ಹಾವಿನ ಬಗ್ಗೆ ಭಯ, ಮೂಢನಂಬಿಕೆ ಬಿಡಿ: ನಾಗರಾಜ ಬೆಳ್ಳೂರು

KannadaprabhaNewsNetwork | Published : Apr 8, 2025 12:32 AM

ಸಾರಾಂಶ

ಹಾವು ಕಡಿತಕ್ಕೆ ಒಳಗಾದವರು ಮನೆಮದ್ದು, ನಾಟಿ ಔಷಧಿ ಬಿಟ್ಟು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಅಪಾಯದಿಂದ ಪಾರಾಗಲು ಸಾಧ್ಯ ಎಂದು ಉರಗ ಸಂರಕ್ಷಕ ನಾಗರಾಜ ಬೆಳ್ಳೂರು ಹೇಳಿದರು.

ಸಾಗರದಲ್ಲಿ ಉರಗ ಸಂರಕ್ಷಕ ಸಲಹೆ

ಕನ್ನಡಪ್ರಭ ವಾರ್ತೆ ಸಾಗರ

ಹಾವು ಕಡಿತಕ್ಕೆ ಒಳಗಾದವರು ಮನೆಮದ್ದು, ನಾಟಿ ಔಷಧಿ ಬಿಟ್ಟು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಅಪಾಯದಿಂದ ಪಾರಾಗಲು ಸಾಧ್ಯ ಎಂದು ಉರಗ ಸಂರಕ್ಷಕ ನಾಗರಾಜ ಬೆಳ್ಳೂರು ಹೇಳಿದರು.

ತಾಲೂಕಿನ ಹೊನ್ನೆಸರದ ಚರಕ ಶ್ರಮಜೀವಿ ಆಶ್ರಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬಹುಮುಖಿ ಉಪನ್ಯಾಸದಲ್ಲಿ ಪರಿಸರದಲ್ಲಿ ಹಾವು ವಿಷದ ಕುರಿತು ಮಾತನಾಡಿದ ಅವರು, ಹಾವು ಕಡಿತವನ್ನು ಸರ್ಕಾರ ಅಧಿಸೂಚಿತ ರೋಗಗಳ ಪಟ್ಟಿಯಲ್ಲಿ ಸೇರಿಸಿರುವುದರಿಂದ ಪ್ರತಿ ಸಮುದಾಯ ಆರೋಗ್ಯ ಕೇಂದ್ರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಾವು ಕಡಿತಕ್ಕೆ ಔಷಧ ಲಭ್ಯವಿರುತ್ತದೆ. ಹಾಗಾಗಿ, ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಕಳೆದ ವರ್ಷ ಹಾವು ಕಡಿತದಿಂದ ವಿಶ್ವದಲ್ಲಿ ೮೪ ಸಾವಿರ ಜನರು ಮೃತಪಟ್ಟಿದ್ದಾರೆ. ಇದರಲ್ಲಿ ೫೮ ಸಾವಿರ ಭಾರತೀಯರಿದ್ದಾರೆ. ಇದು ಆತಂಕಕಾರಿ ಸಂಗತಿಯಾಗಿದ್ದು, ಇದಕ್ಕೆ ಹಾವು ಕುರಿತು ನಮ್ಮಲ್ಲಿನ ಮೂಢನಂಬಿಕೆಗಳೇ ಕಾರಣ. ಭಾರತದಲ್ಲಿ ಇದುವರೆಗೂ ೩೦೦ ಜಾತಿಯ ಹಾವುಗಳನ್ನು ಗುರುತಿಸಲಾಗಿದೆ. ಇದರಲ್ಲಿ ೭೨ ಜಾತಿಯ ಹಾವುಗಳು ಮಾತ್ರ ವಿಷಕಾರಿ. ಆಸ್ಟ್ರೇಲಿಯಾದಲ್ಲಿ ೨೫ಕ್ಕೂ ಹೆಚ್ಚು ಅಪಾಯಕಾರಿ ಹಾವುಗಳಿದ್ದರೂ ಅಲ್ಲಿ ಹಾವು ಕಡಿತದಿಂದ ಮೃತಪಡುವವರ ಸಂಖ್ಯೆ ಕೇವಲ ಎರಡರಿಂದ ಮೂರು ಜನ ಮಾತ್ರ. ಶೇ.೮೫ರಷ್ಟು ಪ್ರಕರಣಗಳಲ್ಲಿ ಹಾವು ಕಡಿದು ಗಾಯವಾಗಿರುತ್ತದೆ. ಆದರೆ, ವಿಷ ಬಿಟ್ಟಿರುವುದಿಲ್ಲ. ಗಾಬರಿ, ಭಯ, ಮೂಢನಂಬಿಕೆಯಿಂದ ಪ್ರಾಣ ಕಳೆದುಕೊಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ಹಾವು ನಮ್ಮ ಆಹಾರ ಸರಣಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಿಂದೆಲ್ಲಾ ಎರೆಹುಳುವನ್ನು ರೈತಮಿತ್ರ ಎನ್ನುತ್ತಿದ್ದೆವು. ಆದರೆ, ಅತಿಯಾದ ರಾಸಾಯನಿಕ ಬಳಸಿ ಎರೆಹುಳು ಸಂತತಿಯನ್ನು ನಾಶ ಮಾಡಿದ್ದೇವೆ. ಈಗ ನಿಜವಾದ ರೈತಮಿತ್ರ ಹಾವು. ಶೇ.೩೦ರಷ್ಟು ಇಲಿ, ಹೆಗ್ಗಣಗಳ ಪಾಲಾಗುತ್ತಿದ್ದ ಆಹಾರ ಬೆಳೆಗಳನ್ನು ಹಾವುಗಳು ಉಳಿಸಿ ಕೊಡುತ್ತಿವೆ. ಹಾವಿಗೆ ಹಾಲು ಎರೆಯುವುದು ತೀರ ಅವೈಜ್ಞಾನಿಕ. ಒಂದೊಮ್ಮೆ ಹಾವು ಹಾಲು ಸೇವಿಸಿದರೆ ಅಜೀರ್ಣವಾಗಿ ಸಾವನ್ನಪ್ಪುವ ಪ್ರಸಂಗ ಇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉರಗಪ್ರೇಮಿ ಕೊಟ್ರೇಶ್, ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ, ಉಪಾಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ರಮೇಶ್, ಸಿಒಒ ಟೆರೆನ್ಸ್ ಪೀಟರ್, ಜೀವನ್ಮುಖಿ ಸಂಸ್ಥೆಯ ಪ್ರತಿಭಾ ಎಂ.ವಿ., ಚರಕದ ಕೃಷ್ಣ, ಪದ್ಮಶ್ರೀ ಇನ್ನಿತರು ಹಾಜರಿದ್ದರು.

Share this article