ಮಳಗಿ ಧರ್ಮಾ ಜಲಾಶಯದ ದೊಡ್ಡ ಕಾಲುವೆಯಿಂದ ನೀರು ತಡೆಯಿರಿ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ಮಳಗಿ ಧರ್ಮಾ ಜಲಾಶಯದ ದೊಡ್ಡ ಕಾಲುವೆಯಿಂದ ನೀರು ಬಿಡುವುದನ್ನು ತಡೆ ಹಿಡಿಯುವಂತೆ ಆಗ್ರಹಿಸಿ ಧರ್ಮಾ ಕಾಲನಿ ಸುತ್ತಮುತ್ತ ಪ್ರದೇಶದ ರೈತರು ಹಾಗೂ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು

ಮುಂಡಗೋಡ:

ತಾಲೂಕಿನ ಮಳಗಿ ಧರ್ಮಾ ಜಲಾಶಯದ ದೊಡ್ಡ ಕಾಲುವೆಯಿಂದ ನೀರು ಬಿಡುವುದನ್ನು ತಡೆ ಹಿಡಿಯುವಂತೆ ಆಗ್ರಹಿಸಿ ಧರ್ಮಾ ಕಾಲನಿ ಸುತ್ತಮುತ್ತ ಪ್ರದೇಶದ ರೈತರು ಹಾಗೂ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಧರ್ಮಾ ಜಲಾಶಯದ ಬೃಹತ್ ಕಾಲುವೆ ಮೂಲಕ ಹಾನಗಲ್ ತಾಲೂಕಿಗೆ ನೀರು ಬಿಡಲಾಗುತ್ತಿದೆ. ಇದರಿಂದ ಕೆಲವೇ ದಿನಗಳಲ್ಲಿ ಜಲಾಶಯ ಸಂಪೂರ್ಣ ಖಾಲಿಯಾಗಲಿದ್ದು ತಾಲೂಕಿನ ಸುತ್ತಮುತ್ತ ಗ್ರಾಮಗಳ ಕುಡಿಯುವ ನೀರಿಗೂ ಸಹ ಅಭಾವ ಉಂಟಾಗುವ ಪರಿಸ್ಥಿತಿ ಬರಲಿದೆ ಎಂದು ಹೇಳಿದ್ದಾರೆ.ನ. ೧೯ರಂದು ಧರ್ಮಾ ಕಾಲನಿ ಸುತ್ತಲಿನ ಪ್ರದೇಶದ ರೈತರು ಹಾಗೂ ಗ್ರಾಮಸ್ಥರ ನಿಯೋಗ ತೆರಳಿ ಹಾನಗಲ್ ತಾಲೂಕಿನ ತಹಸೀಲ್ದಾರ್‌ರರಿಗೂ ಈ ಕುರಿತು ಮನವಿ ಸಲ್ಲಿಸಿ ಇಲ್ಲಿಯ ರೈತರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದೇವು. ಆದರೆ ಅವರು ಮಾತ್ರ ನಮ್ಮ ಮನವಿಗೆ ಸ್ಪಂದಿಸದೆ ತಮ್ಮ ತಾಲೂಕಿನ ರೈತರ ಸಮಸ್ಯೆ ಬಗ್ಗೆಯೇ ಹೇಳಿದರು. ನಿಮ್ಮ ಸಮಸ್ಯೆ ನಿಮ್ಮ ತಹಸೀಲ್ದಾರ್‌ ಹಾಗೂ ಸ್ಥಳೀಯ ಶಾಸಕರ ಬಳಿ ಹೇಳಿಕೊಂಡು ಪರಿಹರಿಸಿಕೊಳ್ಳಿ ಎಂದು ಹೇಳಿದರು. ಜತೆಗ ನ. ೨೦ರಿಂದ ಮತ್ತೆ ಹಾನಗಲ್ ತಾಲೂಕಿಗೆ ನೀರು ಬಿಡಬೇಕೆಂದು ತಾಕೀತು ಮಾಡಿದ್ದಾರೆ. ಹಾಗಾಗಿ ನೀವು ಒಂದು ಬಾರಿ ಸ್ಥಳಕ್ಕೆ ಆಗಮಿಸಿ ನೀರು ಬಿಡದಂತೆ ತಕ್ಷಣ ಆದೇಶಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.ಈ ವೇಳೆ ರಾಜೇಂದ್ರ ನಾಯ್ಕ, ಆನಂದ ನಾಯ್ಕ, ಫಕ್ಕೀರಪ್ಪ ಕಮ್ಮಾರ, ವಿನಾಯಕ ನಾಯ್ಕ, ಮಂಜುನಾಥ ಹಸ್ಲದ್, ನಾಗರಾಜ ಹಸ್ಲದ್, ಚಂದ್ರಶೇಖರ ಹರಿಜನ ಮುಂತಾದ ರೈತರು ಉಪಸ್ಥಿತರಿದ್ದರು.

Share this article