ಹಾವೇರಿ: ಒಂದೇ ಹಂತದ ಕಲ್ಲುಗಣಿ ಉತ್ಪನ್ನಕ್ಕೆ ಎರಡು ಹಂತದಲ್ಲಿ ರಾಜಧನ (ರಾಯಲ್ಟಿ) ವಸೂಲಿ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ದಂಡ ಹಾಕಿರುವುದನ್ನು ವಿರೋಧಿಸಿ ಸೆ.18ರಿಂದ ಜಿಲ್ಲಾದ್ಯಂತ ಎಲ್ಲ ಕ್ವಾರಿ ಹಾಗೂ ಕ್ರಷರ್ ಘಟಕಗಳನ್ನು ಬಂದ್ ಇಟ್ಟು ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ಟೋನ್ ಕ್ರಷರ್ ಆ್ಯಂಡ್ ಕ್ವಾರಿ ಓನರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಸವರಾಜ ಬೆಳವಡಿ ಹೇಳಿದರು.
ಸೆ. 18ರಿಂದ ಕ್ರಷರ್ ಬಂದ್: ನಮ್ಮ ಸಂಘದ ಬೇಡಿಕೆಗಳನ್ನು ಸರ್ಕಾರದ ಈಡೇರಿಸದ ಹಿನ್ನೆಲೆಯಲ್ಲಿ ಸೆ.18ರಿಂದ ಹಾವೇರಿ ಜಿಲ್ಲಾದ್ಯಂತ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಘಟಕಗಳನ್ನು ಅನಿರ್ದಿಷ್ಟಾವಗೆ ಬಂದ್ ಮಾಡಲು ನಿರ್ಧರಿಸಲಾಗಿದೆ. ಮುಷ್ಕರದ ಅವಧಿಯಲ್ಲಿ ಎಲ್ಲ ಕ್ವಾರಿ ಹಾಗೂ ಕ್ರಷರ್ ಘಟಕಗಳ ಕಾರ್ಯಾಚರಣೆ ಮತ್ತು ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಜಲ್ಲಿ, ಎಂ-ಸ್ಯಾಂಡ್ ಸೇರಿದಂತೆ ಯಾವುದೇ ಕಲ್ಲು ಉತ್ಪನ್ನಗಳ ಲೋಡಿಂಗ್, ಸಾಗಾಣಿಕೆ ಹಾಗೂ ಪೂರೈಕೆ ಮಾಡುವುದಿಲ್ಲ ಎಂದರು.
ಸರ್ಕಾರವು ಕ್ವಾರಿ ಮಾಲೀಕರಿಂದಾಗಲಿ ಅಥವಾ ಅಂತಿಮ ಬಳಕೆದಾರರು, ಸರ್ಕಾರಿ ಇಲಾಖೆಯಿಂದಾಗಲಿ ಯಾವುದೇ ಒಂದು ಹಂತದಲ್ಲಿ ಮಾತ್ರ ರಾಜಧನ ಸಂಗ್ರಹಿಸುವ ಸ್ಪಷ್ಟ ನಿಯಮ ರೂಪಿಸಬೇಕು. ಇಮ್ಮಡಿ ರಾಜಧನ ವಸೂಲಿ ಪದ್ಧತಿಯನ್ನು ತಕ್ಷಣ ರದ್ದುಪಡಿಸಬೇಕು. ಅವೈಜ್ಞಾನಿಕ ಜಿಪಿಎಸ್ ವ್ಯವಸ್ಥೆಯನ್ನು ಬಂದ್ ಮಾಡಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ ಎಂದರು.ಸರ್ಕಾರದೊಂದಿಗೆ ಮಾತುಕತೆ ನಡೆದು ಬೇಡಿಕೆಗಳ ಕುರಿತು ಸೂಕ್ತ ನಿರ್ಧಾರ ಹೊರಬರುವವರೆಗೆ ಮುಷ್ಕರ ಮುಂದುವರಿಯಲಿದೆ. ಜಿಲ್ಲೆಯ ಎಲ್ಲ ಕ್ವಾರಿ ಮತ್ತು ಕ್ರಷರ್ ಮಾಲೀಕರು, ವಿತರಕರು ಸಂಘದ ನಿರ್ಧಾರಕ್ಕೆ ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.