬೇತಿ ಕೊಡಿಸುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಡಬೇಕೆಂಬ ಉದ್ದೇಶದಿಂದ ತಾಲೂಕಿನ ಮಣ್ಣಹಳ್ಳಿ ಸಮೀಪ 6.98 ಕೋಟಿ ವೆಚ್ಚದಲ್ಲಿ ದೊಡ್ಡ ಪ್ರಮಾಣದ ವಾಹನ ಚಾಲನಾ ತರಬೇತಿ ಕೇಂದ್ರ ಮಂಜೂರು ಮಾಡಿಸಿದ್ದು, ಶೀಘ್ರದಲ್ಲಿಯೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮನ್ಮುಲ್ ನಿರ್ದೇಶಕ ಅಪ್ಪಾಜಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಸುರೇಶ್, ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ಡಾ.ಹರ್ಷ, ತಾಪಂ ಸಹಾಯಕ ನಿರ್ದೇಶಕಿ ಮೇನಕಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ್, ಗ್ರಾಪಂ ಅಧ್ಯಕ್ಷೆ ಸಾಕಮ್ಮ, ಸದಸ್ಯ ಸಿಂಗಾರಿಗೌಡ, ಮುಖಂಡರಾದ ಡಿ.ಎಚ್.ರಾಮೇಗೌಡ, ಕೆ.ಆರ್. ದಯಾನಂದ್, ಕೆ.ಎಸ್.ರವೀಂದ್ರ, ಎಸ್.ಗೋವಿಂದಯ್ಯ, ವೆಂಕಟೇಶ್, ಜಯಬೋರೇಗೌಡ, ರಾಮಣ್ಣ, ಟಿ.ನಂದೀಶ್, ಕೆ.ಎಂ.ರಾಮು ಸೇರಿದಂತೆ ಹಲವರು ಇದ್ದರು.