ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಚೈನ್ ತುಂಡಾದ ಪ್ರಕರಣ ಕೃಷ್ಣರಾಜಸಾಗರ ಜಲಾಶಯದಲ್ಲೂ ಆತಂಕ ಹೆಚ್ಚುವಂತೆ ಮಾಡಿದೆ. ಅಣೆಕಟ್ಟೆ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕುರಿತು ಅಧಿಕಾರಿಗಳ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಕೃಷ್ಣರಾಜಸಾಗರ ಜಲಾಶಯ ನಿರ್ಮಾಣಗೊಂಡು ೯೨ ವರ್ಷವಾಗಿದೆ. ಇದುವರೆಗೂ ಅಣೆಕಟ್ಟು ಸುರಕ್ಷತೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೂ, ಅಣೆಕಟ್ಟು ತುಂಬಿದ ಸಮಯದಲ್ಲಿ ನೀರಿನ ಒತ್ತಡವನ್ನು ನಿರ್ವಹಣೆ ಮಾಡುವುದಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸುವುದು ಉತ್ತಮ ಎಂಬ ಅಭಿಪ್ರಾಯಗಳು ಎಲ್ಲೆಡೆಯಿಂದ ವ್ಯಕ್ತವಾಗುತ್ತಿವೆ.ತುಂಗಭದ್ರಾ ಜಲಾಶಯದ ಒಂದು ಗೇಟ್‌ನಿಂದ ೩೫ ಸಾವಿರ ಕ್ಯುಸೆಕ್ ನೀರನ್ನು ಒಮ್ಮೆಲೆ ಹರಿಯಬಿಡಬಹುದು. ಕೆಆರ್‌ಎಸ್ ಅಣೆಕಟ್ಟೆಯ ಒಂದು ಗೇಟ್‌ನಿಂದ ೭೫೦೦ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. +೮೦ಯಿಂದ ನೀರಿನ ಒತ್ತಡ ಹೆಚ್ಚಾಗಿರುತ್ತದೆ. ಜಲಾಶಯಕ್ಕೆ ೨ ಲಕ್ಷ ಕ್ಯುಸೆಕ್‌ನಿಂದ ೩ ಲಕ್ಷ ಕ್ಯುಸೆಕ್‌ವರೆಗೆ ನೀರು ಹರಿದುಬಂದರೆ ಅಣೆಕಟ್ಟೆಯನ್ನು ಸಂರಕ್ಷಣೆ ಮಾಡುವ ದೃಷ್ಟಿಯಿಂದ ಸಾಪ್ಟ್ ಲಾಗ್ ಗೇಟ್ ಇದ್ದರೆ ಉತ್ತಮ ಎಂದು ಹೆಸರೇಳಲಿಚ್ಚಿಸದ ಕೆಲವು ಅಧಿಕಾರಿಗಳು ಹೇಳುತ್ತಿದ್ದಾರೆ.
ತುಂಗಭದ್ರ ಜಲಾಶಯದ ಕ್ರಸ್ಟ್‌ಗೇಟ್ ಕೊಚ್ಚಿ ಹೋದ ಘಟನೆಯಿಂದ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅಣೆಕಟ್ಟು ಸುರಕ್ಷತಾ ಸಮಿತಿಯವರನ್ನು ಜಲಾಶಯದ ಕ್ರಸ್ಟ್‌ಗೇಟ್‌ಗಳ ಪರಿಶೀಲನೆಗೆ ಆಹ್ವಾನಿಸಿದ್ದಾರೆ. ತಜ್ಞರ ತಂಡ ಅಣೆಕಟ್ಟೆ ತುಂಬಿರುವ ಸಮಯದಲ್ಲಿ ಜಲಾಶಯದ ಎಲ್ಲಾ ಕ್ರಸ್ಟ್‌ಗೇಟ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಮೆಟ್ಟೂರು ಜಲಾಶಯದಲ್ಲಿ ಆ ಕಾಲದಲ್ಲೇ ಸ್ಟಾಪ್ ಲಾಗ್ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಕೆಆರ್‌ಎಸ್‌ನಲ್ಲಿ ಅಳವಡಿಸಿಲ್ಲವೆಂಬ ಮಾತುಗಳು ವ್ಯಕ್ತವಾಗುತ್ತಿವೆ.ಕೃಷ್ಣರಾಜಸಾಗರ ಜಲಾಶಯಕ್ಕೆ ೧೭೩ ಗೇಟುಗಳು ೯೦ ವರ್ಷ ಹಳೆಯದಾಗಿದ್ದು, ಇವುಗಳನ್ನು ೨೦೧೧ರಲ್ಲಿ +೮೦ ಮಟ್ಟದ ೧೬ ಹೊಸ ಗೇಟುಗಳನ್ನು ೮.೫೦ ಕೋಟಿ ರು. ವೆಚ್ಚದಲ್ಲಿ ನವೀಕರಿಸಲಾಗಿದ್ದರೆ, ೨೦೧೩-೧೪ರಲ್ಲಿ +೬೦ ಮಟ್ಟದ ೩ ಹೊಸ ಗೇಟುಗಳು ಮತ್ತು+೫೦ ಮಟ್ಟದ ೩ ಹೊಸ ಗೇಟುಗಳನ್ನು ೨.೭೦ ಕೋಟಿ ರು. ವೆಚ್ಚದಲ್ಲಿ ಅಳವಡಿಸಲಾಗಿದೆ. ೨೦೧೯-೨೦ರಲ್ಲಿ ಡ್ರಿಪ್ ಫೇಸ್-೧ಯೋಜನೆಯಡಿ ೧೩೬ ಗೇಟುಗಳ ಆಧುನೀಕರಣ ಕಾಮಗಾರಿಯನ್ನು ೬೫.೬೦ ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಗೇಟುಗಳ ಆಧುನೀಕರಣಕ್ಕೆ ಒಟ್ಟು ೭೬.೮೦ ಕೋಟಿ ರು. ಖರ್ಚು ಮಾಡಿದೆ.
