ನಾಲೆ ಸೀಳೋದು ನಿಲ್ಲಿಸಿ, ಮುಂಗಾರು ಹಂಗಾಮಿನ ನೀರು ನೀಡಿ

KannadaprabhaNewsNetwork |  
Published : Jun 27, 2025, 12:49 AM IST
26ಕೆಡಿವಿಜಿ4-ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಇತರರು ಇದ್ದರು. | Kannada Prabha

ಸಾರಾಂಶ

ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿರುವ ಏರಿಯನ್ನು ಕಾಂಕ್ರೀಟ್‌ ಹಾಕಿ, ಹೊಸದಾಗಿ ಏರಿ ನಿರ್ಮಿಸುವ ಮೂಲಕ ತ್ವರಿತವಾಗಿ ಕಾಮಗಾರಿ ಕೈಗೊಂಡು, ಮಳೆಗಾಲದ ಹಂಗಾಮಿನ ನೀರು ಹರಿಸಿ ಎಂದು ಭಾರತೀಯ ರೈತ ಒಕ್ಕೂಟದ ಹಿರಿಯ ಧುರೀಣ, ಬಿಜೆಪಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

- ಭದ್ರಾ ಡ್ಯಾಂ ಬಳಿ ಅವೈಜ್ಞಾನಿಕ ಕಾಮಗಾರಿ ನಡೆದರೆ ತೋಟಗಳೇ ಉಳಿಯೋದಿಲ್ಲ: ಎಸ್.ಎ.ರವೀಂದ್ರನಾಥ ಕಿಡಿನುಡಿ

- - -

- 172 ಗ್ರಾಮಗಳಿಗೆ ಭದ್ರಾ ಡ್ಯಾಂನಿಂದ ನೀರೊದಗಿಸುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ

- ಕಾಮಗಾರಿಯಿಂದ ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಲಕ್ಷಾಂತರ ರೈತರ ಬದುಕಿಗೆ ಸಂಕಷ್ಟ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿರುವ ಏರಿಯನ್ನು ಕಾಂಕ್ರೀಟ್‌ ಹಾಕಿ, ಹೊಸದಾಗಿ ಏರಿ ನಿರ್ಮಿಸುವ ಮೂಲಕ ತ್ವರಿತವಾಗಿ ಕಾಮಗಾರಿ ಕೈಗೊಂಡು, ಮಳೆಗಾಲದ ಹಂಗಾಮಿನ ನೀರು ಹರಿಸಿ ಎಂದು ಭಾರತೀಯ ರೈತ ಒಕ್ಕೂಟದ ಹಿರಿಯ ಧುರೀಣ, ಬಿಜೆಪಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಸರ್ಕಾರಕ್ಕೆ ತಾಕೀತು ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಬಲದಂಡೆ ನಾಲೆಯನ್ನು ಸೀಳಿದ್ದರಿಂದ ಮುಂಗಾರು ಹಂಗಾಮಿನಲ್ಲಿ ನೀರು ಹರಿಸಲು ಸಾಧ್ಯವಿಲ್ಲ. ಇದರಿಂದ ಬತ್ತ ನಾಟಿ ಮಾಡುವುದಿರಲಿ, ಕಷ್ಟಪಟ್ಟು ಕಟ್ಟಿದ ತೋಟಗಳನ್ನೂ ಉಳಿಸಿಕೊಳ್ಳಲು ಆಗುವುದಿಲ್ಲ ಎಂದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ 346 ಗ್ರಾಮ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಅಜ್ಜಂಪುರ ತಾಲೂಕುಗಳ 172 ಗ್ರಾಮಗಳಿಗೆ ಭದ್ರಾ ಡ್ಯಾಂನಿಂದ ನೀರೊದಗಿಸುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಕಾಮಗಾರಿ ಸ್ಥಳ ಭದ್ರಾ ಡ್ಯಾಂನ ಬಫರ್ ಝೋನ್ ಆಗಿದೆ. ಅಲ್ಲಿ ಯಾವುದೇ ಕಾಮಗಾರಿ ಕೈಗೊಂಡರೆ ಡ್ಯಾಂನ ಅಭದ್ರತೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಜಾಕ್ ವೆಲ್‌ ನಿರ್ಮಿಸಿ, ಪಂಪ್ ಮಾಡುವ ಮೂಲಕ ಕಚ್ಚಾ ನೀರನ್ನು ಹೊಸದುರ್ಗ, ತರೀಕೆರೆ, ಅಜ್ಜಂಪುರ ತಾಲೂಕುಗಳ ನೂರಾರು ಗ್ರಾಮಗಳಿಗೆ ಪೂರೈಸಬೇಕು. 2020ರಲ್ಲಿ ಜಲ ಸಂಪನ್ಮೂಲ ಇಲಾಖೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆ ಸಭೆಯಲ್ಲೇ ಈ ನಿರ್ಣಯವಾಗಿದೆ. ಆದರೆ, ಅದನ್ನೆಲ್ಲಾ ಗಾಳಿಗೆ ತೂರಿ, ಕಾಮಗಾರಿ ಕೈಗೊಂಡಿದ್ದಾರೆ. ಇದು ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಲಕ್ಷಾಂತರ ಅಚ್ಚುಕಟ್ಟು ರೈತರ ಬದುಕನ್ನೇ ಸಂಕಷ್ಟಕ್ಕೆ ನೂಕಲಿದೆ ಎಂದು ರವೀಂದ್ರನಾಥ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ರೈತರ ಒಕ್ಕೂಟದ ಮುಖಂಡ, ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಭದ್ರಾ ಬಲದಂಡೆ ನಾಲೆ ಮೂಲಕ ಜಿಲ್ಲೆಗೆ ನೀರು ಪೂರೈಕೆಯಾಗುತ್ತದೆ. ಬಲದಂಡೆ ನಾಲೆ ಕಲ್ಲುಗುಡ್ಡದ ಮಧ್ಯೆ ಹಾದುಬಂದಿದೆ. ಈಗ ಬಲದಂಡೆ ಸೀಳಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮೂರು ತಾಲೂಕಿಗೆ ನೀರು ಪೂರೈಸಲು ಪೈಪ್ ಲೈನ್‌ ಅಳವಡಿಸುವ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದಾರೆ. ಮೂರೂ ತಾಲೂಕುಗಳಿಗೆ ಕುಡಿಯುವ ನೀರು ಪೂರೈಸಲು ನಮ್ಮ ಅಭ್ಯಂತರವಿಲ್ಲ. ಭದ್ರಾ ಡ್ಯಾಂ ಹಿನ್ನೀರಿನಿಂದ ಜಾಕ್ ವೆಲ್‌ ನಿರ್ಮಿಸಿ, ನೀರು ಒಯ್ಯಲು ಸರ್ಕಾರ ಮುಂದಾಗಲಿ. ಯಾವುದೇ ಕಾರಣಕ್ಕೂ ನಮ್ಮ ಹೋರಾಟವಂತೂ ಇಲ್ಲಿಗೆ ನಿಲ್ಲುವುದಿಲ್ಲ ಎಂದರು.

ಬಿಜೆಪಿ ಹಿರಿಯ ಮುಖಂಡರಾದ ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ, ಲೋಕಿಕೆರೆ ನಾಗರಾಜ, ಅನಿಲಕುಮಾರ ನಾಯ್ಕ, ಧನಂಜಯ ಕಡ್ಲೇಬಾಳು, ಬಿ.ಕೆ. ಶಿವಕುಮಾರ ಬಾತಿ, ಬಿ.ಆರ್.ಸಚಿನ್, ಎನ್.ಎಚ್‌. ಹಾಲೇಶ ನಾಯ್ಕ, ಕೊಟ್ರೇಶ ಗೌಡ, ಪ್ರವೀಣ ರಾವ್ ಜಾಧವ್, ವೆಂಕಟೇಶ, ರವಿ, ಹೆಬ್ಬಾಳ ಉಮೇಶ ಇತರರು ಇದ್ದರು.

- - -

(ಕೋಟ್‌) ಕಾಂಗ್ರೆಸ್ ಸರ್ಕಾರ ₹1600 ಕೋಟಿ ವೆಚ್ಚದ ಈ ಬೃಹತ್ ಕಾಮಗಾರಿ ಕೈಗೊಳ್ಳುವ ಮುನ್ನ ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಜನಪ್ರತಿನಿಧಿಗಳು, ರೈತ ಮುಖಂಡರ ಜೊತೆಗೆ ಸೌಜನ್ಯಕ್ಕೂ ಸಭೆ ನಡೆಸಿಲ್ಲ, ಸಮಾಲೋಚನೆ ಮಾಡಿಲ್ಲ.

- ರಾಜಶೇಖರ ನಾಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ

- - -

-26ಕೆಡಿವಿಜಿ4:

ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