ನರೇಗಾ ಯೋಜನೆಯಲ್ಲಿ ಅಕ್ರಮಕ್ಕೆ ತಡೆ

KannadaprabhaNewsNetwork |  
Published : May 16, 2026, 01:30 AM IST
ಹರಪನಹಳ್ಳಿ: ನರೇಗಾ ಕೂಲಿಕಾರರ ಹಾಜರಾತಿ ಪರಿಶೀಲಿಸುತ್ತಿರುವ ತಾ.ಪಂ ಇಒ ಚಂದ್ರಶೇಖರ್, | Kannada Prabha

ಸಾರಾಂಶ

ಅರ್ಹ ಫಲಾನುಭವಿಗಳಿಗೆ ನೇರವಾಗಿ ಮತ್ತು ಸುಗಮವಾಗಿ ವೇತನ ಪಾವತಿಯಾಗಲು ಸಾಧ್ಯವಾಗಲಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಈಗ ಎನ್‌ಎಂಎಂಎಸ್ ಆ್ಯಪ್ ಮೂಲಕ ಮುಖ ಗುರುತಿಸುವಿಕೆ (ಫೇಸ್ ಅಥೆಂಟಿಕೇಷನ್) ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ.

ಕಳೆದ ಏ.1ರಿಂದ ಈ ನಿಯಮ ಜಾರಿಯಲ್ಲಿದ್ದು, ಹಾಜರಾತಿ ದಾಖಲಿಸುವ ಮುನ್ನ ಪ್ರತಿ ಕೂಲಿ ಕಾರ್ಮಿಕರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಇದರಿಂದ ಅರ್ಹ ಫಲಾನುಭವಿಗಳಿಗೆ ನೇರವಾಗಿ ಮತ್ತು ಸುಗಮವಾಗಿ ವೇತನ ಪಾವತಿಯಾಗಲು ಸಾಧ್ಯವಾಗಲಿದೆ.

ಆ್ಯಪ್‌ ಬಳಕೆ:

ಕೆಲಸದ ಸ್ಥಳದಲ್ಲಿಯೇ ಕಾರ್ಮಿಕರ ಹಾಜರಾತಿಯನ್ನು ನೈಜ ಸಮಯದಲ್ಲಿ ದಾಖಲಿಸಲಾಗುತ್ತದೆ. ಫೋಟೋ ತೆಗೆಯುವಾಗ ಮುಖವು ಸ್ಪಷ್ಟವಾಗಿ ಕಾಣುಬೇಕು. ಮಾಸ್ಕ್, ಕನ್ನಡಕ ಅಥವಾ ಮುಖಗವಸು ಧರಿಸಿರಬಾರದು. ಫೋಟೋದಲ್ಲಿ ಒಬ್ಬ ಕಾರ್ಮಿಕರ ಮುಖ ಮಾತ್ರ ಇರಬೇಕು. ಸ್ಕ್ರೀನ್ ಮೇಲೆ ವೃತ್ತವು ಹಸಿರು ಬಣ್ಣಕ್ಕೆ ತಿರುಗಿದಾಗ ಮಾತ್ರ ಕಣ್ಣು ಮಿಟುಕಿಸಬೇಕು.

ಅಕ್ರಮ ತಡೆ:

ನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರಕ್ಕೆ ಈ ತಂತ್ರಜ್ಞಾನದಿಂದ ಬ್ರೇಕ್ ಬೀಳಲಿದೆ. ಹಾಜರಾತಿ ವಿವರಗಳು ತಕ್ಷಣವೇ ಅಪ್‌ಲೋಡ್ ಆಗುವುದರಿಂದ ಕೂಲಿಕಾರರ ಬ್ಯಾಂಕ್ ಖಾತೆಗೆ ವೇತನ ಪಾವತಿ ಪ್ರಕ್ರಿಯೆ ವೇಗವಾಗಲಿದೆ.

