ಭೂಮಿಗೆ ವಿಷ ಉಣಿಸುವುದನ್ನು ಬಿಟ್ಟು ನೈಸರ್ಗಿಕ ಕೃಷಿಗೆ ಬನ್ನಿ

KannadaprabhaNewsNetwork | Published : Jul 1, 2025 1:48 AM

ಒಂದು ನಾಟಿ ಹಸು ಸಾಕಿದರೆ ಒಂದು ಎಕರೆಯಲ್ಲಿ ಕಡಿಮೆ ಕಾಸಿನಲ್ಲಿ ನೈಸರ್ಗಿಕ ಕೃಷಿ ಮಾಡಲು ಸಾಧ್ಯ, ಭೂಮಿಗೆ ವಿಷ ಉಣಿಸುವುದನ್ನು ಇನ್ನಾದರೂ ನಿಲ್ಲಿಸಿ ಎಂದು ಸುಭಾಷ್‌ ಪಾಳೇಕಾರ್‌ ಕೃಷಿ ರಾಜ್ಯ ಸಂಚಾಲಕ ಪ್ರಸನ್ನಮೂರ್ತಿ ರೈತರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಒಂದು ನಾಟಿ ಹಸು ಸಾಕಿದರೆ ಒಂದು ಎಕರೆಯಲ್ಲಿ ಕಡಿಮೆ ಕಾಸಿನಲ್ಲಿ ನೈಸರ್ಗಿಕ ಕೃಷಿ ಮಾಡಲು ಸಾಧ್ಯ, ಭೂಮಿಗೆ ವಿಷ ಉಣಿಸುವುದನ್ನು ಇನ್ನಾದರೂ ನಿಲ್ಲಿಸಿ ಎಂದು ಸುಭಾಷ್‌ ಪಾಳೇಕಾರ್‌ ಕೃಷಿ ರಾಜ್ಯ ಸಂಚಾಲಕ ಪ್ರಸನ್ನಮೂರ್ತಿ ರೈತರಿಗೆ ಕರೆ ನೀಡಿದರು.ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ೨೦೨೫-೨೬ ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ನೈಸರ್ಗಿಕ ಕೃಷಿ ಆಂದೋಲನ (ಎನ್‌ಎಂಎನ್‌ಎಫ್‌) ಯೋಜನೆಯಡಿ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಒಂದು ನಾಟಿ ಹಸು ಸಾಕಿದರೆ ಹಸುವಿನಲ್ಲಿ ಸಿಗುವ ಸಗಣಿ ಹಾಗೂ ಗಂಜಲದಲ್ಲಿ ಜೀವಾಮೃತ ತಯಾರಿಸಿ, ಕನಿಷ್ಠ ಆರು ವರ್ಷಗಳ ಕಾಲ ನಿರಂತರವಾಗಿ ಭೂಮಿಗೆ ಜೀವಾಮೃತ ಉಣಿಸಿದರೆ ಸಾಕು ಉತ್ಕೃಷ್ಟ ಫಸಲು ನಿಮ್ಮ ಕೈ ಸೇರಲಿದೆ ಆ ಮಾರ್ಗದಲ್ಲಿ ತೊಡಗಿಸಿಕೊಳ್ಳಿ ಎಂದರು.

ಒಂದು ಜೀವಾಮೃತದಲ್ಲಿ ೩೦ ಸಾವಿರದಿಂದ ೫೦ ಸಾವಿರ ಕೋಟಿ ಜೀವ ಕಣಗಳು ಇರುತ್ತೆ, ೩೦ ಲಕ್ಷ ಕೋಟಿ ಜೀವರಾಶಿಗಳು ಇರುತ್ತವೆ. ಜೀವಾಮೃತ ಮಾಡಲು ಅಂಥದ್ದೇನು ಖರ್ಚಾಗುವುದಿಲ್ಲ ಕಡಿಮೆ ಖರ್ಚಿನಲ್ಲಿ ಭೂಮಿ ಫಲವತ್ತದೆ ಹೆಚ್ಚುತ್ತದೆ ಎಂದರು.

ಎರೆಹುಳು ಮಣ್ಣನ್ನು ತಿಂದು ಜೀವಿಸುತ್ತದೆ. ಸಸ್ಯ ತ್ಯಾಜ್ಯ ತಿಂದ ಎರೆಹುಳು ಮಣ್ಣು ಹುಳ ಆಗಲು ಸಾಧ್ಯವೇ ಇಲ್ಲ. ಗೊಬ್ಬರ, ಕ್ರಿಮಿ ನಾಶಕದಿಂದ ಮಣ್ಣಲ್ಲಿ ಜೀವಿಸುವ ಎರೆ ಹುಳು ಸಾಯುತ್ತಿವೆ ಇದಾಗಬಾರದು. ಜೀವಾಮೃತ ಭೂಮಿಗೆ ಹಾಕಿದಾಗ ಎರೆಹುಳು ಮಣ್ಣಿನಡಿಯಲ್ಲಿದ್ದರೂ ಸಗಣಿ ವಾಸನೆಗೆ ಮೇಲೆ ಬರುತ್ತವೆ. ಎರೆಹುಳ ಇಕ್ಕೆಗಳು ಬೆಳೆಗಳ ಬೇರಿಗೆ ಆಹಾರವಾಗುತ್ತದೆ. ಆಗ ಬೆಳೆಗಳಲ್ಲಿ ಉತ್ತಮ ಇಳುವರಿ ಬರುತ್ತದೆ. ಹಾಗಾಗಿ ರೈತರು ಗೊಬ್ಬರ, ಕ್ರೀಮಿನಾಶಕ್ಕೆ ಮಾರು ಹೋಗದೆ ನೈಸರ್ಗಿಕ ಕೃಷಿಯತ್ತ ಮುಖ ಮಾಡಿ ಎಂದು ಕಿವಿ ಮಾತು ಹೇಳಿದರು.

