ನೀರಿನ ಕೊರತೆಯಿಂದ ಸೊರಗಿದ್ದ ತುಂಗಭದ್ರಾ ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ ಒಳಹರಿವು ಹೆಚ್ಚಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ನೀರಿನ ಕೊರತೆಯಿಂದ ಸೊರಗಿದ್ದ ತುಂಗಭದ್ರಾ ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ ಒಳಹರಿವು ಹೆಚ್ಚಿದ್ದು, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ತುಂಗಭದ್ರಾ ಎಡ ಹಾಗೂ ಬಲದಂಡೆ ಕಾಲುವೆಗಳನ್ನು ಅವಲಂಬಿಸಿರುವ ಲಕ್ಷಾಂತರ ರೈತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ಈ ಬಾರಿ ಮುಂಗಾರು ಹಂಗಾಮಿನ ಬೆಳೆ ಕೈತಪ್ಪುವ ಭೀತಿ ಎದುರಿಸುತ್ತಿದ್ದ ರೈತರು ಈಗ ಜಲಾಶಯ ಭರ್ತಿಯಾಗಿ ಕಾಲುವೆಗಳಿಗೆ ನೀರು ಹರಿಯುವ ವಿಶ್ವಾಸದಲ್ಲಿದ್ದಾರೆ.

ಕಳೆದ ಕೆಲವು ವಾರಗಳಿಂದ ಜಲಾಶಯದ ನೀರಿನ ಮಟ್ಟ ಕುಸಿದಿದ್ದರಿಂದ ಭತ್ತ, ಮೆಕ್ಕೆಜೋಳ, ಹತ್ತಿ ಹಾಗೂ ಇತರೆ ಮುಂಗಾರು ಬೆಳೆಗಳ ಬಿತ್ತನೆಗೆ ರೈತರು ಆತಂಕದಲ್ಲಿದ್ದರು. ಜಮೀನು ಹದಗೊಳಿಸುವುದು, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ನೀರಿನ ಅಭಾವದಿಂದ ಕೃಷಿ ಚಟುವಟಿಕೆ ಆರಂಭಿಸುವಲ್ಲಿ ಹಿಂಜರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಭತ್ತ ಹಾಗೂ ಒಣ ಮೆಣಸಿನಕಾಯಿ ಬೆಳೆಗಾರರು ಜಲಾಶಯದ ಕಾಲುವೆ ನೀರನ್ನೇ ಅವಲಂಬಿಸಿದ್ದು, ಈ ಬಾರಿ ಮಳೆ ತೀವ್ರ ಅಭಾವದಿಂದ ಮುಂಗಾರು ಬೆಳೆ ಕೈ ಕೊಟ್ಟಿತು ಎಂದೇ ಭಾವಿಸಿದ್ದರು. ಆದರೆ, ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಳ್ಳಾರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ತುಂತುರು ಮಳೆ ಸುರಿಯುತ್ತಿರುವುದು ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಇದೇ ರೀತಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಲಿದೆ. ಶೀಘ್ರದಲ್ಲೇ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಕಳೆದ ಎರಡು ದಿನಗಳಿಂದ ಗಣಿ ಜಿಲ್ಲೆಯ ಬಳ್ಳಾರಿಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

ತುಂಗಭದ್ರಾ ಜಲಾಶಯದ ನೀರನ್ನೇ ಅವಲಂಬಿಸಿರುವ ಕೃಷಿ ಪ್ರದೇಶಗಳಲ್ಲಿ ಈಗ ರೈತರು ಪ್ರತಿದಿನ ಜಲಾಶಯದ ನೀರಿನ ಮಟ್ಟ ಹಾಗೂ ಮಲೆನಾಡಿನ ಮಳೆಯ ಮಾಹಿತಿಯನ್ನು ಕಾತರದಿಂದ ಗಮನಿಸುತ್ತಿದ್ದಾರೆ. ಜಲಾಶಯಕ್ಕೆ ನಿರಂತರವಾಗಿ ಒಳಹರಿವು ಮುಂದುವರಿದರೆ ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಕೃಷಿ ಆರ್ಥಿಕತೆಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.

ಆದಾಗ್ಯೂ, ಕೇವಲ ಆರಂಭಿಕ ಮಳೆಯ ಆಧಾರದಲ್ಲಿ ನಿರಾಳರಾಗಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಮಲೆನಾಡಿನಲ್ಲಿ ನಿರಂತರವಾಗಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯ ಸಮರ್ಪಕವಾಗಿ ಭರ್ತಿಯಾಗಿ, ಸಂಪೂರ್ಣ ಮುಂಗಾರು ಹಂಗಾಮಿಗೆ ನೀರಿನ ಭದ್ರತೆ ಒದಗಿಸಲು ಸಾಧ್ಯವಾಗುತ್ತದೆ. ಹೀಗಾಗಿ ರೈತರ ಕಣ್ಣು ಈಗ ಆಕಾಶದತ್ತ ಮಾತ್ರವಲ್ಲ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯತ್ತ ನೆಟ್ಟಿದೆ.

