- ಹಳೆ ಕುಂದುವಾಡ ಅಲಿ ದೇವರ ಕಳವು ಪ್ರಕರಣ ಸುಖಾಂತ್ಯ - ಕಳ್ಳರ ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಪೊಲೀಸರಿಗೆ ಆಗ್ರಹ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕಳೆದ ವಾರ ಮಸೀದಿಯೊಂದರ ಬಾಗಿಲು ಒಡೆದು, ಪೆಟ್ಟಿಗೆಯಲ್ಲಿ ಇಟ್ಟಿದ್ದ ಅಲಿ ದೇವರ ವಿಗ್ರಹವನ್ನು ಕಿಡಿಗೇಡಿಗಳು ಕಳವು ಮಾಡಿದ್ದರು. ಈಗ ಕದ್ದಿದ್ದ ವಿಗ್ರಹವನ್ನು ನಿರ್ಜನ ಪ್ರದೇಶದ ರಸ್ತೆ ಪಕ್ಕ ಬಿಸಾಡಿ, ಖಾರದ ಪುಡಿ ಎರಚಿರುವುದು ನಗರದ ಹೊರ ವಲಯದ ಹಳೇ ಕುಂದುವಾಡ ಗ್ರಾಮದಲ್ಲಿ ಮಂಗಳವಾರ ಪತ್ತೆಯಾಗಿದೆ.
ಮೊಹರಂ ಹಬ್ಬದ ಸಿದ್ಧತೆಯಲ್ಲಿದ್ದ ಗ್ರಾಮದಲ್ಲಿ ಭಾವೈಕ್ಯತೆ ಸಂಕೇತವಾಗಿದ್ದ ಅಲಿ ದೇವರ ವಿಗ್ರಹ ಹಾಗೂ ಇತರೆ ವಸ್ತುಗಳನ್ನು ಕಳೆದ ವಾರ ಕಳ್ಳರು ಕಳವು ಮಾಡಿದ್ದರು. ಪವಾಡಗಳಿಗೆ ಸಾಕ್ಷಿಯಾಗಿದ್ದ ಇಲ್ಲಿಯ ಅಲಿ ದೇವರ ವಿಗ್ರಹ ಕಳುವಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಪವಾಡದ ಅಲಿ ದೇವರನ್ನು ಕದ್ದವರಿಗೆ ಅದಾಗುತ್ತದೆ, ಹೀಗಾಗುತ್ತದೆಂಬ ಸುದ್ದಿಗಳೂ ಎಲ್ಲೆಡೆ ಕೇಳಿ ಬರುತ್ತಿದ್ದವು. ಸೋಷಿಯಲ್ ಮೀಡಿಯಾಗಳಲ್ಲೂ ಇದೇ ಸುದ್ದಿ ಹರಿದಾಡಿತ್ತು. ಅಲಿ ದೇವರ ವಸ್ತುಗಳನ್ನು ಕದ್ದಿದ್ದ ಕಳ್ಳರು ಇದನ್ನೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಗಮನಿಸುತ್ತಿದ್ದರೋ ಅಥವಾ ದೇವರ ಮೇಲಿನ ಭಯಕ್ಕೋ ಗೊತ್ತಿಲ್ಲ, ಕಳವು ಮಾಡಿದ್ದ ವಸ್ತುಗಳನ್ನು ಸೋಮವಾರ ಹಳೆ ಕುಂದುವಾಡ ಬಳಿ ನಿರ್ಜನ ರಸ್ತೆ ಪಕ್ಕದಲ್ಲಿ ಬಿಸಾಡಿದ್ದಾರೆ. ಅಲ್ಲದೆ, ಕಳವಿನ ಸಾಕ್ಷ್ಯ ಸಿಗಬಾರದೆಂದು ವಸ್ತುಗಳ ಮೇಲೆ ಖಾರದ ಪುಡಿ ಎರಚಿದ್ದಾರೆ. ಬೆಳಗ್ಗೆ ದೇವರ ವಸ್ತುಗಳು ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ವಿದ್ಯಾನಗರ ಪೊಲೀಸರು ಸ್ಥಳ ಪರಿಶೀಲಿಸಿದರು. ಇದೇ ವೇಳೆ ಗ್ರಾಮಸ್ಥರು ಅಲಿ ದೇವರನ್ನು ಕದ್ದ ಕಳ್ಳರನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು.ಇನ್ನೊಂದು ವಾರದಲ್ಲೇ ಮೊಹರಂ ಹಬ್ಬವಿದೆ. ಈ ಹಿನ್ನೆಲೆ ಪೋಲಿಸರು ಬೇಗ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ, ವಿಗ್ರಹಗಳನ್ನು ಮುಸ್ಲಿಂ ಮುಖಂಡರಿಗೆ ಹಸ್ತಾಂತರಿಸಿದರು. ಈಗ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
- - - - - -9ಕೆಡಿವಿಜಿ11, 12, 13:ದಾವಣಗೆರೆ ಹೊರ ವಲಯದ ಹಳೆ ಕುಂದುವಾಡ ಗ್ರಾಮದಲ್ಲಿ ಕಳೆದ ವಾರ ಕದ್ದಿದ್ದ ಅಲಿ ದೇವರ ವಿಗ್ರಹವನ್ನು ರಸ್ತೆಯ ಪಕ್ಕ ಬಿಸಾಡಿ, ಅದರ ಮೇಲೆ ಕಾರದ ಪುಡಿ ಎರಚಿ ಹೋಗಿದ್ದ ಸ್ಥಳದಲ್ಲಿ ವಿದ್ಯಾನಗರ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಹಾಜರಿದ್ದರು.