ಮದ್ದೂರಿನಲ್ಲಿ ನಡೆದ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟದ ಘಟನೆ ಆಕಸ್ಮಿಕ ಅಲ್ಲ, ಅದು ಪೂರ್ವ ನಿಯೋಜಿತ ಸಂಚು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮದ್ದೂರಿನಲ್ಲಿ ನಡೆದ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟದ ಘಟನೆ ಆಕಸ್ಮಿಕ ಅಲ್ಲ, ಅದು ಪೂರ್ವ ನಿಯೋಜಿತ ಸಂಚು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ಬುಧವಾರ ರಾಷ್ಟ್ರಭಕ್ತರ ಬಳಗದ ವತಿಯಿಂದ ಮದ್ದೂರು ಮತ್ತು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಮದ್ದೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಲು ಮಸೀದಿಗಳಲ್ಲಿ ಮೊದಲೇ ಪ್ಲಾನ್ ಮಾಡಿ ಲೋಡ್‌ಗಟ್ಟಲೆ ಕಲ್ಲನ್ನು ಇಟ್ಟುಕೊಂಡಿದ್ದರು.
ಭದ್ರಾವತಿಯಲ್ಲಿ ಈದ್ ಮಿಲಾದ್ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಒಬ್ಬರು ಕೂಡ ಇದನ್ನೂ ವಿರೋಧ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ದೇಶದ್ರೋಹಿಗಳ ಪರ ಇದ್ದಾರಾ?:
ಗಣೇಶನ ಮೆರವಣಿಗೆ ವೇಳೆ ಮದ್ದೂರಿನಲ್ಲಿ ಲೈಟ್ ಯಾಕೆ ಆಫ್ ಮಾಡಿದರು. ಮಸೀದಿಯೊಳಗೆ ಕಲ್ಲು ಯಾಕೆ ತಂದು ಇಟ್ಟುಕೊಂಡಿದ್ದರು. ಇಷ್ಟೆಲ್ಲ ಯೋಜಿಸಿ ಕಲ್ಲು ತೂರಾಟ ನಡೆಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರ ಪ್ರಚೋದನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೆಲ್ಲ ನೋಡಿದರೆ ಸಿದ್ದರಾಮಯ್ಯ ಯಾರ ಪರವಾಗಿದ್ದಾರೆ? ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿದವರ ಮೇಲೆ ತಕ್ಷಣ ಕ್ರಮ ಜರುಗಿಸಿದ್ದರೆ ಯಾವ ಪ್ರತಿಭಟನೆಯೂ ಆಗುತ್ತಿರಲಿಲ್ಲ. 22 ದೇಶದ್ರೋಹಿಗಳನ್ನು ಬಂಧಿಸಿ, 500 ಜನ ದೇಶಭಕ್ತರ ಮೇಲೆ ಕೇಸು ಹಾಕಿದ್ದೀರಲ್ಲ. ಸಿಎಂ ಈ ಸರ್ಕಾರ ದೇಶದ್ರೋಹಿಗಳ ಪರ ನಿಂತಿರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಹಿಂದೂವಾಗಿ ಸ್ಪರ್ಧೆ ಮಾಡ್ತಿಯಾ?:
ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳನ್ನು ಇದುವರೆಗೂ ಕೂಡ ಅರೆಸ್ಟ್ ಮಾಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳಿಂದಲೂ ಹೇಳಿಕೆ ಬಂದಿಲ್ಲ. ಮೂಲ ಕಾಂಗ್ರೆಸ್ ಗೆ ಈಗಿರುವ ಡೂಪ್ಲಿಕೇಟ್ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು.
ಭದ್ರಾವತಿ ಶಾಸಕ ಸಂಗಮೇಶ್ ಮುಂದಿನ ಚುನಾವಣೆಯಲ್ಲಿ ಹಿಂದೂವಾಗಿ ಸ್ಪರ್ಧೆ ಮಾಡ್ತಿಯಾ? ಮುಸ್ಲಿಮನಾಗಿ ಸ್ಪರ್ಧೆ ಮಾಡ್ತೀಯಾ?. ಭದ್ರಾವತಿಯ ಹಿಂದುಗಳು ನೀವು ಹಿಂದೂ ಎಂದು ಮತ ನೀಡಿದ್ದಾರೆ ಹೊರತು ,ಮುಸಲ್ಮಾನ ಎಂದು ಮತ ನೀಡಿಲ್ಲ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.