ಸ್ಥಳೀಯ ಸಂಸ್ಥೆ ಚುನಾವಣೆಗೆ ಇಂದಿನಿಂದಲೇ ಪಕ್ಷ ಸಂಘಟನೆ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Published : Jul 1, 2025 1:48 AM

ಸಮರ್ಪಕ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡದ ಕಾಂಗ್ರೆಸ್ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿದ್ದು, 2028ಕ್ಕೆ ಎಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿರೀಕ್ಷೆಯಲ್ಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ನಾಡಿಗೆ ಕೊಟ್ಟ ಕೊಡುಗೆಯನ್ನು ಸಾರ್ವಜನಿಕರು ಸ್ಮರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದಲೇ ಜೆಡಿಎಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕರೆ ನೀಡಿದರು.

ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ನಡೆದ ಜನತಾದಳ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ರಾಜಕೀಯ ಪಕ್ಷಗಳಿಗೆ ಬೀರುನಂತಿರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆ ಎದುರಾಗುತ್ತಿದೆ. ಹೀಗಾಗಿ ಜೆಡಿಎಸ್ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಕಷ್ಟಕಾಲದಲ್ಲಿಯೂ ಕಾರ್ಯಕರ್ತರೊಂದಿಗೆ ಸದಾ ಇರುವುದಾಗಿ ಹೇಳಿದರು.

ಸಮರ್ಪಕ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡದ ಕಾಂಗ್ರೆಸ್ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿದ್ದು, 2028ಕ್ಕೆ ಎಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿರೀಕ್ಷೆಯಲ್ಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ನಾಡಿಗೆ ಕೊಟ್ಟ ಕೊಡುಗೆಯನ್ನು ಸಾರ್ವಜನಿಕರು ಸ್ಮರಿಸುತ್ತಿದ್ದಾರೆ ಎಂದರು.

ಜೆಡಿಎಸ್ ಅನ್ನು ತಳ ಮಟ್ಟದಲ್ಲಿಯೇ ಸಂಘಟಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಕ್ಷ ನೀಡಿರುವ ನಂಬರ್‌ಗೆ ಮಿಸ್ ಕಾಲ್ ಕೊಡುವ ಮೂಲಕ ಸದಸ್ಯರಾಗಬೇಕೆಂದು ತಿಳಿಸಿದರು.

ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಹೆಚ್ಚು ಇರುವಂತಹ ಕ್ಷೇತ್ರ. ಮುಂದಿನ ಚುನಾವಣೆಯಲ್ಲಿ ಅನ್ನದಾನಿ ಅವರನ್ನು ಶಾಸಕರಾಗಿ ಮಾಡಿದರೆ ಜೆಡಿಎಸ್ ಕಾರ್ಯಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ. ಯಾವುದೇ ಹೋರಾಟಕ್ಕೂ ಸಿದ್ದರಿದ್ದು, ಮಂಡ್ಯ ಜಿಲ್ಲೆಯ ಜನರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಜೆಡಿಎಸ್ ನಾಯಕರು ಸೋತಿರಬಹುದು ಸತ್ತಿಲ್ಲ. ಅನ್ನದಾನಿಯವರು ಸೋತಿರಬಹುದು ಆದರೆ, ಮನೆ ಸೇರಿಕೊಂಡಿಲ್ಲ. ಮುಂದಿನ ಚುನಾವಣೆಯಲ್ಲಿ ಶಕ್ತಿ ತೋರಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ತಲೆಬಾಗಲೇಬೇಕು. ಗೆಲುವು ಸೋಲು ಸರ್ವೇ ಸಾಮಾನ್ಯ ಎಂದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ಮೂರನೇ ಕುಡಿ ನಿಖಿಲ್‌ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಭವಿಷ್ಯ ನಾಯಕರಾಗಿದ್ದಾರೆ. ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಶಕ್ತಿ ಹೊಂದಿದ್ದಾರೆ. ಅಲ್ಲದೇ, ಇದು ಅಶ್ವಮೇಧ ಕುದುರೆ ತಾಕತ್ತು ಇದ್ದರೆ ಕಟ್ಟಿಹಾಕಿ ನೋಡೋಣ ಸವಾಲ್‌ ಹಾಕಿದರು.ಪಕ್ಷಕ್ಕೆ ಬಲ ತುಂಬಲು ಪ್ರತಿಯೊಬ್ಬರು ಮೊಬೈಲ್ ಮೂಲಕ ಮೀಸ್‌ಕಾಲ್ ಕೊಟ್ಟು ಸದಸ್ಯರಾಗಬೇಕು ಎಂದ ಅವರು, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿದೆ. ಪೊಲೀಸ್ ಇಲಾಖೆ ದೌರ್ಜನ್ಯ ನಿಲ್ಲಿಸದಿದ್ದರೇ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಗೆ ಹಲವು ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೊಡುಗೆ ಸೂನ್ಯವಾಗಿದೆ. ಕೇವಲ ಕಮಿಷನ್‌ಗಾಗಿ ಕಾಮಗಾರಿಯನ್ನು ನಡೆಸುತ್ತಿದ್ದಾರೆಂದು ಆರೋಪಿಸಿದರು.

ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು, ಮಹಿಳೆಯರು ಯುವ ನಾಯಕ ನಿಖಿಲ್‌ಕುಮಾರಸ್ವಾಮಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಘಟಕದ ವಿ.ಎಂ.ವಿಶ್ವನಾಥ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಜಯರಾಮ್, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ಟಿ.ನಂದಕುಮಾರ್, ಎಂ.ಟಿ.ಪ್ರಶಾಂತ್, ಆರ್.ಎನ್.ಸಿದ್ದರಾಜು, ನಾಗೇಶ್ ಹಾಗೂ ಮುಖಂಡರು ಇದ್ದರು.