ಜೀವಾಮೃತ ಮಾಡಲು ೨೦೦ ಲೀಟರ್‌ನಷ್ಟು ಡ್ರಮ್ಮಿಗೆ ೧೦ ಕೆಜಿಯಷ್ಟು ಸಗಣಿ, ೧೦ ಲೀಟರ್‌ನಷ್ಟು ಗಂಜಲ, ದ್ವಿದಳ ಧಾನ್ಯಗಳುಳ್ಳ ೨ ಕೆಜಿಯಷ್ಟು ಹಿಟ್ಟು, ೨ ಕೆಜಿಯಷ್ಟು ಕಪ್ಪು ಬೆಲ್ಲ ಅಥವಾ ಹಣ್ಣಿನ ರಸ ೨ ಲೀಟರ್‌, ಜೊತೆಗೆ ಬದು ಮಣ್ಣು ಒಂದಿಡಿ ಹಾಕಿ ಗಾಳಿಯಾಡುವ ಬಟ್ಟಯಲ್ಲಿ ಡ್ರಮ್ಮು ಮುಚ್ಚಿಡಬೇಕು. ಬೇಸಿಗೆ ಕಾಲದಲ್ಲಾದರೆ ಜೀವಾಮೃತ ತಯಾರಿಸಿದ ದಿನದಿಂದ ಮೂರು ದಿನ ದಿನಕ್ಕೆ ಮೂರು ಬಾರಿ ತಿರುಗಿಸಬೇಕು, ನಾಲ್ಕು ದಿನಗಳಲ್ಲಿ ಭೂಮಿಗೆ ಹರಡಬೇಕು ಎಂದರು.

ಎರಡನೇ ಸಲ ಜೀವಾಮೃತ ಮಾಡುವವರು ಮೇಲ್ಕಂಡ ವಸ್ತುಗಳಲ್ಲಿ ಅರ್ಧದಷ್ಟು ಮಾಡಿ ಭೂಮಿಗೆ ಹಾಕುತ್ತ ಬಂದರೆ ಭೂಮಿ ಬಲಿಷ್ಟವಾಗುತ್ತದೆ. ರೋಗ ನಿರೋಧಕ ಶಕ್ತಿ ಬಂದು ಉತ್ತಮ ಬೆಳೆ ಜೊತೆಗೆ ಇಳುವರಿ ಯಾವುದೇ ಖರ್ಚಿಲ್ಲದೆ ಬರುತ್ತದೆ. ರೈತರು ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡಬೇಕು ಎಂಬ ಆಶಯದೊಂದಿಗೆ ಸುಭಾಷ್‌ ಪಾಳೇಕರ್‌ ಆರಂಭಿಸಿದ ನೈಸರ್ಗಿಕ ಕೃಷಿಯತ್ತ ಮುಖ ಮಾಡಿದರೆ ರೈತರು ಸಂತೋಷಕರ ಜೀವನ ನಡೆಸಲು ಆದಾಯ ಬರುತ್ತದೆ ಎಂದು ಸಲಹೆ ನೀಡಿದರು.

ಭೂಮಿ ಗಡುಸಾದರೆ, ಅಂತರ್ಜಲ ಕುಸಿಯುತ್ತೇ?:

ಇತ್ತೀಚಿನ ದಿನಗಳಲ್ಲಿ ಯಥೇಚ್ಛವಾದ ಗೊಬ್ಬರ,ಕ್ರೀಮಿನಾಶಕ ಬಳಕೆಯ ಜೊತೆಗೆ ನೀರು ಸಿಗುತ್ತದೆ ಎಂದು ಸಿಕ್ಕಾಬಟ್ಟೆಯಾಗಿ ನೀರನ್ನು ಭೂಮಿಗೆ ಕುಡಿಸುವ ಕಾರಣ ಭೂಮಿ ಗಡಸಾಗಿದೆ,ಭೂಮಿ ಗಡಸಾದರೆ ಮಳೆ ನೀರು ಭೂಮಿ ಕುಡಿಯಲ್ಲ, ಆಹಾರ ಕಲುಷಿತವಾಗುತ್ತಿದೆ.ಅಂತರ್ಜಲ ವಿಷವಾದರೆ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುತ್ತದೆ ಎಂದರು.

ಕಾರ್ಯಾಗಾರದಲ್ಲಿ ಮೂಡುಗೂರು ಮಠಾಧೀಶ ಇಮ್ಮಡಿ ಉದ್ದಾನಸ್ವಾಮೀಜಿ, ಸಹಾಯಕ ಕೃಷಿ ನಿರ್ದೇಶಕ ಶಶಿಧರ್‌ ಹಾಜರಿದ್ದರು.