ಗಾದಿಲಿಂಗಗೌಡ, ಡಿ. ಹಿರೇಹಾಳು ಇಬ್ರಾಹಿಂಸಾಬ್ ಸೇರಿದಂತೆ ಕನ್ನಡಪರ ಹೋರಾಟಗಾರರು ಶ್ರಮಿಸಿದ್ದರು
ಸಿರುಗುಪ್ಪ: ಆಂಧ್ರ ಗಡಿಭಾಗದ ನದಿಚಾಗಿ ಗ್ರಾಮದಲ್ಲಿ ಕನ್ನಡ ಶಾಲೆ ಆರಂಭಿಸಲು ವಳಬಳ್ಳಾರಿ ಚನ್ನಬಸವ ಶಿವಯೋಗಿಗಳು 1972ರಲ್ಲಿ ಆಂಧ್ರ ಸರ್ಕಾರಕ್ಕೆ ಏಳು ಎಕರೆ ಭೂದಾನ ಮಾಡುವುದರ ಜತೆಗೆ ₹ 20,000 ನೆರವು ನೀಡಿದ್ದರು ಎಂದು ಗಡಿನಾಡ ಸಾಹಿತಿ ನಾ.ಮ. ಮರುಳಾರಾಧ್ಯ ಸ್ಮರಿಸಿದರು.
ತಾಲೂಕಿನ ಗಡಿ ಭಾಗದ ಸೀಮಾಂಧ್ರ ಪ್ರದೇಶದ ಆದೋನಿ ನಗರದ ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಒಕ್ಕೂಟ ಹಾಗೂ ಆದೋನಿ ಎಲ್ಲ ಕನ್ನಡ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡ ಕನ್ನಡ ಶಾಲೆ ಉಳಿವಿಗಾಗಿ ಬದಿನೆಹಾಳು ರಂಗನಗೌಡ, ಹೊಳಗುಂದ ರಾಜ ಪಂಪನಗೌಡ, ದೊಡ್ಡ ಹರಿವಾಣ ಈಶ್ವರಯ್ಯ, ಗಾದಿಲಿಂಗಗೌಡ, ಡಿ. ಹಿರೇಹಾಳು ಇಬ್ರಾಹಿಂಸಾಬ್ ಸೇರಿದಂತೆ ಕನ್ನಡಪರ ಹೋರಾಟಗಾರರು ಶ್ರಮಿಸಿದ್ದರು ಎಂದರು.‘ಆಂಧ್ರ ಗಡಿಭಾಗದ ಕನ್ನಡ ಸಮಸ್ಯೆಗಳು ಮತ್ತು ಪರಿಹಾರಗಳು’ ಕುರಿತು ರಾಯಚೂರು ಜಿಲ್ಲೆ ತುರುವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಕೆ. ಖಾದರ್ ಭಾಷ ಮತ್ತು‘ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ’ ಕುರಿತು ಶಿಕ್ಷಕ ಡಿ. ಪಾಂಡುರಂಗ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಎ. ಅಯ್ಯಾಳಪ್ಪ, ನಿವೃತ್ತ ಶಿಕ್ಷ ಎಂ. ಶಂಕರಪ್ಪ ಉಪಸ್ಥಿತರಿದ್ದರು.
ಬಳಿಕ ನಡೆದ ಕವಿಗೋಷ್ಠಿಗೆ ಬಿ. ಲಕ್ಷ್ಮಿದೇವಮ್ಮ ಚಾಲನೆ ನೀಡಿದರು. ಖ್ಯಾತ ರಂಗಭೂಮಿ ಕಲಾವಿದ ಬದನೆಹಾಳು ಭೀಮಣ್ಣ ಅಧ್ಯಕ್ಷತೆಯಲ್ಲಿ 20 ಕವಿಗಳು ಕಾವ್ಯವಾಚನ ಮಾಡಿದರು. ಆಂಧ್ರದ ಕನ್ನಡ ಶಾಲೆಗಳಿಗೆ ಭೂದಾನ ಮಾಡಿದ ನಾಗಲಿಕರ ವಿಜಯಕುಮಾರ್, ಶೋಭಾರಾಣಿ, ವಿ. ಹನುಮಪ್ಪ, ವಿ. ಮಲ್ಲಮ್ಮ, ಶಾಲಾ ಕೊಠಡಿ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ನೀಲಕಂಠರೆಡ್ಡಿ, ಲಕ್ಷ್ಮೀ ನರಸಮ್ಮ ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಹಿರಿಯ ಶಿಕ್ಷಕರನ್ನು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದವರೆಲ್ಲನ್ನು ಸನ್ಮಾನಿಸಲಾಯಿತು.ಎಸ್.ಎಂ. ಮರಿಸಿದ್ದಯ್ಯ ಅಧ್ಯಕ್ಷತೆಯಲ್ಲಿ ಗಡಿಭಾಗದ ಕನ್ನಡ ಶಾಲೆಗೆ ಆಂಧ್ರಪ್ರದೇಶ ಸರ್ಕಾರದಿಂದ ಹೊಸದಾಗಿ ನೇಮಕಗೊಂಡ 58 ಶಿಕ್ಷಕರನ್ನು ಸತ್ಕರಿಸಲಾಯಿತು.
ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಒಕ್ಕೂಟ ಹಾಗೂ ಆದೋನಿ ಎಲ್ಲ ಕನ್ನಡ ಸಂಘಗಳ ಪದಾಧಿಕಾರಿಗಳು, ಗಡಿನಾಡ ಕನ್ನಡ ಶಾಲೆ ಶಿಕ್ಷಕರು ಇದ್ದರು.