ನಿಗದಿತ ಸ್ಥಳದಲ್ಲೇ ಬಸ್‌ ನಿಲ್ಲಿಸಿ: ಚಾಲಕರಿಗೆ ಡಿಸಿ ಸೂಚನೆ

KannadaprabhaNewsNetwork |  
Published : Jul 16, 2026, 01:45 AM IST
ಪೊಟೋ: 15ಎಸ್‌ಎಂಜಿಕೆಪಿ09ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನಗರದ ಆಟೋರಿಕ್ಷಾ ಸಂಚಾರಿ ವ್ಯವಸ್ಥೆಯಲ್ಲಿ ನ್ಯೂನತೆಗಳು ಮತ್ತು ಪರಿಹಾರ ಕ್ರಮಗಳ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ನಗರದ ಹಲವು ಸ್ಥಳಗಳನ್ನು ಗುರುತಿಸಿ, ನಗರ ಸಾರಿಗೆ ಬಸ್ಸುಗಳ ನಿಲುಗಡೆಗಾಗಿ ಅವಕಾಶ ನೀಡಲಾಗಿದೆ. ಆದಾಗ್ಯೂ ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸಿ, ಜನಸಂಚಾರಕ್ಕೆ ಅಡಚಣೆ ಮಾಡುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ನಿಗದಿಪಡಿಸಿದ ಸ್ಥಳದಲ್ಲಿಯೇ ಬಸ್ಸುಗಳನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ನಗರ ಸಾರಿಗೆ ಬಸ್‌ ಚಾಲಕರಿಗೆ ಖಡಕ್‌ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಹಲವು ಸ್ಥಳಗಳನ್ನು ಗುರುತಿಸಿ, ನಗರ ಸಾರಿಗೆ ಬಸ್ಸುಗಳ ನಿಲುಗಡೆಗಾಗಿ ಅವಕಾಶ ನೀಡಲಾಗಿದೆ. ಆದಾಗ್ಯೂ ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸಿ, ಜನಸಂಚಾರಕ್ಕೆ ಅಡಚಣೆ ಮಾಡುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ನಿಗದಿಪಡಿಸಿದ ಸ್ಥಳದಲ್ಲಿಯೇ ಬಸ್ಸುಗಳನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ನಗರ ಸಾರಿಗೆ ಬಸ್‌ ಚಾಲಕರಿಗೆ ಖಡಕ್‌ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಗರದ ಆಟೋರಿಕ್ಷಾ ಸಂಚಾರಿ ವ್ಯವಸ್ಥೆಯಲ್ಲಿ ನ್ಯೂನತೆಗಳು ಮತ್ತು ಪರಿಹಾರ ಕ್ರಮಗಳ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಬಸ್ಸುಗಳ ನಿಲುಗಡೆ ಕುರಿತು ಬಸ್ಸುಗಳ ಚಾಲಕರಿಗೆ ಕೂಡಲೇ ಸೂಚನೆ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನೆರೆಯ ಜಿಲ್ಲೆಗಳಲ್ಲಿ ಆಟೋದರ ಪರಿಷ್ಕರಣೆ ಮಾಡಿರುವ ಮಾನದಂಡಗಳನ್ನು ತುಲನಾತ್ಮಕವಾಗಿ ಅವಲೋಕಿಸಿ, ಸಂಬಂಧಿಸಿದ ಪ್ರಾಧಿಕಾರಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ದರ ಪರಿಷ್ಕರಣೆ ಕುರಿತು ಕ್ರಮ ವಹಿಸಲಾಗುವುದು ಎಂದರು.

