ಕಲ್ಲು ತೂರಾಟ: ಸಹಜ ಸ್ಥಿತಿಗೆ ಮರಳಿದ ಮದ್ದೂರು ಪಟ್ಟಣ

KannadaprabhaNewsNetwork |  
Published : Sep 12, 2025, 12:06 AM IST
11ಕೆಎಂಎನ್ ಡಿ15,16,17 | Kannada Prabha

ಸಾರಾಂಶ

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಮೂರು ದಿನಗಳ ಬಳಿಕ ಮದ್ದೂರು ಈಗ ಸಹಜ ಸ್ಥಿತಿಗೆ ಮರಳಿದೆ. ಮೂರು ದಿನಗಳಿಂದ ವ್ಯಾಪಾರ-ವಹಿವಾಟನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದ ವರ್ತಕರು, ಗುರುವಾರ ಬೆಳಗ್ಗೆಯಿಂದ ಅಂಗಡಿ-ಮುಂಗಟ್ಟುಗಳನ್ನು ತೆರೆದು ವ್ಯಾಪಾರ-ವ್ಯವಹಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಮೂರು ದಿನಗಳ ಬಳಿಕ ಮದ್ದೂರು ಈಗ ಸಹಜ ಸ್ಥಿತಿಗೆ ಮರಳಿದೆ. ಮೂರು ದಿನಗಳಿಂದ ವ್ಯಾಪಾರ-ವಹಿವಾಟನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದ ವರ್ತಕರು, ಗುರುವಾರ ಬೆಳಗ್ಗೆಯಿಂದ ಅಂಗಡಿ-ಮುಂಗಟ್ಟುಗಳನ್ನು ತೆರೆದು ವ್ಯಾಪಾರ-ವ್ಯವಹಾರ ನಡೆಸಿದರು.

ಕಲ್ಲು ತೂರಾಟ ಪ್ರಕರಣದಿಂದ ಪಟ್ಟಣದಲ್ಲಿ ಮೂರು ದಿನಗಳಿಂದ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಮೂರು ದಿನ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದ ವರ್ತಕರು-ವ್ಯಾಪಾರಿಗಳು ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡಿದ್ದರು. ಮೂರು ದಿನಗಳ ಬಳಿಕ ಪರಿಸ್ಥಿತಿ ತಿಳಿಯಾಗಿರುವುದರಿಂದ ಹೋಟೆಲ್‌ಗಳು, ದಿನಸಿ ಅಂಗಡಿಗಳು, ಷೋರೂಂಗಳು, ಚಿನ್ನಾಭರಣ ಅಂಗಡಿಗಳು ಸೇರಿದಂತೆ ಎಲ್ಲಾ ರೀತಿಯ ಅಂಗಡಿ-ಮುಂಗಟ್ಟುಗಳ ಮಾಲೀಕರು ವ್ಯಾಪಾರದಲ್ಲಿ ತೊಡಗಿದರು.

ಮದ್ದೂರು ಪಟ್ಟಣ ಸಹಜ ಸ್ಥಿತಿಗೆ ಮರಳಿದ್ದರೂ ಮುಂಜಾಗ್ರತೆಯಾಗಿ ಪೊಲೀಸ್ ಭದ್ರತೆಯನ್ನು ಮುಂದುವರೆಸಲಾಗಿದೆ. ಕಲ್ಲು ಎಸೆತವಾಗಿದ್ದ ಮಸೀದಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಮಸೀದಿ, ದರ್ಗಾ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಸಾಮೂಹಿಕ ಗಣೇಶ ವಿಸರ್ಜನೆಯಿಂದ ಪೊಲೀಸರಲ್ಲಿದ್ದ ಆತಂಕ ಕೊಂಚ ದೂರವಾದಂತೆ ಕಂಡುಬರುತ್ತಿದೆ.

ಪಟ್ಟಣದಲ್ಲಿ ಇನ್ನೂ 10ಕ್ಕೂ ಹೆಚ್ಚು ಗಣೇಶಮೂರ್ತಿಗಳು ವಿಸರ್ಜನಗೆ ಬಾಕಿ ಉಳಿದಿವೆ. ಆ ಹಿನ್ನೆಲೆಯಲ್ಲಿ ಪೊಲೀಸ್ ತುಕಡಿಗಳು ಇನ್ನೂ ಮದ್ದೂರಿನಲ್ಲೇ ಬೀಡುಬಿಟ್ಟಿವೆ. ಮೇಲ್ನೋಟಕ್ಕೆ ಪಟ್ಟಣದಲ್ಲಿ ಶಾಂತಿ ನೆಲೆಸಿರುವಂತೆ ಕಂಡುಬಂದರೂ ಇನ್ನೂ ಬಿಗುವಿನ ಪರಿಸ್ಥಿತಿ ಮನೆ ಮಾಡಿರುವಂತೆ ಗೋಚರಿಸುತ್ತಿದೆ.

ಗುರುವಾರದಂದು ಮದ್ದೂರಿಗೆ ಬಿಜೆಪಿಯ ಕಾನೂನು ತಂಡ ಭೇಟಿ ನೀಡಿತ್ತು. ಬಿಜೆಪಿಯ ರಾಜ್ಯ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್‌ಕುಮಾರ್, ಅಯ್ಯಪ್ಪ, ರಮೇಶ್, ನರಸಿಂಹಮೂರ್ತಿ, ಚಂದನ್ ಕುಮಾರ್, ವಿಶ್ವನಾಥ್, ಪ್ರಸನ್ನ ಸೇರಿ ಹಲವರು ಭಾಗಿ.ಕಾನೂನು ತಂಡ ಭೇಟಿ ವಕೀಲರ ಸಂಘಕ್ಕೆ ಭೇಟಿ ಮಾಡಿ ವಕೀಲರೊಂದಿಗೆ ಸಭೆ ನಡೆಸಿತು. ಕಲ್ಲು ಎಸೆದ ಕಿಡಿಗೇಡಿಗಳ ಪರ ವಕಾಲತ್ತು ಹಾಕದಿರಲು ನಿರ್ಧಾರ ಮಾಡಿರೋದಕ್ಕೆ ವಕೀಲರನ್ನು ಅಭಿನಂದಿಸಿದರು.

ಇದೇ ವೇಳೆ ರಾಮ್ ರಹೀಮ್ ನಗರದ ಮಸೀದಿಯ ಕುರಿತು ದಾಖಲೆ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ರಾಜ್ಯ ಕಾನೂನು ಪ್ರಕೋಷ್ಠ ತಂಡದವರು ಪಕ್ಷದ ನಾಯಕರು-ಕಾರ್ಯಕರ್ತರಿಂದ ಮಾಹಿತಿ ಪಡೆದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