ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ

KannadaprabhaNewsNetwork |  
Published : Feb 21, 2026, 02:00 AM IST
ಗಲಾಟೆ | Kannada Prabha

ಸಾರಾಂಶ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಗುರುವಾರ ರಾತ್ರಿ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಿದ ಪ್ರಮುಖ ಆರೋಪಿ ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಗುರುವಾರ ರಾತ್ರಿ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಿದ ಪ್ರಮುಖ ಆರೋಪಿ ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಫೆ.24ರವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಮಧ್ಯೆ, ಘಟನೆ ಖಂಡಿಸಿ ಶುಕ್ರವಾರ ಪ್ರತಿಭಟನೆಗೆ ಮುಂದಾಗಿದ್ದ ಹಿಂದೂ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಮಸೀದಿ ಮೇಲಿಂದ ಎರಡು ಕಲ್ಲು ತೂರಿದ ಆರೋಪದಲ್ಲಿ ಪ್ರಮುಖ ಆರೋಪಿ ತನ್ವೀರ್ ಹವಾಲ್ದಾರ (25), ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೆಂಡಾರಗಲ್ಲಿಯ ಮಜ್ಜು ಕಮತಗಿ (23), ಸದ್ದಾಂ ಕಮತಗಿ (22), ಪಯಾಜ ಹಣಮಸಾಗರ (24), ಶಂಕರಲಿಂಗ ಗುಡಿ ಬಳಿ ನಿವಾಸಿ ಸರ್ಪರಾಜ ಚಾವುಸ್ (33), ರಿಯಾನ ಶೇಖ್ (21), ಅಯಾನ್‌ ಗುಳೇದಗುಡ್ಡ (19) ವಸೀಮ್ ಶೇಖ್ (22) ಎಂಬುವರನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.

ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಭಾವಚಿತ್ರದ ಮೆರವಣಿಗೆ ಗುರುವಾರ ರಾತ್ರಿ ಕಿಲ್ಲಾದ ಪಂಕಾ ಮಸೀದಿ ಬಳಿ ಹೋಗುವ ವೇಳೆ ಪ್ರಾರ್ಥನಾ ಮಂದಿರದಲ್ಲಿ ಸೇರಿದ್ದ ಯುವಕರ ಗುಂಪಿನಿಂದ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಪರಿಸ್ಥಿತಿ ಉದ್ವಿಘ್ನಗೊಂಡಿತ್ತು. ಕಲ್ಲು ತೂರಾಟದಲ್ಲಿ ಎಸ್ಪಿ ಸಿದ್ಧಾರ್ಥ ಗೋಯಲ್, ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌, ಓರ್ವ ವ್ಯಕ್ತಿ ಗಾಯಗೊಂಡಿದ್ದರು.

ಬಳಿಕ, ಗಲಾಟೆ ನಡೆದಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಿಡಿಗೇಡಿಗಳು ತರಕಾರಿ ತುಂಬಿದ್ದ ತಳ್ಳುವ ಗಾಡಿಗೆ ಬೆಂಕಿ ಹಚ್ಚಿದ್ದರು. ಪೊಲೀಸರು ಬೆಂಕಿ ನಂದಿಸಲು ಹರಸಾಹಸಪಟ್ಟರು.

ಪ್ರತಿಭಟನೆಗೆ ಮುಂದಾದ ಹಿಂದೂ ಕಾರ್ಯಕರ್ತರು:

ಘಟನೆ ಹಿನ್ನೆಲೆಯಲ್ಲಿ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಶುಕ್ರವಾರ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಭಾಗಿಯಾಗಿ ಘಟನೆಯನ್ನು ಖಂಡಿಸಿದರು. ಬಳಿಕ, ಸಭೆ ನಡೆಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ, ನಗರದ ಕೆಲವೆಡೆ ಅಂಗಡಿ, ಮುಂಗಟ್ಟು ಬಂದ್ ಮಾಡಲಾಯಿತು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮೆರವಣಿಗೆಗೆ ಪೊಲೀಸರು ತಡೆ ನೀಡಿದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.

ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಫೆ.24ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.‘ಕೈ’ ತುಷ್ಟೀಕರಣ ನೀತಿಯೇ ಗಲಭೆಗೆ ಕಾರಣ:

ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯೇ ಇದಕ್ಕೆ ಕಾರಣ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅಡೆತಡೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.ಹಟ್ಟಿ ಚಿನ್ನದ ಗಣಿ ಕಂಪನಿಯ ಅತಿಥಿಗೃಹದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಇಂತಹ ಘಟನೆಗಳು ಏಕೆ ನಡೆಯುತ್ತವೆ? ಪೊಲೀಸರ ಮೇಲಿನ ರಾಜಕೀಯ ಒತ್ತಡದಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಪೊಲೀಸರ ಮೇಲೆ ಹಿಡಿತ ಇಟ್ಟುಕೊಂಡಿದೆ. ಕಾಂಗ್ರೆಸ್ ತುಷ್ಟಿಕರಣದಿಂದ ಹೀಗೆ ಆಗುತ್ತಿದೆ. ತುಷ್ಟಿಕರಣ ನೀತಿಯಿಂದ ಇಂತಹ ಘಟನೆಗಳು ನಡೆಯುತ್ತವೆ. ಪೊಲೀಸ್ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದಕ್ಕೆ ಇಂತಹ ಘಟನೆ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಬಾಂಬ್ ಹಾಕಿದವರನ್ನು ಬ್ರದರ್ಸ್ ಅಂತೀರಿ. ಗಣೇಶನ ವಿಗ್ರಹಕ್ಕೂ ಮಸೀದಿಯಿಂದ ಕಲ್ಲು ಬಿತ್ತು. ಶಿವಾಜಿ ಮೆರವಣಿಗೆಯಲ್ಲೂ ಮಸೀದಿಯಿಂದ ಕಲ್ಲು ಬೀಳುತ್ತೆ. ಕಲ್ಲು ಹೊಡೆದವರನ್ನು ಬಂಧಿಸಲ್ಲ. ಅಕ್ರಮ ಮಸೀದಿ ಎಂದವರ ಮೇಲೆ ಕೇಸ್ ಹಾಕಿದ್ರಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಹೀಗೆ ಆಗಲ್ಲ ಎಂದು ಆರೋಪಿಸಿದರು. ಶಿವಾಜಿ ಮಹಾರಾಜರ ಶೋಭಾಯಾತ್ರೆಗೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಕಲ್ಲು ತೂರಿದ ಪುಂಡರಿಗೆ ಶಿಕ್ಷೆ ನಿಶ್ಚಿತ:

ಬಾಗಲಕೋಟೆಯಲ್ಲಿ ನಡೆದಿರುವ ಕಲ್ಲುತೂರಾಟ ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅವರು, ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ. ಘಟನೆ ಸಂಬಂಧ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ದುಷ್ಕೃತ್ಯ ಎಸಗಿದ ಪುಂಟರಿಗೆ ಕಾನೂನಾತ್ಮಕವಾಗಿ ತಕ್ಕ ಉತ್ತರ ನೀಡಲು ಸೂಚಿಸಿದ್ದೇನೆ. ಈಗಾಗಲೇ ಪ್ರಕರಣದ ಸಂಬಂಧ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ ಎಂದು ಹೇಳಿದ್ದಾರೆ.ನಿಷ್ಪಕ್ಷಪಾತ ಕರ್ತವ್ಯ ಮಾಡಲಿ:ನಾಡಿನ ಜನರಿಗೆ ಭಯಮುಕ್ತ ನೆಮ್ಮದಿಯ ಬದುಕು ನೀಡುವುದು ನಮ್ಮ‌ ಮೊದಲ ಆದ್ಯತೆ. ಜನರ ಶಾಂತಿ - ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ-ಶಕ್ತಿಗಳನ್ನು ನಾವು ಸಹಿಸುವುದಿಲ್ಲ. ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೂ ಕಿವಿಗೊಡದೆ, ಸಂಯಮದಿಂದ ವರ್ತಿಸಿ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡಲಿದೆ ಎಂದು ಸಿಎಂ ತಿಳಿಸಿದ್ದಾರೆ.ಬಾಗಲಕೋಟೆ ಗಲಭೆಗೆ ಕೇಸರಿ ಪಡೆ ಗರಂ:

ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ಮುಸ್ಲಿಂ ಮತಾಂಧರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.ಶುಕ್ರವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕಾಗಿ ಹೋರಾಟ ಮಾಡಿದ್ದರು. ಇವೆಲ್ಲವೂ ಪೂರ್ವ ನಿಯೋಜಿತ ಕೃತ್ಯ. ಈ ಹಿಂದೆ ಮಂಡ್ಯದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ, ಶ್ರೀರಾಮನ ಫ್ಲೆಕ್ಸ್‌ ಹರಿದು ಹಾಕಿರುವುದು ಹೀಗೆ ಮೊದಲಾದ ರೀತಿಯಲ್ಲಿ ಮುಸ್ಲಿಂ ಮೂಲಭೂತವಾದಿಗಳು ದಾಳಿ ಮಾಡಿದ್ದರು. ಆದರೆ, ಇಂತಹ ಮತಾಂಧರನ್ನು ಬಂಧಿಸಬಾರದು ಎಂಬ ಸೂಚನೆಯನ್ನು ಕಾಂಗ್ರೆಸ್‌ ಸರ್ಕಾರ ಪೊಲೀಸರಿಗೆ ನೀಡಿದೆ ಎಂದು ಆಪಾದಿಸಿದರು.ಕುಕ್ಕರ್‌ ಬಾಂಬ್‌ ಸ್ಫೋಟ ಮಾಡುವವರು ನಮ್ಮ ಬ್ರದರ್‌ಗಳು, ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಎನ್ನುವವರು ನಮ್ಮ ಬಂಧುಗಳು ಎಂಬ ಮಾತನ್ನು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಈ ಕಾರಣದಿಂದಲೇ ಇಂತಹ ಘಟನೆಗಳು ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿವೆ. ಶಿವಾಜಿ ಮಹಾರಾಜರ ಕುಟುಂಬದವರೇ ಬೆಂಗಳೂರಿನಲ್ಲಿ ದೇವಸ್ಥಾನ ಕಟ್ಟಿಸಿದ್ದರು. ಇಂತಹ ಮಹಾನ್‌ ವ್ಯಕ್ತಿಗೆ ಅಪಮಾನ ಮಾಡಿರುವ ಘಟನೆಗೆ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದು ಹರಿಹಾಯ್ದರು.ಪಾಕ್‌-ಬಾಂಗ್ಲಾ ನಂಟು?:ಈ ಮತಾಂಧರಿಗೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ನಂಟು ಇದೆಯೇ ಎಂದು ಪರಿಶೀಲಿಸಬೇಕು. ಈ ಹಿಂದೆ ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ನಡೆದ ನಂತರ ಪಾಕಿಸ್ತಾನದವರು ಟ್ವೀಟ್‌ ಮಾಡಿ ಖಂಡಿಸಿದ್ದರು. ಆದ್ದರಿಂದ ಈ ಘಟನೆಯಲ್ಲೂ ಯಾವ ಲಿಂಕ್‌ ಇದೆ ಎಂದು ಪರೀಕ್ಷೆ ಮಾಡಬೇಕಿದೆ ಎಂದು ಇದೇ ವೇಳೆ ಅಶೋಕ್ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೩ರಂದು ಜಿ ರಾಮ್ ಜೀ ವಿರೋಧಿಸಿ ಪ್ರತಿಭಟನಾ ಪೂರ್ವಭಾವಿ ಸಭೆ
ಸರ್ವಜ್ಞ ಕವಿಯ ತ್ರಿಪದಿಗಳು ಜನರ ಜೀವನಕ್ಕೆ ದಾರಿದೀಪ