ಡಿಜಿಟಲೀಕರಣ:

ಕಾಗದ ರಹಿತ ದಾಖಲಾತಿ ನಿರ್ವಹಣೆಯಿಂದ ಸಮಯ ಉಳಿತಾಯವಾಗಲಿದೆ. ಉತ್ತರದಾಯಿತ್ವ ಹೆಚ್ಚಲಿದೆ. ತಾಲೂಕಿನಲ್ಲಿ ಒಟ್ಟು 56800 ನರೇಗಾ ಕೂಲಿ ಕಾರ್ಮಿಕರಿದ್ದು, ಈ ಪೈಕಿ 56 ಸಾವಿರ ಕಾರ್ಮಿಕರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಿತ್ಯ 7 ರಿಂದ 8 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಚಿರಸ್ತಹಳ್ಳಿ, ಚಟ್ನಿಹಳ್ಳಿ, ತೌಡೂರು, ಮೈದೂರು, ಚಿಗಟೇರಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಕಡೆ ಕೆರೆ ಮತ್ತು ನಾಲಾ ಹೂಳೆತ್ತುವ ಕೆಲಸ ನೀಡಲಾಗಿದೆ.

2026-27ನೇ ಸಾಲಿನಲ್ಲಿ ತಾಲೂಕಿನಲ್ಲಿ 2 ಲಕ್ಷದ 60 ಸಾವಿರ ಮಾನವ ದಿನಗಳ ಗುರಿ ಹೊಂದಲಾಗಿದೆ. ಈಗಾಗಲೇ 58 ಸಾವಿರ ಗುರಿ ತಲುಪಲಾಗಿದೆ ಎಂದು ತಾಪಂ ನರೇಗಾ ಎಡಿ ಸೋಮಶೇಖರ್ ತಿಳಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಹೊಸ ನಿಯಮ ಜಾರಿಗೆ ತಂದಿದ್ದನ್ನು ನೈಜ ಕೂಲಿಕಾರರು ಸ್ವಾಗತಿಸಿದ್ದಾರೆ.

ಎನ್‌ಎಂಎಂಎಸ್ ಆ್ಯಪ್‌ ಮೂಲಕ ಕೂಲಿಕಾರರ ಮುಖ ಗುರುತಿಸುವಿಕೆ (ಫೇಸ್ ಅಥೆಂಟಿಕೇಷನ್) ಹಾಜರಾತಿಯನ್ನು ಗ್ರಾಪಂ, ತಾಪಂ, ಜಿಪಂ ಹಂತದಲ್ಲಿ ಪರಿಶೀಲಿಸಿ ಬಳಿಕ ವೇತನ ಪಾವತಿ ಮಾಡಲಾಗುತ್ತದೆ. ಇದರಿಂದ ಪಾರದರ್ಶಕತೆ ಹೆಚ್ಚಲಿದೆ ಎನ್ನುತ್ತಾರೆ ಹರಪನಹಳ್ಳಿ ತಾಪಂ ನರೇಗಾ ಎಡಿ ಸೋಮಶೇಖರ್.

ಕೂಲಿಕಾರರ ಹಾಜರಾತಿಯಲ್ಲಿ ಇ-ಕೆವೈಸಿ ಕಡ್ಡಾಯಗೊಳಿಸಿರುವುದರಿಂದ ಅಕ್ರಮಕ್ಕೆ ಕಡಿವಾಣ ಬೀಳಲಿದೆ. ನಿಜವಾದ ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದೆ. ಸರಿಯಾದ ಸಮಯಕ್ಕೆ ವೇತನ ಪಾವತಿಯಾಗಲಿದೆ ಎನ್ನುತ್ತಾರೆ ಕೂಲಿಕಾರ್ಮಿಕ ತೆಲಗಿ ಶೇಖಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಕಲ್ಯಾಣಾರ್ಥ ರುದ್ರಯಾಗ ಅರ್ಥಪೂರ್ಣ: ರಾಮಲಿಂಗ ರೆಡ್ಡಿ
ಹಿಜಾಬ್‌ ನಿಷೇಧ ರದ್ದು ನಿರ್ಧಾರ ಸರಿ: ರಾಮಲಿಂಗಾ ರೆಡ್ಡಿ