- ನಾಗಮಂಗಲದ ದರ್ಗಾ ಬಳಿ ನಡೆದ ಘಟನೆ- ಮೆರವಣಿಗೆ ನಡೆಸುತ್ತಿದ್ದವರ ಮೇಲೆ ದಾಳಿ
ನಾಗಮಂಗಲ ಟಿ.ಬಿ.ಬಡಾವಣೆಯ ಬದರಿಕೊಪ್ಪಲು ಸರ್ಕಲ್ ಬಳಿ ಗಜಪಡೆ ಯುವಕರ ಸಂಘ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಇತ್ತು. ಅದರಂತೆ ಬದರಿಕೊಪ್ಪಲು ಸರ್ಕಲ್‌ನಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿ ಬಳಿಯ ಮಂಡ್ಯ ಸರ್ಕಲ್‌ಗೆ ಆಗಮಿಸಿದ ಮೆರವಣಿಗೆ ಅಲ್ಲಿಂದ 200 ಮೀಟರ್ ದೂರದವರೆಗೆ ಮೈಸೂರು ರಸ್ತೆಯಲ್ಲಿ ತೆರಳಿ ಯೂಟರ್ನ್ ಪಡೆದು ವಾಪಸಾಗುವ ವೇಳೆ ದರ್ಗಾ ಬಳಿ ಕಿಡಿಗೇಡಿಗಳು ಏಕಾಏಕಿ ಕಲ್ಲು-ಬಾಟಲಿಗಳನ್ನು ತೂರಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಯುವಕರ ಗುಂಪು ಕಿಡಿಗೇಡಿಗಳ ಮೇಲೆ ಕಲ್ಲು ತೂರಾಟ ನಡೆಸಿತು. ಈ ವೇಳೆ ಮುಸ್ಲಿಂ ಗುಂಪಿನವರೆಲ್ಲರೂ ಒಂದಾಗಿ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಮತ್ತಷ್ಟು ತೀವ್ರವಾಗಿ ಕಲ್ಲು ತೂರಾಟ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರೂ ಸ್ಥಳಕ್ಕೆ ಧಾವಿಸಿ ಪ್ರತಿದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮಂಡ್ಯ-ನಾಗಮಂಗಲ ರಸ್ತೆಯಲ್ಲಿ ಮುಸ್ಲಿಮರ ಗುಂಪು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರೆ, ಟಿ.ಮರಿಯಪ್ಪ ಸರ್ಕಲ್ ಬಳಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಎರಡೂ ಕಡೆಯಿಂದ ಕಲ್ಲು-ಬಾಟಲಿಗಳ ತೂರಾಟ ತಡರಾತ್ರಿವರೆಗೂ ಮುಂದುವರೆದಿತ್ತು. ಪೊಲೀಸರು ಮೂರ್ನಾಲ್ಕು ಬಾರಿ ಲಾಠಿ ಪ್ರಹಾರ ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಘಟನೆಯಲ್ಲಿ 8 ಮಂದಿ ಹಿಂದೂ ಕಾರ್ಯಕರ್ತರು, ಒಬ್ಬ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ. ಬಟ್ಟೆ ಅಂಗಡಿ, ದ್ವಿಚಕ್ರವಾಹನದ ಶೋರೂಂ, ಎರಡು ಗ್ಯಾರೇಜ್‌ಗಳು, ಕೆಲ ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವು ವಾಹನಗಳು, ಅಂಗಡಿಗಳಿಗೆ ಹಾನಿ ಮಾಡಲಾಗಿದೆ. ಗಲಾಟೆ ವೇಳೆ ಕೆಲ ಮುಸ್ಲಿಂ ಕಿಡಿಗೇಡಿಗಳಿಂದ ಲಾಂಗು, ಮಚ್ಚುಗಳನ್ನೂ ವಶಕ್ಕೆ ಪಡೆಯಲಾಗಿದೆ.ಪ್ರತಿಭಟನೆ: ನಂತರ ಮೆರವಣಿಗೆ ನಡೆಸುತ್ತಿದ್ದ ಯುವಕರ ಗುಂಪು ಪೊಲೀಸ್ ಠಾಣೆ ಬಳಿಗೆ ತೆರಳಿ ಅಲ್ಲೇ ಗಣೇಶ ಮೂರ್ತಿಯನ್ನಿಟ್ಟು ಪ್ರತಿಭಟನೆಗಿಳಿದರು. ಕಲ್ಲು ತೂರಾಟ ನಡೆಸಿ ಘರ್ಷಣೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಕಳೆದ ವರ್ಷವೂ ದರ್ಗಾ ಬಳಿ ಗಣಪತಿ ಮೆರವಣಿಗೆ ನಡೆಯುವ ವೇಳೆ ಕಲ್ಲು ತೂರಾಟ ನಡೆಸಲಾಗಿತ್ತು. ಆಗಲೂ ಯಾರ ವಿರುದ್ಧವೂ ಕ್ರಮ ಕೈಗೊಂಡಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಪಟ್ಟಣಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.