ಹಳೇ ಪಿಂಚಣಿ ಮರು ಜಾರಿಗೆ ಕ್ರಮ : ಸಿಎಂ

KannadaprabhaNewsNetwork |  
Published : Mar 01, 2026, 02:15 AM IST
Karnataka Govt

ಸಾರಾಂಶ

ಹಳೇ ಪಿಂಚಣಿ ಯೋಜನೆ (ಒಪಿಎಸ್‌) ಮರು ಜಾರಿಗೆ ಸಂಬಂಧಿಸಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮ್ಮೇಳನ

  ಬೆಂಗಳೂರು :  ಹಳೇ ಪಿಂಚಣಿ ಯೋಜನೆ (ಒಪಿಎಸ್‌) ಮರು ಜಾರಿಗೆ ಸಂಬಂಧಿಸಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಮತ್ತು ಸುವರ್ಣೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಿಕ್ಷಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಹಂತಹಂತವಾಗಿ ಅವನ್ನು ಈಡೇರಿಸಲಾಗುವುದು. ನಾನು ಮೊದಲ ಬಾರಿ ಹಣಕಾಸು ಸಚಿವನಾದಾಗ 5 ವರ್ಷಗಳಲ್ಲಿ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದ್ದು, ಅದನ್ನು ನಿವಾರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಶಿಕ್ಷಕರ ವೇತನ ಹೆಚ್ಚಳಕ್ಕಾಗಿ ಆರು ಮತ್ತು ಏಳನೇ ವೇತನ ಆಯೋಗದ ಶಿಫಾರಸು ಯಾವುದೇ ಬದಲಾವಣೆಯಿಲ್ಲದೆ ಅನುಷ್ಠಾನಗೊಳಿಸಿದ್ದೇವೆ. ಅದೇ ರೀತಿ ಶಿಕ್ಷಕರ ಬಹುಮುಖ್ಯ ಬೇಡಿಕೆಯಾದ ಒಪಿಎಸ್‌ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಅದರೊಂದಿಗೆ ಪದವಿ ಪೂರ್ಣಗೊಳಿಸಿದ 40 ಸಾವಿರಕ್ಕೂ ಹೆಚ್ಚಿನ ಶಿಕ್ಷಕರಿಗೆ ಒಂದು ವೇತನ ಬಡ್ತಿ ನೀಡುವ ಕುರಿತಂತೆಯೂ ಚರ್ಚಿಸಲಾಗುವುದು ಎಂದರು.

ಭವಿಷ್ಯ ರೂಪಿಸುವವರು:

ಶಿಕ್ಷಕರು ದೇಶದ ಭವಿಷ್ಯ ರೂಪಿಸುವವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತಾ ಪ್ರಮಾಣ ಶೇ.12ರಿಂದ 15ರಷ್ಟಿತ್ತು. ಈಗ ಅದು ಶೇ.74ರಷ್ಟಿದೆ. ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಬೇಕಿದ್ದು, ಅದರ ಗುಣಮಟ್ಟ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ದೊರೆಯುತ್ತಿದೆಯೇ ಎಂಬುದನ್ನು ತಿಳಿಯಬೇಕು. ನಮ್ಮಲ್ಲಿ ಜಾತಿ ವ್ಯವಸ್ಥೆ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿದ್ದು, ಅದು ಶಿಕ್ಷಣದಲ್ಲಿ ನಿರೀಕ್ಷಿಸಿದಷ್ಟು ಬದಲಾವಣೆ ಮಾಡಲು ಸಾಧ್ಯವಾಗದಂತೆ ಮಾಡಿದೆ. ಹೀಗಾಗಿ ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ದೊರೆಯುವಂತೆ ಮಾಡಬೇಕಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಮೌಢ್ಯ, ಕಂದಾಚಾರಗಳಿಂದ ಸಮಾಜ ಕೂಡಿದ್ದು, ಅವುಗಳನ್ನು ದೂರ ಮಾಡುವ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಹೇಳಿದರು.

ಸಂಘದ ಕಚೇರಿಗೆ ಬೆಂಗಳೂರಿನಲ್ಲಿ ನಿವೇಶನ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ 55 ವರ್ಷ ಪೂರ್ಣಗೊಂಡಿದೆ. ಸಂಘದ ಕಾರ್ಯನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಿಸಲು ನಿವೇಶನ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಅದನ್ನು ಈಡೇರಿಸುವ ಭರವಸೆ ನೀಡುತ್ತಿದ್ದು, ಸಂಘದ ಕಟ್ಟಡಕ್ಕೆ ಜಿಬಿಎ ಅಥವಾ ಬಿಡಿಎ ಅಡಿಯಲ್ಲಿನ ನಿವೇಶನ ನೀಡಲಾಗುವುದು. ನಿವೇಶನ ನಿಗದಿಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.

ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವುದಕ್ಕಾಗಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಡಿ ಶಾಲೆಗಳ ಅಭಿವೃದ್ಧಿಗೆ ನೀತಿ ರೂಪಿಸಲಾಗಿದೆ. ಅದರಂತೆ 8ರಿಂದ 10 ಸಾವಿರ ಕೋಟಿ ರು. ಸಿಎಸ್‌ಆರ್‌ ನಿಧಿಯ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಲಾಗುವುದು. ಮಕ್ಕಳು ಶಿಕ್ಷಣಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ಬರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕಾರ್ಪೋರೇಟ್‌ ಸಂಸ್ಥೆಗಳು ತಮ್ಮ ಸಿಎಸ್‌ಆರ್‌ ನಿಧಿ ಅಡಿ ಶಾಲೆಗಳ ಅಭಿವೃದ್ಧಿ ಹಾಗೂ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅಲ್ಲಿಗೆ ಶಿಕ್ಷಕರನ್ನು ನೇಮಿಸುವಂತೆ ಸೂಚಿಸಿದ್ದೇವೆ. ಆ ಮೂಲಕ 90 ಸಾವಿರ ಶಿಕ್ಷಕ ಹುದ್ದೆ ಭರ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಶಿಕ್ಷಕರು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಕೆಲಸದಿಂದ ಕೈಬಿಡುವಂತೆ ಕೇಳುತ್ತಿದ್ದಾರೆ. ಆದರೆ, ಈಗ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾಕಷ್ಟು ಲೋಪಗಳಾಗುತ್ತಿವೆ. ಒಂದು ಮನೆಯಲ್ಲಿ ನಾಲ್ಕು ಮತದಾರರಿದ್ದರೆ ಅವರಲ್ಲಿ ಒಬ್ಬರನ್ನು ಒಂದು ಬೂತ್‌ಗೆ, ಉಳಿದವರನ್ನು ಬೇರೆ ಬೂತ್‌ನ ಪಟ್ಟಿಗೆ ಸೇರಿಸಲಾಗುತ್ತಿದೆ. ಶಿಕ್ಷಕರಿದ್ದರೆ ಆ ಕೆಲಸ ನ್ಯಾಯವಾಗಿ ನಡೆಯುತ್ತದೆ. ಹೀಗಾಗಿ ಶಿಕ್ಷಕರು ಬಿಎಲ್‌ಒಗಳಾಗಿ ಕೆಲಸ ಮುಂದುವರಿಸಬೇಕು ಎಂದು ಹೇಳಿದರು.

ಸಚಿವ ಮಧು ಬಂಗಾರಪ್ಪ, ವಿಧಾನಪರಿಷತ್‌ ಸದಸ್ಯರಾದ ಪುಟ್ಟಣ್ಣ, ರಾಮೋಜಿ ಗೌಡ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಇತರರಿದ್ದರು.

27 ಬೇಡಿಕೆ ಮುಂದಿಟ್ಟ ಸಂಘ

ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು 27 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿತು. ಪ್ರಮುಖವಾಗಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲಾ ಸಹಶಿಕ್ಷಕರಾಗಿ ಬಡ್ತಿ, ಪದವಿ ಹೊಂದಿದ ಶಾಲಾ ಶಿಕ್ಷಕರಿಗೆ ವೇತನ ಬಡ್ತಿ, ಶಾಲೆಗಳಲ್ಲಿ ನಲಿ-ಕಲಿ ಪದ್ಧತಿ ರದ್ದತಿ, ನೂತನ ಪಿಂಚಣಿ ಯೋಜನೆ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿ, ಹಿಂದುಳಿದ ನೌಕರರ ವಾರ್ಷಿಕ ಆದಾಯ ಮಿತಿ 8 ಲಕ್ಷ ರು.ನಿಂದ 15 ಲಕ್ಷ ರು.ಗೆ ಹೆಚ್ಚಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ ಮಂಡಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕರಾಯ ದೇವಳಕ್ಕೆ ನೂತನ ಬ್ರಹ್ಮರಥ ಪುರಪ್ರವೇಶ
11 ಕೋಟಿ ರು. ವೆಚ್ಚದಲ್ಲಿ ಕೈಗಾರಿಕಾ ಪ್ರದೇಶ ಹೆದ್ದಾರಿ ಸಂಪರ್ಕ ರಸ್ತೆ ಅಭಿವೃದ್ಧಿ