ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಪಲ್ಲದಮೇಲು ಪ್ರದೇಶದಲ್ಲಿ ಹಲವು ಮನೆಗಳಿದ್ದು, ಇಲ್ಲಿ ಕಲ್ಲಿನ ಹೊಸ ಕ್ವಾರಿ ಕಾರ್ಯಾಚರಿಸುತ್ತಿದೆ. ಸ್ಥಳೀಯರು ಹೆಚ್ಚಿನ ತೊಂದರೆಯಾಗುತ್ತಿದ್ದು, ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಪರಿಸರದ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಅಳಲು ತೋಡಿಕೊಂಡರು.ಪಾಲಡ್ಕ ಪಂಚಾಯಿತಿ ಅಧ್ಯಕ್ಷೆ ಅಮಿತಾ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಕ್ವಾರಿ ಸಹಿತ ಗ್ರಾಮದ ಸಮಸ್ಯೆಗಳನ್ನು ಚರ್ಚಿಸಲಾಯಿತು.ಗ್ರಾಮಸ್ಥೆ ಸುಶ್ಮಿತಾ ಕ್ವಾರಿಯ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ, ಪಲ್ಲದಮೇಲು ಪರಿಸರದಲ್ಲಿ ಮನೆಗಳಿಂದ ಕೇವಲ 50 ಮೀ. ಅಂತರದಲ್ಲಿ ಕಲ್ಲಿನ ಕ್ವಾರಿಗಳಿದ್ದು, ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ಸ್ಥಳೀಯ ನಿವಾಸಿಗಳಾದ ನಾವು ಇದರಿಂದ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ನಿವಾಸಿಗಳ ಅರೋಗ್ಯದಲ್ಲಿ ಏರುಪೇರಾಗುತ್ತಿದ್ದು, ವೃದ್ದರು, ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ತಹಸೀಲ್ದಾರ್ ಹಾಗೂ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನೆವಾಗಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥ ಹರಿಶ್ಚಂದ್ರ ಧ್ವನಿಗೂಡಿಸಿ, ಕ್ವಾರಿ ಪ್ರಾರಂಭವಾಗಿ ಒಂದು ತಿಂಗಳಾಗಿದೆ. ಪಲ್ಲದಮೇಲು 5 ಸೆಂಟ್ಸ್ ಜಾಗದಲ್ಲಿ ಕ್ವಾರಿ ಆರಂಭವಾಗಿದ್ದು, ಜನವಸತಿ ಪ್ರದೇಶದಲ್ಲಿ ಕ್ವಾರಿ ನಿರ್ಮಿಸಲು ಹೇಗೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಸ್ಥಳೀಯ ಗ್ರಾಮಸ್ಥರು ಪಂಚಾಯಿತಿ ಅಧಿಕಾರಿ, ಜನ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.ಗಣಿ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿ, ಸದಸ್ಯರ ಸಮಕ್ಷಮದಲ್ಲಿ ಸ್ಥಳ ಪರಿಶೀಲಿಸಿ, ವಾರದೊಳಗೆ ಸಮಸ್ಯೆಗೆ ಪರಿಹಾರ ಕೊಡುಸುವಲ್ಲಿ ಪ್ರಯತ್ನಿಸಲಾಗುವುದು ಎಂದು ಜಿ.ಪಂ. ಮಾಜಿ ಅಧ್ಯಕ್ಷ, ಕೆಎಂಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಅಕ್ರೋಶಗೊಂಡ ಗ್ರಾಮಸ್ಥರಿಗೆ ಸಮಜಾಯಿಸಿದರು.