ಕೆನಾಲ್‌ ಕಾಮಗಾರಿ ನಿಲ್ಲಿಸಿ: ಸಿದ್ದುಗೆ ಸೋಮಣ್ಣ ಪತ್ರ

KannadaprabhaNewsNetwork |  
Published : May 31, 2025, 12:00 AM IST
೩೦ ಟಿವಿಕೆ ೧ – ವಿ.ಸೋಮಣ್ಣ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಕೇಂದ್ರದ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುರುವೇಕೆರೆ

ಜಿಲ್ಲೆಯಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಕೇಂದ್ರದ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಅವರು ಈ ಯೋಜನೆ ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ಅಧ್ಯಯನಗೊಂಡ ಮೂಲ ಯೋಜನೆಯನ್ನು ಬದಿಗೊತ್ತಿ ಈ ಕಾಮಗಾರಿ ಮಾಡಲಾಗುತ್ತಿದೆ. ತುಮಕೂರು ಶಾಖಾ ಕಾಲುವೆ ಕಿ.ಮೀ 70.36 ರಲ್ಲಿ ನೀರಿನ ಹರಿವು ಸುಮಾರು 1289 ಕ್ಯೂಸೆಕ್ಸ್ ಇದೆ. ಈ ಪೈಕಿ ತುರುವೇಕೆರೆ, ಗುಬ್ಬಿ, ತುಮಕೂರು, ತುಮಕೂರು ಗ್ರಾಮಾಂತರ ಪ್ರದೇಶಗಳ 96 ಕಿಮೀ ಉದ್ದದ ಈ ಭಾಗಕ್ಕೆ ಸುಮಾರು 901 ಕ್ಯೂಸೆಕ್ಸ್ ನೀರಿನ ಹಂಚಿಕೆಯಾಗಿದೆ. ಅಲ್ಲದೇ ಕುಣಿಗಲ್ ತಾಲೂಕಿಗೆ 388 ಕ್ಯೂಸೆಕ್ಸ್ ನೀರು ಹಂಚಿಕೆಯಾಗಿದೆ. ಈಗ ಮಾಡಲಾಗುತ್ತಿರುವ ಕಾಮಗಾರಿಗೆ ಹೆಚ್ಚುವರಿ ನೀರು ನೀಡಲು ಹೇಗೆ ಸಾಧ್ಯ ಎಂದು ವಿ.ಸೋಮಣ್ಣ ಪ್ರಶ್ನಿಸಿದ್ದಾರೆ. ಈ ಯೋಜನೆಯಿಂದ ನಾಲ್ಕು ತಾಲೂಕುಗಳಿಗೆ ಮೀಸಲಾಗಿರುವ ನೀರಿನ ಕೊರತೆ ಉಂಟಾಗಲಿದೆ. ಇದೊಂದು ಅವೈಜ್ಞಾನಿಕವಾಗಿರುವ ಕಾಮಗಾರಿಯಾಗಿರುವುದರಿಂದ ಕೂಡಲೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಜಿಲ್ಲೆಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ದತೆಯನ್ನು ಶಮನ ಮಾಡಬೇಕೆಂದು ಮನವಿ ಮಾಡಿದ್ದಾರೆ. ಜಿಲ್ಲೆಯ ಅಮಾಯಕ ರೈತರು ಸಂಕಷ್ಠಕ್ಕೆ ಈಡಾಗುವ ಸಾಧ್ಯತೆ ಇದೆ. ಈ ಕಾಮಗಾರಿ ಮಾಡುವುದರಿಂದ ಕುಣಿಗಲ್ ತಾಲೂಕಿನ ರೈತರಿಗೂ ತೊಂದರೆಯಾಗಲಿದೆ. ಅವರಿಗೆ ಮೀಸಲಿಟ್ಟಿರುವ ನೀರಿಗೂ ತತ್ವಾರ ಆಗಲಿದೆ ಎಂದು ಸಚಿವ ವಿ.ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ಮಾಗಡಿ, ರಾಮನಗರ ಮತ್ತು ಕನಕಪುರ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪನಗೊಂಡನಹಳ್ಳಿ ಜಲಾಶಯಗಳ ಮೂಲಕ ಸಾಕಷ್ಟು ನೀರು ಕಲ್ಪಿಸಲು ಅವಕಾಶ ಇದೆ. ಆದರೂ ಸಹ ತುಮಕೂರು ಜಿಲ್ಲೆಯ ರೈತರನ್ನು ಅನಾವಶ್ಯಕವಾಗಿ ಗೊಂದಲಕ್ಕೆ ಒಳಪಡಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮುಖ್ಯಮಂತ್ರಿಗಳಲ್ಲಿ ನಿವೇದನೆ ಮಾಡಿಕೊಂಡಿದ್ದಾರೆ. ಈ ಯೋಜನೆಯ ಸಾಧಕ ಭಾಧಕಗಳನ್ನು ಅರಿಯದೇ ರಾಜ್ಯ ಸರ್ಕಾರ ತುರಾತುರಿಯಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ಅತ್ಯಂತ ಖಂಡನೀಯ. ಜನಸಾಮಾನ್ಯರು, ಬುದ್ದಿಜೀವಿಗಳು, ಈ ಯೋಜನೆಯ ವಿರುದ್ಧ ಬೀದಿಗಿಳಿದು ಸರ್ಕಾರ ವಿರುದ್ಧ ಬಹಿಷ್ಕಾರ ಹಾಕುವ ಮುನ್ನ ಎಚ್ಚೆತ್ತುಕೊಂಡು ಕೂಡಲೇ ಕಾಮಗಾರಿಗೆ ಲಗಾಮು ಹಾಕಬೇಕು. ತುಮಕೂರು ಜಿಲ್ಲೆಯ ರೈತರ ಹಿತಕಾಯುವ ದೃಷ್ಠಿಯಿಂದ ಈ ಅವೈಜ್ಞಾನಿಕ ಯೋಜನೆಯನ್ನೂ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸಚಿವ ವಿ.ಸೋಮಣ್ಣ ಆಗ್ರಹಿಸಿದ್ದಾರೆ. ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗಿ ಅಮಾಯಕ ಜನ ಪೊಲೀಸರ ಕ್ರಮಕ್ಕೆ ಒಳಗಾಗುವರು. ಇದಕ್ಕೆ ಅವಕಾಶ ನೀಡಬಾರದು. ಕಾನೂನು ಸುವ್ಯವಸ್ಥೆ ಹದಗೆಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಅವೈಜ್ಞಾನಿಕ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಕಾಮಗಾರಿ ಪ್ರಾರಂಭಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಜನತೆಯ ನಿದ್ದೆಗೆಡಿಸಿರುವ ಈ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಎಲ್ಲಾ ಅಹಿತಕರ ಘಟನೆಗೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊರೆ ಹೊರಬೇಕಾಗುತ್ತದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯದ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!