ಜಿಬಿಎ ಪಾಲಿಕೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಮತದಾನಕ್ಕೆ ತೊಂದರೆ ಆಗದಂತೆ ಕ್ರಮ: ಸುನೀಲ್ ಕುಮಾರ್‌

KannadaprabhaNewsNetwork |  
Published : Feb 09, 2026, 04:15 AM IST
ಪಿ. ಸುನೀಲ್ ಕುಮಾರ್ | Kannada Prabha

ಸಾರಾಂಶ

ಜಿಬಿಎ ಪಾಲಿಕೆಗಳ ಚುನಾವಣೆಯನ್ನು ಇವಿಎಂ ಬದಲಾಗಿ ಮತ ಪತ್ರಗಳನ್ನು ಬಳಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮತದಾರರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಾರೆ ಎಂದು ಉತ್ತರ ಪಾಲಿಕೆ ಆಯುಕ್ತ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಿಬಿಎ ಪಾಲಿಕೆಗಳ ಚುನಾವಣೆಯನ್ನು ಇವಿಎಂ ಬದಲಾಗಿ ಮತ ಪತ್ರಗಳನ್ನು ಬಳಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮತದಾರರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಾರೆ ಎಂದು ಉತ್ತರ ಪಾಲಿಕೆ ಆಯುಕ್ತ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉತ್ತರ ನಗರ ಪಾಲಿಕೆಯ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ- 2025 ಹಾಗೂ ಜಿಬಿಎ ಚುನಾವಣೆ-2026ರ ಮತದಾರರ ಪಟ್ಟಿಯ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಇವಿಎಂಗಿಂತ ಮತಪತ್ರಗಳ ಮೂಲಕ ನಡೆಯುವ ಮತದಾನ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಮತದಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಎಲ್ಲ ಅಧಿಕಾರಿಗಳು, ರಾಜಕೀಯ ಪಕ್ಷಗಳ ಬೂತ್ ಲೆವೆಲ್ ಏಜೆಂಟ್‌ಗಳ ಜೊತೆ ಚುನಾವಣಾ ಆಯೋಗದ ನಿರ್ದೇಶನದಂತೆ ಸಮನ್ವಯ ಸಾಧಿಸಬೇಕು. ಮತದಾರರು, ರಾಜಕೀಯ ಪಕ್ಷಗಳು, ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಎಂದು ಆಯುಕ್ತರು ಸಲಹೆ ನೀಡಿದರು.

ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ:

ಎಲ್ಲ ರಾಜಕೀಯ ಪಕ್ಷಗಳನ್ನು ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದಾರೆ. ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಯಾವುದೇ ಆಕ್ಷೇಪ, ಸಮಸ್ಯೆಗಳಿದ್ದರೂ ಪರಿಹರಿಸುತ್ತಾರೆ. ರಾಜಕೀಯ ಪಕ್ಷಗಳು ಕೂಡ ಸಮನ್ವಯತೆಯಿಂದ ಅಧಿಕಾರಿಗಳೊಂದಿಗೆ ಸಹಕರಿಸಿದಲ್ಲಿ ಪಾರದರ್ಶಕ ಚುನಾವಣೆ ನಡೆಸಲು ಸುಲಭವಾಗುತ್ತದೆ ಎಂದು ಸುನೀಲ್ ಕುಮಾರ್ ಅಭಿಪ್ರಾಯಪಟ್ಟರು.

ಮತದಾರರು ಎರಡೆರಡು ವಾರ್ಡ್‌ಗಳಲ್ಲಿ ಮತದಾನ ಮಾಡದಂತೆ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೂ ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿನ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಎಲ್ಲ ಮತದಾರರ ನೋಂದಣಾಧಿಕಾರಿಗಳು ವಿಭಾಗ ಮಟ್ಟದಲ್ಲಿ ಸಭೆ ನಡೆಸಿ, ರಾಜಕೀಯ ಪಕ್ಷಗಳು ನೀಡುವ ಆಕ್ಷೇಪಣೆಗಳನ್ನು ಪರಿಹರಿಸುವ ಕುರಿತು ಗಮನಹರಿಸಬೇಕು ಎಂದು ಆಯುಕ್ತರು ಹೇಳಿದರು.

ಪೂರ್ಣ ಪ್ರಮಾಣದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಕೂಡ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳ ಮ್ಯಾಪಿಂಗ್ ಪ್ರಕ್ರಿಯೆ ಕಡಿಮೆಯಿದೆ. ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಉತ್ತರ ವ್ಯಾಪ್ತಿಯ ಸಾಧನೆ ಉತ್ತಮವಾಗಿದೆ. ನಗರ ಪ್ರದೇಶಗಳಲ್ಲಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದಾಗ ಜನರು ಸಿಗದ ಪರಿಸ್ಥಿತಿ ಇದೆ. ಈ ಕುರಿತು ವಾರಾಂತ್ಯದಲ್ಲಿ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಆಯುಕ್ತ ಸುನೀಲ್ ಕುಮಾರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಟ್ಟಣದ ನೈರ್ಮಲ್ಯ ಕಾಪಾಡುವುದು ಎಲ್ಲರ ಕರ್ತವ್ಯ
ಜಾತ್ರೆಗಳು ಸಾಂಸ್ಕತಿಕ ಭಾವೈಕ್ಯತೆಯ ಸಂಕೇತ: ಡಾ. ಕೊಟ್ಟೂರು ಸ್ವಾಮೀಜಿ