ಕಳೆದ ವರ್ಷ ಜಲಾಶಯದ ನೀರಿನ ಒಳಹರಿವು ಹಾಗೂ ಸದ್ಯದ ನೀರಿನ ಒಳಹರಿವು ಪ್ರಮಾಣ ಹೋಲಿಸಿದರೆ ಭಾರೀ ಪ್ರಮಾಣದ ವ್ಯತ್ಯಾಸವಿದೆ. ಇನ್ನು ಐದಾರು ದಿನ ಮಲೆನಾಡಿನಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯ ಭರ್ತಿಯಾಗಿ ಬೆಳೆಗಳಿಗೆ ನೀರು ದಕ್ಕುವ ಸಾಧ್ಯತೆಯಿದೆ. ಇಲ್ಲದೇ ಹೋದರೆ ಈ ಬಾರಿ ಮುಂಗಾರು ಹಂಗಾಮಿನ ಬೆಳೆಯಿಂದ ರೈತರು ವಂಚಿತರಾಗುವ ಆಸ್ಪದವಿದೆ ಎಂದು ರೈತ ಸಂಘಟನೆಗಳ ಮುಖಂಡರು ಹೇಳುತ್ತಾರೆ.

ಜುಲೈ1 ರಿಂದ 4ರವರೆಗೆ ಜಿಲ್ಲೆಯಲ್ಲಿ ಸಾಮಾನ್ಯ 150.8 ಮಿ.ಮೀ. ಮಳೆಯಾಗಬೇಕಿತ್ತು. 142 ಮಿ.ಮೀ. ಮಳೆಯಾಗಿದೆ. ಜುಲೈ 5 ಮತ್ತು 6ರಂದು ಜಿಲ್ಲೆಯ ವಿವಿಧೆಡೆ ಸಾಮಾನ್ಯ ಮಳೆಯಾಗಿರುವುದರಿಂದ ಬಿತ್ತನೆಗೆ ಭೂಮಿ ಹದಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಈ ಹಿಂದೆ ಜಲಾಶಯದಲ್ಲಿ 14 ಟಿಎಂಸಿ ಸಂಗ್ರಹವಾಗುತ್ತಿದ್ದಂತೆಯೇ ರೈತರ ಬೆಳೆಗಳಿಗೆ ನೀರು ಬಿಡಲಾಗುತ್ತಿತ್ತು. ಆದರೆ, ಕೈಗಾರಿಕೆಗಳಿಗೆ ನೀರು ಒದಗಿಸಲು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಜಲಾಶಯಕ್ಕೆ ಕನಿಷ್ಠ 65 ಟಿಎಂಸಿ ಸಂಗ್ರಹವಾದರೆ ಮಾತ್ರ ಕಾಲುವೆಗಳಿಗೆ ನೀರು ಬಿಡಲಿದ್ದಾರೆ. ಕಳೆದ ವರ್ಷ 80 ಟಿಎಂಸಿ ಆಗುವವರೆಗೆ ನೀರು ಹರಿಸಲಿಲ್ಲ. ಮಲೆನಾಡಿನ ಮಳೆಯ ಮೇಲೆ ರೈತರ ಬೆಳೆಯ ಅಳಿವು-ಉಳಿವು ನಿಂತಿದೆ ಎನ್ನುತ್ತಾರೆ ರಾಜ್ಯರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು.

ನೀರಿನ‌ಮಟ್ಟ:

ಗರಿಷ್ಠ ನೀರಿನ ಮಟ್ಟ: 1,633 ಅಡಿಇಂದಿನ ಮಟ್ಟ: 1,588.37 ಅಡಿಒಟ್ಟು ಸಾಮರ್ಥ್ಯ: 105.788 ಟಿಎಂಸಿಇಂದಿನ ನೀರಿನ ಮಟ್ಟ: 9.72 ಟಿಎಂಸಿಕಳೆದ ವರ್ಷದ ನೀರಿನ ಮಟ್ಟ: 76.71 ಟಿಎಂಸಿಈ ವರ್ಷದ ಒಟ್ಟು ಸಂಗ್ರಹ: 0.52 ಟಿಎಂಸಿಕಳೆದ ವರ್ಷದ ಒಟ್ಟು ಸಂಗ್ರಹ: 75.34 ಟಿಎಂಸಿಇಂದಿನ ಒಳಹರಿವು: 4,188 ಕ್ಯುಸೆಕ್ಕಳೆದ ವರ್ಷದ ಒಳಹರಿವು: 54,550 ಕ್ಯುಸೆಕ್ಇಂದಿನ ಹೊರಹರಿವು: 140 ಕ್ಯುಸೆಕ್