ಹಳಿಯಾಳದಲ್ಲಿ ತಾಲೂಕಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಹಿಂದೂ ಜನಜಾಗೃತಿ ಸಮಿತಿ ಮನವಿ
ಸಿಇಟಿ ಕೇಂದ್ರಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗಿಸುವುದು ಹಾಗೂ ವಿವಾಹಿತ ಮಹಿಳೆಯರ ಮಂಗಳಸೂತ್ರ, ಕಾಲುಂಗುರ, ಮೂಗುತಿ, ಕಿವಿಯೋಲೆ, ಕೈದಾರ ಮುಂತಾದ ಧಾರ್ಮಿಕ ಚಿಹ್ನೆ ತೆಗೆಯಲು ಒತ್ತಾಯಿಸುವ ಅಸಂವಿಧಾನಿಕ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯು ಸೋಮವಾರ ಹಳಿಯಾಳದಲ್ಲಿ ತಾಲೂಕಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಕಳೆದ ತಿಂಗಳು ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷಾ ಸಮಯದಲ್ಲಿ ಬೆಂಗಳೂರಿನ ಮಡಿವಾಳದಲ್ಲಿರುವ ಕೇಂದ್ರದಲ್ಲಿ ವಿದ್ಯಾರ್ಥಿಗಳ ತಪಾಸಣೆ ನೆಪದಲ್ಲಿ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ಖಂಡನೀಯ. ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶ ನಿರಾಕರಿಸುವ ಬೆದರಿಕೆ ಹಾಕಿ, ಕೆಲವು ವಿದ್ಯಾರ್ಥಿಗಳ ಜನಿವಾರವನ್ನು ಸಿಬ್ಬಂದಿಗಳೇ ತೆಗೆದು ಕಸದ ಬುಟ್ಟಿಗೆ ಎಸೆದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ, ಹೀಗೆ ಬಲವಂತವಾಗಿ ತೆಗೆಯಿಸುವ ಕೃತ್ಯವೂ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆಸಿದ ನೇರ ದಾಳಿಯಾಗಿದೆ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.ಕಳೆದ ವರ್ಷವೂ ಬೀದರ್, ಶಿವಮೊಗ್ಗ ಸೇರಿದಂತೆ ಹಲವೆಡೆ ಇಂತಹುವುದೇ ಘಟನೆಗಳು ನಡೆದಾಗ, ಕರ್ನಾಟಕ ಉಚ್ಛ ನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಆದರೂ ಈ ವರ್ಷವೂ ಅಂತಹ ಘಟನೆ ಮರುಕಳಿಸಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.