ಕಳವಾಗಿದ್ದ ಹಾಲಿನ ಕ್ಯಾಂಟರ್ ಕಲಬುರ್ಗಿಯಲ್ಲಿ ಪತ್ತೆ, ಕಳ್ಳನ ಸೆರೆ

KannadaprabhaNewsNetwork |  
Published : Nov 20, 2023, 12:45 AM IST
ಫೋಟೋ 19 ಹೆಚ್‌ಎಸ್‌ಕೆ 3  ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ದೊಡ್ಡ ಹುಲ್ಲೂರು ಗ್ರಾಮದಲ್ಲಿ ಕಳವಾಗಿದ್ದ ಕ್ಯಾಂಟರ್ ವಾಹನ ಹಾಗೂ ಹಾಲಿನ ಕ್ಯಾನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. | Kannada Prabha

ಸಾರಾಂಶ

ಹೊಸಕೋಟೆ: ಹಳ್ಳಿಗಳಲ್ಲಿ ದಿನನಿತ್ಯ ಡೈರಿಯಲ್ಲಿ ಹಾಲು ತುಂಬಿಕೊಂಡು ಹೋಗುವ ಕ್ಯಾಂಟರನ್ನು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಹೊಸಕೋಟೆ ಪೊಲೀಸರು ಗುಲ್ಬರ್ಗದಲ್ಲಿ ಬಂಧಿಸಿದ್ದಾರೆ.

