ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಎಚ್ಚರಿಕೆ
ಬಡ ವ್ಯಾಪಾರಸ್ಥರ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಮಹಾನಗರ ಪಾಲಿಕೆಯ ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಜೀವನ ನಿರ್ವಹಣೆಗೋಸ್ಕರ ಸಾರ್ವಜನಿಕ ಪ್ರದೇಶದಲ್ಲಿ ಬಡವರು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡಿರುತ್ತಾರೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಡವರ ಪರವಾಗಿ ಹೋರಾಟ ನಡೆಸುತ್ತಿದ್ದೇನೆ. ನಮ್ಮದೇ ಸರ್ಕಾರ ಇದ್ದರೂ ಬಡವರ ಹಿತಾಸಕ್ತಿಗಾಗಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದರು.ಧಾರವಾಡದ ವಿವಿಧೆಡೆ ಇರುವ ಡಬ್ಬಾ ಅಂಗಡಿಗಳನ್ನು, ತರಕಾರಿ, ಹಣ್ಣು ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವುದು ಸರಿಯಲ್ಲ. ಲೋಕಾಯುಕ್ತ ಕಚೇರಿಗೆ ಈ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಬಡ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುವ ಕ್ರಮ ಕೈಗೊಂಡಿದ್ದು ಸರಿಯಲ್ಲ. ಮಹಾನಗರ ಪಾಲಿಕೆಯ ಅನುಮತಿ ಇದ್ದರೂ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದು ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಬಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಕಾರ್ಯಾಚರಣೆ ನಡೆಸಬಾರದು. ಬಡವರ ಬದುಕು ಮತ್ತು ಜೀವನೋಪಾಯದ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ ಎಂದು ತಿಳಿಸಿದರು.