ಭವಿಷ್ಯದಲ್ಲಿ ಯಾವುದೇ ಸಣ್ಣ ಅನಾಹುತವೂ ಸಂಭವಿಸಿದಂತೆ ತಡೆಯುವ ಉದ್ದೇಶದಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕುರಿತಂತೆ ತಜ್ಞರ ತಂಡ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಕೆಲವರ ಪ್ರಕಾರ ಕೆಆರ್‌ಎಸ್ ಜಲಾಶಯದ +೮೦ ಅಡಿಯಿಂದ ೧೬ ಗೇಟ್‌ಗಳಿಗೆ ಸ್ಟಾಪ್‌ಲಾಗ್ ಗೇಟ್‌ಗಳನ್ನು ಅಳವಡಿಸುವುದು ಉತ್ತಮ. ಜಲಾಶಯದ ೧೫೨ಗೇಟ್‌ಗಳ ಪೈಕಿ +೮೦ಅಡಿಯಿಂದ ೧೬ಗೇಟ್‌ಗಳ ಮೂಲಕ ತಲಾ ೭೫೦೦ ಕ್ಯುಸೆಕ್ ನೀರನ್ನು ಹೊರಬಿಡಬಹುದು. ಉಳಿದ ಗೇಟ್‌ಗಳಲ್ಲಿ ೨೫೦೦ ಕ್ಯುಸೆಕ್ ಹೊರಹರಿವು ಸಾಮರ್ಥ್ಯವಿರುವುದಾಗಿ ಹೇಳುತ್ತಾರೆ.ಹಾಗಾಗಿ ಹೆಚ್ಚು ಹೊರಹರಿವು ಹೊಂದಿರುವ ಗೇಟ್‌ಗಳಿಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಸಿದರೆ ಮೂಲಗೇಟ್‌ಗಳಿಗೆ ತೊಂದರೆಯಾದರೆ ಅಥವಾ ಗೇಟ್‌ಗಳ ದುರಸ್ತಿ ಸಮಯದಲ್ಲಿ ಸ್ಟಾಪ್‌ಲಾಗ್ ಗೇಟ್‌ಗಳು ಸಹಕಾರಿಯಾಗಲಿವೆ. ಸಂಕಷ್ಟ ಸಮಯದಲ್ಲಿ ಡ್ಯಾಂನಿಂದ ನೀರು ಪೋಲಾಗದಂತೆ ತಡೆಯಲು ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಾವು ಪ್ರಸ್ತಾವನೆ ಸಲ್ಲಿಸಲು ಸಾಧ್ಯವಿಲ್ಲಕೆಆರ್ಎಸ್ಗೆ ಸ್ಟಾಪ್‌ಲಾಗ್ ಗೇಟ್‌ಗಳನ್ನು ಅಳವಡಿಸುವಂತೆ ನಾವು ನೇರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬರುವುದಿಲ್ಲ. ಅಣೆಕಟ್ಟು ತುಂಬಿರುವ ಸಮಯದಲ್ಲಿ ಅಣೆಕಟ್ಟು ಸುರಕ್ಷತಾ ಸಮಿತಿಯವರು ಕ್ರಸ್ಟ್‌ಗೇಟ್‌ಗಳನ್ನು ಪರಿಶೀಲನೆ ನಡೆಸಬೇಕು. ನಾವು ಈಗಾಗಲೇ ಪರಿಶೀಲನೆಗೆ ಸಮಿತಿಯವರನ್ನು ಆಹ್ವಾನಿಸಿದ್ದೇವೆ. ಅವರು ಪರಿಶೀಲನೆ ನಡೆಸಿ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಅಗತ್ಯವಿರುವ ಬಗ್ಗೆ ವರದಿ ಕೊಟ್ಟರೆ ಆಗ ನಾವು ಪ್ರಸ್ತಾವನೆ ಸಲ್ಲಿಸಬಹುದು.
- ರಘುರಾಮ್, ಅಧೀಕ್ಷಕ ಅಭಿಯಂತರ, ಕೃಷ್ಣರಾಜಸಾಗರ ಜಲಾಶಯ