ರ್‍ಯಾಪಿಡೋ ಅಥವಾ ಅಂತಹ ಯಾವುದೇ ಸಂಸ್ಥೆಯು ಸಾರಿಗೆ ಸೇವೆ ಆರಂಭಿಸಿದಲ್ಲಿ ಸರ್ಕಾರದ ಮಾರ್ಗಸೂಚಿಯನುಸಾರ ಅನುಮತಿ ನೀಡಲಾಗುವುದು. ಮಾನ್ಯತೆ ಪಡೆಯದೇ, ದಾಖಲೆಗಳಿಲ್ಲದೆ ಅನಧಿಕೃತವಾಗಿ ವಾಹನ ಚಲಾಯಿಸುತ್ತಿದ್ದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಸ್ ಟಿಕೆಟ್ ದರ ಸೇರಿದಂತೆ ಹೋಟೆಲ್ ಆಹಾರ ಇನ್ನಿತರ ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಗೆಯೇ ಆಟೋರಿಕ್ಷಾ ಪ್ರಯಾಣದ ಕನಿಷ್ಠ ದರವನ್ನು 40 ರು.ನಿಂದ 50 ರು.ಗೆ ಏರಿಸಬೇಕು. ಶಿವಮೊಗ್ಗ ನಗರ 4-5ಕಿ.ಮೀ. ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದು, ಪ್ರತಿನಿತ್ಯ ಸುಮಾರು 8000 ದಿಂದ 9000 ಆಟೋಗಳು ಸಂಚರಿಸುತ್ತಿವೆ. ನಗರದಲ್ಲಿ 10ಕಿ.ಮೀ.ಗೆ ಸೀಮಿತಗೊಳಿಸಲಾಗಿರುವ ಆಟೋ ಸಂಚಾರಿ ಪರವಾನಿಗೆಯನ್ನು 20 ಕಿ.ಮೀ ವಿಸ್ತರಿಸಬೇಕು. ನಗರದ ಸರ್ಕಾರಿ ಮತ್ತು ಖಾಸಗಿ ಬಸ್‌ನಿಲ್ದಾಣಗಳ ಎದುರು ಪ್ರಯಾಣಿಕರನ್ನು ಇಳಿಸುವ ಸಂದರ್ಭದಲ್ಲಿ ನೋ ಪಾರ್ಕಿಂಗ್‌ ಏರಿಯಾ ಎಂದು ಪೊಲೀಸ್‌ ಅಧಿಕಾರಿ ಸಿಬ್ಬಂದಿ ದಂಡ ವಿಧಿಸುತ್ತಿದ್ದಾರೆ. ಇಂತಹ ಸ್ಥಳಗಳಲ್ಲಿ ಪ್ರಯಾಣಿಕರು ಇಳಿದು ಹೋಗುವ ಅವಧಿಗೆ ವಿನಾಯಿತಿ ನೀಡುವಂತೆ ಆಟೋ ಚಾಲಕರು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳಕರ್, ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿ ದಿನೇಶ್ ಸೇರಿದಂತೆ ಆಟೋ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್‌... ರ್‍ಯಾಪಿಡೋ ಬೇಡ: ಆಟೋ ಚಾಲಕರ ಮನವಿಶಿವಮೊಗ್ಗ ನಗರದಲ್ಲಿ ಜನಸಂಚಾರಕ್ಕಾಗಿ ರ್‍ಯಾಪಿಡೋ ಸಂಸ್ಥೆಯು ದ್ವಿಚಕ್ರ ವಾಹನ ಸೇವೆ ಆರಂಭಿಸಿದೆ. ರ್‍ಯಾಪಿಡೋ ಸಂಚಾರಿ ಮಾರ್ಗಸೂಚಿ ಬಿಡುಗಡೆ ಆಗುವವರೆಗೆ ಈ ವಾಹನಗಳು ರಸ್ತೆಗೆ ಇಳಿಸದಂತೆ ಸೂಚನೆ ನೀಡಿ. ರ್‍ಯಾಪಿಡೋ ದ್ವಿಚಕ್ರ ವಾಹನಗಳಿಂದಾಗಿ ಆಟೋ ಚಾಲಕರ ಕುಟುಂಬದ ನಿರ್ವಹಣೆ ದುಸ್ತರವಾಗಿದೆ. ಅಲ್ಲದೆ ಇದರಿಂದ ಜನಸಾಮಾನ್ಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹೀಗಾಗಿ ಈ ಸಂಚಾರ ಸೇವೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂದು ಆಟೋ ಚಾಲಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

-----------

ಕೋಟ್‌....