ಅನಧಿಕೃತ ಕ್ವಾರಿಗಳಿಗೆ ನಾನು ಸಪೋರ್ಟ್ ಮಾಡುತ್ತಿದ್ದೇನೆ ಎಂದು ಪಂಚಾಯಿತಿ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ತುಣುಕುಗಳನ್ನು ಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ತೇಜೋವಧೆ ಮಾಡುತ್ತಿರುವ ಸದಸ್ಯರ ವಿರುದ್ಧ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪ್ರಚಾರ ವಿರುದ್ದ ಮಾನ ನಷ್ಟ ಮೊಕ್ಕದ್ದಮೆ, ಜಾತಿ ನಿಂದನೆ ದೂರು ನೀಡುತ್ತೇನೆ ಎಂದು ಸ್ಥಳೀಯ ನಿವಾಸಿ, ಮಂಗಳೂರು ಪೊಲೀಸ್ ಸಿಬ್ಬಂದಿ ಸುರೇಶ್ ಸಭೆಯಲ್ಲಿ ತಿಳಿಸಿದರು.ಪಾಲಡ್ಕ ಪೂಪಾಡಿಕಲ್ಲು ಪರಿಸರದಲ್ಲಿ ದೊಡ್ಡ ಮಟ್ಟದಲ್ಲಿ ವಿದ್ಯುತ್ ಘಟಕದ ಕಾಮಗಾರಿ ನಡೆಯುತ್ತಿದ್ದು, ಪರಿಸರದವರು ತೊಂದರೆ ಅನುಭವಿಸುವಂತಾಗಿದೆ. ಸಾಧಕ- ಬಾಧಕ ಪರಿಗಣಿಸದೆ ಯಾವ ಮಾನದಂಡದಲ್ಲಿ ಘಟಕಕ್ಕೆ ಪರವಾನಗಿ ನೀಡಲಾಗಿದೆ ಎಂದು ಗ್ರಾಮಸ್ಥೆ ಗೀತಾ ಪ್ರಶ್ನಿಸಿದರು. ಕೆಪಿಟಿಸಿಎಲ್ ಮೂಲಕ ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಪಂಚಾಯಿತಿ ಪರವಾನಗಿ ಬೇಕಾಗಿಲ್ಲ. ಘಟಕದಿಂದ ತೊಂದರೆಯಾಗುತ್ತಿದ್ದಲ್ಲಿ ಲಿಖಿತ ರೂಪದಲ್ಲಿ ದೂರು ನೀಡಿದಲ್ಲಿ, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ಪಿಡಿಒ ರಕ್ಷಿತಾ ತಿಳಿಸಿದರು.ಸೈಬರ್ ಕ್ರೈಂಗೆ ಸಂಬಂಧಪಟ್ಟಂತೆ ಸ್ಥಳೀಯ ಠಾಣೆಗಳಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ? ಎಂದು ಗ್ರಾಮಸ್ಥ ಜಗದೀಶ್ ಪೂಜಾರಿ ಕೇಳಿದರು. ಸ್ಥಳೀಯ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸಿ, ಸೂಕ್ತ ಕ್ರಮಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಮೂಡುಬಿದಿರೆ ಪೊಲೀಸ್ ಉಪ ನಿರೀಕ್ಷಕ ನವೀನ್ ಹೇಳಿದರು.ಪೂಪಾಡಿಕಲ್ಲಿನಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಪಂಚಾಯಿತಿಯಿಂದ ಅನುದಾನ ಒದಗಿಸುವಂತೆ ವಾರ್ಡನ್ ವಿನಂತಿಸಿದರು. ಹಾಸ್ಟೆಲ್ ದುರಸ್ತಿಗೆ ಬೇಕಾದ ವಿಚಾರಗಳ ಕುರಿತು ನಿರ್ಣಯ ಮಾಡಿ ಎಂದು ಸುಚರಿತ ಶೆಟ್ಟಿ ಪಂಚಾಯಿತಿಗೆ ಸಲಹೆ ನೀಡಿದರು. ಶಾಸಕರ ಅನುದಾನಕ್ಕೂ ಪ್ರಯತ್ನಿಸಲಾಗುವುದು ಎಂದು ಭರವಸೆಯಿತ್ತರು. ಪೂಪಾಡಿಕಲ್ಲು ಹಾಗೂ ಜನತಾ ನಗರ ಅನರ್ಹರ ಹಕ್ಕುಪತ್ರಗಳನ್ನು ರದ್ದುಗೊಳಿಸಿ, ಅರ್ಹರಿಗೆ ಹಂಚುವಂತೆ ನಿವೃತ್ತ ಶಿಕ್ಷಕ ಟಿ.ಎನ್ ಕೆಂಬಾರೆ ಮನವಿ ಮಾಡಿದರು. ತಾಲೂಕು ಕಾರ್ಯಾನಿರ್ವಾಹಣಾಧಿಕಾರಿ ಕುಸುಮಾಧರ ಬಿ. ನೊಡೇಲ್ ಅಧಿಕಾರಿಯಾಗಿದ್ದರು.ಉಪಾಧ್ಯಕ್ಷ ಪ್ರವೀಣ್ ಸಿಕ್ವೇರಾ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.