ಶಿವಮೊಗ್ಗ: ಹೊಳೆಹೊನ್ನೂರು ಹಾಗೂ ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜೂಜೂ, ಗಾಂಜಾ ಮಾರಾಟ, ಓಸಿ, ಐಪಿಎಲ್ ಬೆಟ್ಟಿಂಗ್ ಹಾಗೂ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದ್ದು, ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರೊಂದಿಗೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮತ್ತು ಶಾಸಕಿ ಶಾರದಾಪೂ ರ್ಯಾನಾಯ್ಕ್ ಶಿವಮೊಗ್ಗ ಎಸ್ಪಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಧನಂಜಯ ಸರ್ಜಿ, ಭದ್ರಾವತಿ ಹೊಳೆಹೊನ್ನೂರು ಮತ್ತು ಆನವೇರಿ ಭಾಗಗಳಲ್ಲಿ ಜೂಜು, ಗಾಂಜಾ ಮಾರಾಟ, ಓ.ಸಿ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರುಗಳು ಬಹಳ ದಿನಗಳಿಂದ ಕೇಳಿ ಬರುತ್ತಿವೆ. ಇತ್ತೀಚಿಗೆ ಓ.ಸಿ, ಇಸ್ಪೀಟ್ ಅಲ್ಲದೆ ಆನ್ಲೈನ್ ಜೂಜುಗಳು ಕೂಡ ಹೆಚ್ಚಾಗಿದ್ದು ಯುವಕರು ಇದರ ಚಟಕ್ಕೆ ಬಿದ್ದು ಲಕ್ಷಾಂತರ ರುಪಾಯಿಗಳನ್ನೂ ಕಳೆದುಕೊಂಡು ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ನಾವು ಕೇಳುತ್ತಿದ್ದೇವೆ. ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಸಂದರ್ಭದಲ್ಲಿ ಯುವಕರು ಈ ಚಟಗಳಿಗೆ ಬಿದ್ದು ಜೀವನ ಹಾಳುಮಾಡಿಕೊಳ್ಳುತ್ತಿರುವುದು ಬೇಸರ ತರಿಸುತ್ತಿದೆ ಎಂದರು.ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡುವ ಸಂದರ್ಭದಲ್ಲೂ 200 ರಿಂದ 300 ದಂಡ ಕಟ್ಟಿಸಿಕೊಂಡು ಬಿಡುತ್ತಾರೆ. ಹಾಗಾಗಿ ಎಸ್.ಪಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಸ್.ಪಿ ಅವರು ಕೂಡ ತಡೆಗಟ್ಟಲು ಕ್ರಮ ತೆಗೆದುಕೊಳ್ಳುವುದಾಗಿ ಹಾಗೂ ಕಿಂಗ್ ಪಿನ್‌ಗಳನ್ನೂ ಮೊದಲು ಹಿಡಿದು ಗಡಿಪಾರು ಮಾಡತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ಹೊಳೆಹೊನ್ನೂರು ಮತ್ತು ಆನವೇರಿ ಭಾಗಗಳಲ್ಲಿ ಓ.ಸಿ, ಇಸ್ಪೀಟ್, ಜೂಜು ಹಾವಳಿ ಹೆಚ್ಚಾಗುತ್ತಿದ್ದು, ಸಾಕಷ್ಟು ಯುವಕರು ಲಕ್ಷಾಂತರ ರುಪಾಯಿಗಳನ್ನು ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದ್ದರು ಹಾಗಾಗಿ ಇಂದು ಹೊಳೆಹೊನ್ನೂರು ಮತ್ತು ಆನವೇರಿ ಗ್ರಾಮಸ್ಥರೊಂದಿಗೆ ಎಸ್.ಪಿ ಕಚೇರಿಗೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಿದ್ದೇವೆ. ಯುವ ಪೀಳಿಗೆಯನ್ನು ಇವುಗಳ ಚಟಕ್ಕೆ ದೂಡಿ ಹಾಳು ಮಾಡುವುದಕ್ಕೆ ಕೆಲವೊಂದು ತಂಡಗಳು ನಮ್ಮ ಭಾಗಗಳಲ್ಲಿ ಹುಟ್ಟಿಕೊಂಡಿವೆ. ಈ ಬಗ್ಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ಕೂಡ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.