ಕನ್ನಡಪ್ರಭ ವಾರ್ತೆ ಮಂಡ್ಯ
ಅಪ್ಪ- ಮಕ್ಕಳು (ಕುಮಾರಸ್ವಾಮಿ, ನಿಖಿಲ್) ಇನ್ನು ಎಷ್ಟು ವರ್ಷ ದೇವೇಗೌಡರ ಹೆಸರಲ್ಲಿ ರಾಜಕಾರಣ ಮಾಡುತ್ತಾರೋ ಗೊತ್ತಿಲ್ಲ. ಅವರ ಹೆಸರಿನಲ್ಲಿ ರಾಜಕಾರಣ ಮಾಡೋದು ಬಿಟ್ಟು ಸ್ವತಂತ್ರವಾಗಿ ರಾಜಕೀಯ ಮಾಡುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.ದೇವೇಗೌಡರ ಕುಟುಂಬ ಸಾಕಷ್ಟು ಚುನಾವಣೆ ನೋಡಿದೆ ಎಂಬ ನಿಖಿಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಿಖಿಲ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಥ್ಯಾಂಕ್ಸ್, ನಾನು ದೇವೇಗೌಡರ ಬಗ್ಗೆ ಮಾತನಾಡಿಲ್ಲ. ಆದರೂ ದೇವೇಗೌಡರ ಹೆಸರನ್ನು ಯಾಕೆ ಬಳಸುತ್ತಾರೆ. ಅವರಿಂದ ಪಕ್ಷ ಕಟ್ಟಲಾಗದಿರುವುದಕ್ಕೆ ದೇವೇಗೌಡರ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಛೇಡಿಸಿದರು.
ಜೆಡಿಎಸ್- ಬಿಜೆಪಿ ಅಧಿಕಾರದಲ್ಲಿದ್ದಾಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ೯ ಸ್ಥಾನಗಳಲ್ಲಿ ಗೆದ್ದಿದ್ದರು. ಅದರಲ್ಲಿ ನಾಲ್ವರನ್ನು ಅನರ್ಹರನ್ನಾಗಿ ಮಾಡಿದರು. ೨೪ ಗಂಟೆಯಲ್ಲಿ ನಾಮನಿರ್ದೇಶನದ ಮೂಲಕ ಸಿ.ಪಿ.ಉಮೇಶ್ ಅವರನ್ನು ಕರೆತಂದು ಅಧ್ಯಕ್ಷರನ್ನಾಗಿ ಮಾಡಿದರು. ೩ ಸ್ಥಾನದಲ್ಲಿ ಗೆದ್ದವರು ಆಡಳಿತ ಮಾಡಿದರು. ಆ ಸಮಯದಲ್ಲಿ ಜೆಡಿಎಸ್‌ಗೆ ಕಾನೂನು, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು. ಇದರ ಬಗ್ಗೆ ನಿಖಿಲ್ ಅವರಪ್ಪನಿಗೆ ಬುದ್ಧಿ ಹೇಳಲಿ ಎಂದು ಸಲಹೆ ನೀಡಿದರು.ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆಯುವುದಕ್ಕೆ ನಾವು ಹೇಳಿದೆವಾ. ಚುನಾವಣೆ ಎದುರಿಸಬೇಕಿತ್ತು. ಪಾಂಡವಪುರದಲ್ಲಿ ನಾವು ಗೆಲ್ಲುವುದಿಲ್ಲ. ಏಕೆಂದರೆ ನಮಗೆ ಅಲ್ಲಿ ಹೆಚ್ಚು ಮತಗಳಿಲ್ಲ. ಸೋಲುತ್ತೇವೆಂದು ಗೊತ್ತಿದ್ದರೂ ರೈತಸಂಘದ ಜೊತೆಗೂಡಿ ಹೋರಾಟ ಕೊಡುತ್ತಿದ್ದೇವೆ ಎಂದು ಹೇಳಿದರು.
ನಾವು ವಾಮಾಮಾರ್ಗದ ಚುನಾವಣೆ ಮಾಡುವುದಿಲ್ಲ. ಹಾಸನದಲ್ಲಿ ಜೆಡಿಎಸ್ ಗೆದ್ದಿದ್ದಾರೆ. ಅವರೂ ವಾಮಮಾರ್ಗ ಅನುಸರಿಸಿ ಚುನಾವಣೆ ಗೆದ್ದರಾ. ರೇವಣ್ಣ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್‌ಗೆ ಜೆಡಿಎಸ್ ವಾಮಮಾಗದಲ್ಲಿ ಅಧಿಕಾರ ಹಿಡಿದಿದೆ ಎಂದರೆ ಒಪ್ಪಿಕೊಳ್ಳುವಿರಾ ಎಂದು ಪ್ರಶ್ನಿಸಿದರು.ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಎರಡನ್ನೂ ಒಪ್ಪಿಕೊಂಡು ನಡೆಯಬೇಕು. ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಾನು ಯಾರ ವಿರುದ್ಧವೂ ಇದುವರೆಗೆ ತೊಡೆ ತಟ್ಟಿಯೂ ಇಲ್ಲ, ಲಘುವಾಗಿ ಮಾತನಾಡಿಯೂ ಇಲ್ಲ. ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು? ಹಗಲು ರಾತ್ರಿ ಮಂಡ್ಯ ಜಿಲ್ಲೆಯವರು ನಮ್ಮ ಅಭಿವೃದ್ಧಿ ನೋಡದೆ ಜೆಡಿಎಸ್‌ಗೆ ಓಟ್ ಹಾಕುತ್ತಾರೆ. ಆದರೆ ಆ ಪಕ್ಷದ ನಾಯಕರೆನಿಸಿಕೊಂಡವರು ಜೆಡಿಎಸ್ ಕಾರ್ಯಕರ್ತರ ಪರ ನಿಂತಿದ್ದಾರಾ ಎಂದು ಮತ್ತೊಮ್ಮೆ ಪ್ರಶ್ನಿಸಿದರು.