ಹೊಸಕೋಟೆ: ಹಳ್ಳಿಗಳಲ್ಲಿ ದಿನನಿತ್ಯ ಡೈರಿಯಲ್ಲಿ ಹಾಲು ತುಂಬಿಕೊಂಡು ಹೋಗುವ ಕ್ಯಾಂಟರನ್ನು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಹೊಸಕೋಟೆ ಪೊಲೀಸರು ಗುಲ್ಬರ್ಗದಲ್ಲಿ ಬಂಧಿಸಿದ್ದಾರೆ.ತಾಲೂಕಿನ ದೊಡ್ಡಹುಲ್ಲೂರು ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಹಾಲಿನ ಕ್ಯಾಂಟರನ್ನು ಕ್ಯಾನ್‌ಗಳ ಸಮೇತ ಕಳವು ಮಾಡಿದ್ದ ಆರೋಪಿ ಗುಲ್ಬರ್ಗ ಜಿಲ್ಲೆಯ ಶಹಪುರ ಮೂಲದ ಪ್ರಶಾಂತ್. ಈತ ಕೆಟ್ಟ ಚಟಗಳಿಗೆ ಹಣ ಸಂಪಾದಿಸಲು ಡ್ರೈವರ್ ವೃತ್ತಿಯನ್ನು ಬಳಸಿಕೊಂಡಿದ್ದ ಎನ್ನಲಾಗಿದೆ. ದೊಡ್ಡ ಹುಲ್ಲೂರು ಗ್ರಾಮದಲ್ಲಿ ತನಗೆ ಪರಿಚಯವಿದ್ದವರ ಬಳಿ ಡ್ರೈವಿಂಗ್ ಕೆಲಸ ಮಾಡುವುದಾಗಿ ನಂಬಿಸಿ 75 ಹಾಲಿನ ಕ್ಯಾನ್ ಸಮೇತ ಕ್ಯಾಂಟರ್ ವಾಹನವನ್ನು ಕಳವು ಮಾಡಿದ್ದ.ಆಂಧ್ರದ ಮೂಲಕ ಗುಲ್ಬರ್ಗ ತಲುಪಿದ: ಕ್ಯಾಂಟರ್ ಹಾಗೂ ಹಾಲಿನ ಕ್ಯಾನ್ ಗಳನ್ನು ಕಳವು ಮಾಡಿದ್ದ ಆರೋಪಿ ಪ್ರಶಾಂತ್ ಪೊಲೀಸರಿಗೆ ಯಾವುದೇ ರೀತಿಯ ಸುಳಿವು ಸಿಗದಂತೆ ಚಾಣಾಕ್ಷತನದಿಂದ ಹೆದ್ದಾರಿಯ ಟೋಲ್‌ಗಳ ಮೂಲಕ ಸಾಗದೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಗೌರಿಬಿದನೂರು, ಹಿಂದೂಪುರ, ಪಾವಗಡ, ಮಡಕಶಿರ, ಬಳ್ಳಾರಿ, ರಾಯಚೂರು, ಯಾದಗಿರಿಯ ರಸ್ತೆಗಳ ಮೂಲಕ ಗುಲ್ಬರ್ಗ ತಲುಪಿದ್ದ.ಸವಾಲಿನ ಕೆಲಸ: ಕ್ಯಾಂಟರ್ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಕ್ಯಾಂಟರ್ ಕಳುವಾದ ಸ್ಥಳದಿಂದ ಸುಮಾರು 120 ಕಿ.ಮೀ.ವರೆಗೆ ರಸ್ತೆಯಲ್ಲಿ ಲಭ್ಯವಿರುವ ಹೋಟೆಲ್, ಡಾಬಾ, ಮೆಕಾನಿಕ್ ಶಾಪ್‌ಗಳು ಸೇರಿದಂತೆ ವಿವಿಧ ಬಗೆಯ ಸುಮಾರು 60ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮರಾಗಳಲ್ಲಿ ದೃಶ್ಯ ಪರಿಶೀಲಿಸಿದ್ದರು. ಆರೋಪಿಯ ಮುಖಚಹರೆ, ವಾಹನದ ವಿವರ, ಸಿಸಿ ಕ್ಯಾಮೆರಾ ದೃಶ್ಯಾವಳಿಯ ಮೂಲಕ ಆರೋಪಿಯನ್ನು ಕ್ಯಾಂಟರ್ ಸಮೇತ ಗುಲ್ಬರ್ಗ ಜಿಲ್ಲೆ ಶಹಪುರದ ಮೆಕಾನಿಕ್ ಶಾಪ್ ಬಳಿ ಬಂಧಿಸಲಾಯಿತು. ಬಂಧಿತ ಆರೋಪಿಯನ್ನು ದಸ್ತಗಿರಿ ಮಾಡಿ ಕಳುವಾಗಿದ್ದಂತಹ 10 ಲಕ್ಷ ಮೌಲ್ಯದ ಕ್ಯಾಂಟರ್ ವಾಹನ ಹಾಗೂ ಹಾಲಿನ ಕ್ಯಾನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಶಂಕರ್‌ಗೌಡ ಪಾಟೀಲ್, ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್, ಪಿಎಸ್ ಐ ಸಂಪತ್ ಕುಮಾರ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ದತ್ತಾತ್ರೇಯ ಪ್ರಕಾಶ್ ಬಾಬು, ರಮೇಶ್, ನಾಗರಾಜ್,ವಿಠಲ್, ಜೋಯಲ್ ಜರಾಲ್ಡ್, ಗೋಪಾಲ್, ಮತ್ತಿವಣ್ಣನ್, ರಮೇಶ್, ವೀರಭದ್ರಪ್ಪ, ಮೌನೇಶ್, ಮಹಿಳಾ ಸಿಬ್ಬಂದಿ ರಮ್ಯಾ, ಮುಬಾರಕ್ ಅವರನ್ನ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ, ಎಎಸ್ಪಿ ಪುರುಷೋತ್ತಮ್ ಶ್ಲಾಘಿಸಿದ್ದಾರೆ.ಫೋಟೋ 19 ಹೆಚ್‌ಎಸ್‌ಕೆ 3 ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ದೊಡ್ಡ ಹುಲ್ಲೂರು ಗ್ರಾಮದಲ್ಲಿ ಕಳುವಾಗಿದ್ದ ಕ್ಯಾಂಟರ್ ವಾಹನ ಹಾಗೂ ಹಾಲಿನ ಕ್ಯಾನ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