ಧಾರವಾಡ:
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ರಾಜ್ಯದ ಲಕ್ಷಾಂತರ ಕಟ್ಟಡ ಕಾರ್ಮಿಕರ ಬೆವರಿನ ದುಡಿಮೆಯಿಂದ ಸಂಗ್ರಹವಾಗಿರುವ ನಿಧಿಯನ್ನು ಕಲ್ಯಾಣ ಮಂಡಳಿಯ ಘೋಷಿತ ಹಕ್ಕುಗಳ ಜಾರಿಗಾಗಿ ಬಳಸುವ ಬದಲು, ಭ್ರಷ್ಟಾಚಾರಕ್ಕೆ ಇಂಬು ಕೊಡುವ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಖಂಡನೀಯ. ಮಂಡಳಿಯು ಹಣದ ಕೊರತೆಯ ನೆಪ ಹೇಳಿ ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿದೆ. ಇದರಿಂದಾಗಿ ಕಾರ್ಮಿಕರ ಮಕ್ಕಳು ಶಿಕ್ಷಣವನ್ನೇ ನಿಲ್ಲಿಸುವಂತಾಗಿದೆ. ಹಲವಾರು ಕ್ಲೇಮ್‌ಗಳು ಆದೇಶವಾಗಿದ್ದರೂ ಹಣ ಖಾತೆಗೆ ಸೇರಿಲ್ಲ. ಪಿಂಚಣಿಗೆ ಅನಗತ್ಯ ನಿರ್ಬಂಧ ಹೇರುತ್ತಿದ್ದಾರೆ ಎಂದು ಕಿಡಿಕಾರಿದರು.
ಆರೋಗ್ಯ, ಪಿಂಚಣಿ, ಮಕ್ಕಳ ಶಿಕ್ಷಣ ದಂತಹ ಬದುಕಿನ ವಿಷಯಗಳಿಗೆ ಯೋಜನೆ ಜಾರಿಗೊಳಿಸುವ ಬದಲು ಹಣ ನುಂಗುವ ವಿವಿಧ ಹೆಸರಿನ ಕಿಟ್ ನೀಡಿಕೆ, ವಸ್ತುಗಳ ಖರೀದಿ ಮತ್ತು ವಿತರಣೆಯಲ್ಲಿಯೇ ಕಲ್ಯಾಣ ಮಂಡಳಿ ತೊಡಗಿದೆ. ಆದ್ದರಿಂದ ಕಟ್ಟಡ ಕಾರ್ಮಿಕರ ನೈಜ ಬೇಡಿಕೆಗಳಾದ, ವಿವಿಧ ಹೆಸರಿನ ಕಿಟ್ ವಿತರಣೆಯನ್ನು ತಕ್ಷಣವೇ ನಿಲ್ಲಿಸಿ, ಅದರ ಸಂಪೂರ್ಣ ಹಣವನ್ನು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು. 3 ವರ್ಷ ಬಾಕಿಯಿರುವ ಶೈಕ್ಷಣಿಕ ಧನಸಹಾಯವನ್ನು ಹಳೆಯ ದರದಲ್ಲಿ ಕೂಡಲೇ ಪಾವತಿಸಬೇಕು. ಶಾಲಾ ಕಿಟ್‌ಗಳಿಗೆ ಮೀಸಲಿಟ್ಟಿರುವ ₹ 115 ಕೋಟಿ ಮಕ್ಕಳಿಗೆ ಶೈಕ್ಷಣಿಕ ಧನಸಹಾಯವಾಗಿ ವಿತರಿಸಬೇಕು. ಎಲ್ಲ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರಿಗೆ ಗುಣಮಟ್ಟದ ನಗದುರಹಿತ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯ ಖಾತರಿಪಡಿಸಬೇಕು. 60 ವರ್ಷ ತುಂಬಿದ ಕಟ್ಟಡ ಕಾರ್ಮಿಕರಿಗೆ ತಾರತಮ್ಯವಿಲ್ಲದೆ ಪಿಂಚಣಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಯೋಗಪ್ಪ ಜ್ಯೋತೆಪ್ಪನವರ, ರುದ್ರಕಾಂತ್ ವಾಣಿ, ಅಲ್ಲಾಭಕ್ಷ್ ಕಿತ್ತೂರ, ರಿಯಾಜ್ ತಡಕೋಡ, ಮುಕ್ತಂ ಶಾಪುರ್, ಬಾಬುಸಾಬ್ ಬಿಜಾಪುರ್ ಇದ್ದರು.