ಕನ್ನಡದ ಮೇಲಾಗುತ್ತಿರುವ ದಾಳಿ, ದೌರ್ಜನ್ಯ ತಡೆಯಿರಿ

KannadaprabhaNewsNetwork |  
Published : Nov 19, 2026, 02:00 AM IST
ಧಾರವಾಡದ ಆಲೂರು ಭವನದಲ್ಲಿ ಬುಧವಾರ ಧಾರವಾಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಜರುಗಿತು.  | Kannada Prabha

ಸಾರಾಂಶ

ಕನ್ನಡ ನಾಡು-ನುಡಿ, ಸಾಹಿತ್ಯ, ಸಮಾಜ ಸಂಸ್ಕೃತಿಗಳ ಮೇಲೆ ನಡೆಯುತ್ತಿರುವ ದಾಳಿ, ದೌರ್ಜನ್ಯಗಳನ್ನು ತಡೆದು, ಸಾತ್ವಿಕ ಬದುಕು, ಸ್ವಸ್ಥ್ಯ ಸಮಾಜ, ಸದೃಢ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಕನ್ನಡ ಸಾಹಿತಿಗಳು ಇನ್ನಾದರೂ ತೊಡಗಿಸಿಕೊಳ್ಳಬೇಕು.

ಧಾರವಾಡ:

ಕನ್ನಡ ನಾಡು-ನುಡಿ, ಸಾಹಿತ್ಯ, ಸಮಾಜ ಸಂಸ್ಕೃತಿಗಳ ಮೇಲೆ ನಡೆಯುತ್ತಿರುವ ದಾಳಿ, ದೌರ್ಜನ್ಯಗಳನ್ನು ತಡೆದು, ಸಾತ್ವಿಕ ಬದುಕು, ಸ್ವಸ್ಥ್ಯ ಸಮಾಜ, ಸದೃಢ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಕನ್ನಡ ಸಾಹಿತಿಗಳು ಇನ್ನಾದರೂ ತೊಡಗಿಸಿಕೊಳ್ಳಬೇಕೆಂದು ಧಾರವಾಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.

ಇಲ್ಲಿಯ ಆಲೂರು ವೆಂಕಟರಾವ್‌ ಭವನದಲ್ಲಿ ಬುಧವಾರ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ 9ನೇ ಶತಮಾನದಿಂದ ಇಲ್ಲಿಯ ವರೆಗೆ ವೈವಿಧ್ಯಮಯ ವಸ್ತು, ರೂಪ, ಧೋರಣೆಗಳನ್ನು ಇಟ್ಟುಕೊಂಡು ಸಾಗಿ ಬಂದಿದೆ. ಆದರೆ, ಪ್ರಸ್ತುತ ಅದು ಚರ್ವಿತ ಚರ್ವಣ ಸ್ಥಿತಿಯಲ್ಲಿದೆ. ಹೊಸ ಹೊಳಹುಗಳು ಕಾಣುತ್ತಿಲ್ಲ. ಎದ್ದುಕಾಣುವ ಹೊಸತನ ತೋರುತ್ತಿಲ್ಲ. ಕಾಲಮಾನದ ಅಗತ್ಯಕ್ಕೆ ಅನುಗುಣವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು ಜಾರಿಗೊಳ್ಳಬೇಕಿದೆ ಎಂದರು.

ಇತ್ತೀಚೆಗೆ ನಡೆದ ಜೆನ್‌ಜಿ ಚಳವಳಿಗಳು ಸಾಮಾಜಿಕ ಆಂದೋಲನದ ಮತ್ತು ಪರಿವರ್ತನೆಯ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟಿವೆ. ಈ ಜಾಗೃತಿಯನ್ನು ಜೀವಂತವಾಗಿಡಲು ಉತ್ಸಾಹದಲ್ಲಿರುವ ಯುವ ಜನಾಂಗಕ್ಕೆ ಸ್ಪಷ್ಟ ಗುರಿ ನಿಗದಿ ಮಾಡಿಕೊಳ್ಳಲು ಸರಿಯಾದ ಮಾರ್ಗದರ್ಶನ ಅಗತ್ಯವಿದೆ ಎಂದ ಅವರು, ಯುರೋಪ ಸೇರಿದಂತೆ ಅನೇಕ ಸಣ್ಣ ಪಾಶ್ಚಿಮಾತ್ಯ ದೇಶಗಳು ತಮ್ಮದೇ ಆದ ಓದು, ಕಲಿಕೆ, ಉದ್ಯೋಗ, ಬದುಕು, ಭಾಷೆ, ಸಮಾಜಗಳನ್ನು ಕಟ್ಟಿಕೊಂಡು ಸ್ವಾವಲಂಬಿ ಬದುಕು ನಡೆಸುತ್ತಿವೆ. ಕನ್ನಡಿಗರೂ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ತಮ್ಮ ಬದುಕು ಕಟ್ಟಿಕೊಳ್ಳಲು ಸಮರ್ಥರಾಗಬೇಕು ಎಂಬ ಸಲಹೆಯನ್ನು ಡಾ.ರಾಜೂರ ಹೇಳಿದರು.

