ದಾಂಡೇಲಿ: ವಿವಿಧ ಯೋಜನೆಗಳಡಿ ದಾಂಡೇಲಿ ಕಾಳಿ ನದಿಯಿಂದ ನೀರು ತೆಗೆದುಕೊಂಡು ಹೋಗಲು, ನೀರಿನ ಪೈಪ್‌ಲೈನ್ ಕಾಮಗಾರಿ ಹಾಗೂ ಯುಜಿಡಿ ಕಾಮಗಾರಿ ನಿಮಿತ್ತ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದೆ.
ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸುವ ಕಾರ್ಯದಿಂದ ಇಲ್ಲಿನ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಿತ್ಯವು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳ ಜೀಪ ತಡೆದು ರಸ್ತೆ ದುರಸ್ತಿಗೆ ಆಗ್ರಹಿಸಿದರು.
ಕಳೆದ ೨ ವರ್ಷಗಳಿಂದ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು ನವೆಂಬರ್ ಅಂತ್ಯದಲ್ಲಿ ಕಾಮಗಾರಿ ಮುಗಿಸಿ ರಸ್ತೆ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ದುರಸ್ತಿ ಮಾಡದ ಕಾರಣ ಹಳೆದಾಂಡೇಲಿ ಭಾಗದ ನಿವಾಸಿಗಳು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಹಳೆ ದಾಂಡೇಲಿಯಲ್ಲಿ ಬಸ್ ಡಿಪೋ ಇರುವುದರಿಂದ ಈ ಮಣ್ಣಿನ ರಸ್ತೆಯಲ್ಲಿ ನಿತ್ಯವು ನೂರಾರು ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸುತ್ತವೆ. ಇದರಿಂದ ರಸ್ತೆ ಪಕ್ಕದ ಮನೆ, ಅಂಗಡಿಗಳು ಧೂಳು ಆವರಿಸುತ್ತದೆ.
ಧೂಳಿನಿಂದ ನಿವಾಸಿಗಳು ಅನೇಕ ರೋಗಗಳಿಂದ ಬಳಲುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಶೈಲೇಶ ಪರಮಾನಂದ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದರು.
ಬಳಿಕ ಗ್ರಾಮೀಣ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸತೀಶಗೆ ಕರೆ ಮಾಡಿ ತಕ್ಷಣ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು. ಆದ ಸತೀಶ, ರಸ್ತೆ ದುರಸ್ತಿ ಮತ್ತು ಡಾಂಬರೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ತಕ್ಷಣ ಕಾಮಗಾರಿ ಆರಂಭಿಸದೆ ಇದ್ದರೆ ಇದೀಗ ಹಾಕಿರುವ ಪೈಪ್‌ಲೈನ್ ತೆಗೆದು ಒಡೆದು ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಈ ವೇಳೆ ಸ್ಥಳೀಯ ನಿವಾಸಿಗಳಾದ ನಿನೋದ ಬಾಂದೇಕರ, ಇಲಿಯಾಸ ಕಾಟಿ, ಮಿಲಿಂದ ಕೋಡಕಣಿ, ಅಹ್ಮದ, ಅಫ್ತಾಬ್ ಖಾಜಿ ಮುಂತಾದವರಿದ್ದರು.