ನಗರ ಸಾರಿಗೆ ಬಸ್ಸುಗಳ ಚಾಲಕರು ತಮ್ಮ ಬಸ್ಸುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ, ಜನರನ್ನು ತುಂಬಿಕೊಂಡು ಹೋಗುತ್ತಿರುವುದರಿಂದ ಜನರು ಆಟೋ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಸಿಟಿ ಬಸ್‌ಗಳ ಚಾಲಕರು ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕು. ರೋಗಿಗಳು, ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸುವ ಭರದಲ್ಲಿ ಕೆಲವು ಕಡೆಗಳಲ್ಲಿ ಸಿಗ್ನಲ್‌ ಜಂಪ್‌ ಆಗಿರುವ ಪ್ರಕರಣಗಳಲ್ಲಿ ಮಾನವೀಯ ನೆಲೆಯಲ್ಲಿ ವಿನಾಯಿತಿ ನೀಡಬೇಕು.

– ಅಕ್ರಮ್‌ ಪಾಶಾ, ಕಾರ್ಯದರ್ಶಿ, ಆಟೋ ಚಾಲಕರ ಸಂಘ, ಶಿವಮೊಗ್ಗ.

--------------------

ಕೋಟ್‌...

ನಗರದ ರೈಲ್ವೆ ಸ್ಟೇಷನ್‌ನಲ್ಲಿ ರೈಲು ಬರುವುದು ಕೆಲವೊಮ್ಮೆ ವಿಳಂಬವಾದಾಗ ರೈಲ್ವೆ ನಿಲ್ದಾಣದಲ್ಲಿ ಆಟೋಗಳ ಚಾಲಕರು ಗ್ರಾಹಕರಿಗಾಗಿ ಕಾದಿರುತ್ತಾರೆ. ಅಂತಹ ಸಂದರ್ಭದಲ್ಲಿ ಪೊಲೀಸರು ಆಟೋಗಳನ್ನು ನಿಲ್ಲಿಸದಂತೆ ನಿಷೇಧಿಸುತ್ತಿದ್ದಾರೆ. ಇದರಿಂದ ಆಟೋ ಚಾಲಕರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ರೈಲು ವಿಳಂಬ ಬರುವ ಅಥವಾ ಹೊರಡುವ ಸಂದರ್ಭದಲ್ಲಿ ವಾಹನಗಳ ನಿಲುಗಡೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು.

- ಅಲ್ಲಾಭಕ್ಷ, ಆಟೋ ಚಾಲಕರ ಸಂಘದ ಅ‍ಧ್ಯಕ್ಷ.

----------

ಕೋಟ್‌...

ಆಟೋ ಚಾಲಕರು ಶಾಲಾ ಮಕ್ಕಳ ಪ್ರಯಾಣದ ಸಂದರ್ಭದಲ್ಲಿ ಸಂಚಾರಿ ನಿಯಮಗಳನ್ನು ಅನುಸರಿಸಬೇಕು. ಆಟೋದಲ್ಲಿ ಚಾಲಕ-ಮಾಲಕರ, ಪೊಲೀಸ್‌ ಇಲಾಖೆಯ ನೋಂದಣಿ ಹೊಂದಿರುವ ಮಾಹಿತಿ ಫಲಕವನ್ನು ತಮ್ಮ ಆಟೋದಲ್ಲಿ ಅಳವಡಿಸಬೇಕು. ಆಟೋಗಳ ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಿಕೊಂಡಿರಬೇಕು.

- ಬಿ.ನಿಖಿಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಶಿವಮೊಗ್ಗ.

ಪೊಟೋ: 15ಎಸ್‌ಎಂಜಿಕೆಪಿ09

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನಗರದ ಆಟೋರಿಕ್ಷಾ ಸಂಚಾರಿ ವ್ಯವಸ್ಥೆಯಲ್ಲಿ ನ್ಯೂನತೆಗಳು ಮತ್ತು ಪರಿಹಾರ ಕ್ರಮಗಳ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನಪತ್ರಿಕೆ ಓದುವ ಹವ್ಯಾಸದಿಂದ ಜ್ಞಾನದ ವೃದ್ಧಿ: ಅಷ್ಟೂರೆ
ರೈತ ಸಂಘದ ಹನೂರು ತಾಲೂಕು ಅಧ್ಯಕ್ಷರಾಗಿ ಅಜ್ಜಿಪುರ ರಾಜಣ್ಣ ಆಯ್ಕೆ