ಶೈಕ್ಷಣಿಕ ಘನತೆ ಉಳಿಯಲಿ:

ಧಾರವಾಡ ಸ್ವತಂತ್ರ ನಗರ ಪಾಲಿಕೆ ಬೇಗ ಅಸ್ತಿತ್ವಕ್ಕೆ ಬಂದು ನಗರದ ಸರ್ವಾಂಗೀಣ ಅಭಿವೃದ್ಧಿಯಾಗುವುದು ಸೇರಿದಂತೆ ಕೇಂದ್ರ ಸ್ಥಾನದಲ್ಲಿರುವ ಕಲಾಭವನ ಸಾಂಸ್ಕೃತಿಕ ಚಟುವಟಿಕೆ ಇಲ್ಲದೇ ಭೂತ ಬಂಗ್ಲೆಯಾಗಿದೆ. ಸುಸಜ್ಜಿತಗೊಳಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಂತೆ ಮಾಡಬೇಕು. ಗೋಡೆಕಟ್ಟಿ ಬಂಧಿಸಿದಂತೆ ಕಟಪಾ ಮೈದಾನ ಸಾರ್ವಜನಿಕ ಸಮಾರಂಭಕ್ಕೆ ಮುಕ್ತಗೊಳಿಸಬೇಕು. ಈ ಕುರಿತು ರಚನೆಯಾದ ಸಮಿತಿಗೆ ಸಾರ್ವಜನಿಕರ ಬೆಂಬಲ ಬೇಕು. ಜತೆಗೆ ಟ್ಯೂಶನ್‌ ಮಾಫಿಯಾ ಕೇಂದ್ರವಾಗಿರುವ ಧಾರವಾಡ ಮೊದಲಿನಂತೆ ಶೈಕ್ಷಣಿಕ ಘನತೆ ಉಳಿಸಿಕೊಳ್ಳಬೇಕು ಎಂದು ರಾಜೂರ ಸಲಹೆ ನೀಡಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಸಾಹಿತ್ಯ ಬದುಕಿನ ನೋವು ನಿವಾರಿಸಿ, ಪ್ರೀತಿ ಮತ್ತು ಸ್ನೇಹ ಬೆಳೆಸುತ್ತದೆ. ಪುಸ್ತಕ ಮಸ್ತಕ ಬೆಳೆಸಲಿದೆ. ಕನ್ನಡ ಉಳಿದು, ಬೆಳೆದು ಬರಲು ಪ್ರತಿಯೊಬ್ಬ ಕನ್ನಡಿಗರು ಕನ್ನಡ ಪುಸ್ತಕ ಹಾಗೂ ಪತ್ರಿಕೆಗಳು ಕೊಂಡು ಓದುವ ಹವ್ಯಾಸ ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಕೃಷಿ ವಿವಿ ಕುಲಪತಿ ಡಾ. ಎನ್‌.ಬಿ. ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ನಾಡಿನ ಖ್ಯಾತ ಸಾಹಿತಿ ನಾಡೋಜ ಗೊ.ರು. ಚೆನ್ನಬಸಪ್ಪನವರು ಸಮ್ಮೇಳನ ಉದ್ಘಾಟಿಸಬೇಕಿತ್ತು. ಅನಾರೋಗ್ಯ ಹಿನ್ನೆಲೆಯಲ್ಲಿ ಗೈರಾದರು.

ಸಮ್ಮೇಳನದಲ್ಲಿ ಮಹಾಂತೇಶ ನರೇಗಲ್ಲ ರಚಿಸಿದ ಕನ್ನಡದ ಕಣ್ಮಣಿಗಳು ಹಾಗೂ ಲಕ್ಷ್ಮಿ ದೊಡಮನಿ ರಚಿಸಿದ ನಾವ್ ರೀ ಉತ್ತರ ಕರ್ನಾಟಕದ ಮಂದಿ ಕೃತಿಗಳ ಬಿಡುಗಡೆ ನಡೆಯಿತು. ಕಸಾಪ ಧಾರವಾಡ ಜಿಲ್ಲಾ ಘಟಕದ ಡಾ. ಲಿಂಗರಾಜ ಅಂಗಡಿ, ಪದಾಧಿಕಾರಿಗಳಾದ ಡಾ. ಎಸ್.ಎಸ್. ದೊಡಮನಿ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಜಿನದತ್ತ ಹಡಗಲಿ, ನಾರಾಯಣ ಭಜಂತ್ರಿ ಇದ್ದರು.

ಬಸವಣ್ಣನವರಿಗೆ ಟೀಕೆ-ಖಂಡನೆ:

ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಗೌರವಿಸಿದ ಬಸವಣ್ಣನವರನ್ನು ಕಳ್ಳ, ಕೊಲೆಗಾರ ಎಂದು ಸಂಬೋಧಿಸುವ ಮೂಲಕ ಅವರ ಹೆಸರಿಗೆ ಕಳಂಕ ಮಾಡುತ್ತಿರುವ, ಸ್ವಯಂ ಘೋಷಿತ ಸಂಶೋಧಕನೆಂದು ಹೇಳಿಕೊಳ್ಳುವ ಅಸಭ್ಯ ವರ್ತನೆಯ ವ್ಯಕ್ತಿಗಳ ಬಾಯಿಗೆ ಸರ್ಕಾರ ಬೀಗ ಮುದ್ರೆ ಹಾಕಬೇಕು. ಜತೆಗೆ ವಾಕ್‌ ಸ್ವಾತಂತ್ರ್ಯವಿದೆ ಎಂದು ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಸ್ವಾಮಿ ವೇಷದ ಕಪಟ ಸನ್ಯಾಸಿಗೆ ಸಾಮಾಜಿಕ ಬಹಿಷ್ಕಾರ ಹಾಕಲು ಸರ್ಕಾರ ಕ್ರಮ ಕೈಗೊಳ್ಳಲು ಸರ್ವಾಧ್ಯಕ್ಷ ಡಾ. ವೀರಣ್ಣ ರಾಜೂರ ಸರ್ಕಾರಕ್ಕೆ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