ಉತ್ತಮ ವ್ಯಕ್ತಿತ್ವಕ್ಕೆ ಕಥೆಗಳು ಪ್ರೇರಣೆ: ಡಾ.ರಾಜೇಶ್ವರಿ

KannadaprabhaNewsNetwork | Published : Jul 29, 2024 12:53 AM

ಸಾರಾಂಶ

ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾಗಿ ಆಯ್ಕೆಯಾದ ಎಂ.ಎಂ.ಪರಮೇಶ್, ಶಿಕ್ಷಕರಾಗಿ ನಿವೃತ್ತರಾಗುತ್ತಿರುವ ಬಿ.ಪಾಪಯ್ಯ ಅವರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಉತ್ತಮ ವ್ಯಕ್ತಿತ್ವಗಳನ್ನು ರೂಪಿಸುವಲ್ಲಿ ಕಥೆಗಳು ಪ್ರೇರಣಾತ್ಮಕ ಶಕ್ತಿ ನೀಡಲಿದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ರಾಜೇಶ್ವರಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಮುಂಗಾರು ಕಥಾ ಸಂಜೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಕಥೆ ಹೇಳುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಥೆಗಳು ಪ್ರೀತಿ ಮಾನವೀಯತೆ ಪ್ರಾಮುಖ್ಯತೆ ತಿಳಿಸುತ್ತದೆ. ಅಂತಹ ಕಥೆ ಮಕ್ಕಳಿಗೆ ಹೇಳುವ ಮತ್ತು ಕೇಳುವ ತಾಳ್ಮೆ ಪೋಷಕರಾದ ನಮಗೆ ಬೇಕಿದೆ. ವ್ಯಕ್ತಿತ್ವಗಳ ಸಾಧನೆ ಕಥೆಗಳು ಪ್ರೇರಣೆ ನೀಡಿದರೆ, ಭಾವನಾತ್ಮಕ ಕಥೆಗಳು ಸೌಜನ್ಯತೆ ರೂಡಿಸಿಕೊಳ್ಳಲು ಸಹಕಾರಿಯಾಗಿದೆ.

ಮಳೆಯೊಂದಿಗೆ ಕಥೆಗಳನ್ನು ಕೇಳುವ ಸೊಗಡೆ ಒಂದು ವಿಸ್ಮಯಕರ ಅನುಭವ. ಇಂತಹ ವೇದಿಕೆಗಳ ಮೂಲಕ ಅಂತಹ ಸೊಗಡನ್ನು ಅನುಭವಿಸುವ ಅವಕಾಶ ಸಿಕ್ಕಿದ್ದು ಅಭಿನಂದನಾರ್ಹ‌ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿರುವ ನಮಗೆ ಸಾಹಿತ್ಯದ ಅಭಿರುಚಿ ಮೂಡಿಸಿದ್ದು ಕಸಾಪದ ಕಾರ್ಯಚಟುವಟಿಕೆಗಳು. ಸಾಹಿತ್ಯ ನಮ್ಮೊಳಗೆ ಸದಾ ಜಾಗೃತ ಭಾವ ಮೂಡಿಸುತ್ತದೆ‌ ಎಂದರು.

ಬಾಪೂಜಿ ಶಿಕ್ಷಣ ಸಂಸ್ಥೆ ಸ್ಥಾಪಕ ಬಿ. ಪಾಪಯ್ಯ ಮಾತನಾಡಿ, ನಮ್ಮ ಜೀವನದ ಜೊತೆಗೆ ಸಮಾಜಕ್ಕೂ ಒಂದಿಷ್ಟು ಕೊಡುಗೆ ನೀಡುವಂತಹ ಸಂಚಲನವನ್ನು ಸಾಹಿತ್ಯ ಮೂಡಿಸಲಿದೆ. ಭಾವನಾತ್ಮಕ ಕಥೆಗಳು ಮಗುವಿನ ಜೀವನದ ಮೇಲೆ ಉತ್ತಮ ಪರಿಣಾಮ ಬೀರಲಿದ್ದು, ಅಂತಹ ಸಾಹಿತ್ಯಾತ್ಮಕ ಆಲೋಚನೆಗಳನ್ನು ‌ಯುವ ಸಮೂಹಕ್ಕೆ ತಲುಪಿಸಲು ಪ್ರಯತ್ನಿಸೋಣ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕಥೆಗಾರರಾದ ಗಣೇಶ್ ಮೂರ್ತಿ ನಾಗರಕೊಡಿಗೆ, ಎಂ.ನವೀನ್ ಕುಮಾರ್, ಎನ್‌ಇಎಸ್‌ ಪಿಆರ್‌ಓ ಸಿ.ಎಂ. ನೃಪತುಂಗ, ಆನಂದಪುರದ ನಾಗರಾಜ್ ತೋಂಬ್ರಿ, ಡಾ. ಗಂಗಾಧರ ವರ್ಮಾತ್ರೇಯ ಸಾಗರ, ಪುಷ್ಪಾವತಿ ಸಾಗರ, ಹೇಮಂತ್ ಪರಿಸರ ಕಥೆಗಳನ್ನು ವಾಚಿಸಿದರು. ಗಾಯಕಿಯರಾದ ಮಹಾದೇವಿ, ಬಿ. ಟಿ. ಅಂಬಿಕಾ, ಸುಶೀಲಾ ಷಣ್ಮುಗಂ, ಉಮಾ ಕುಲಕರ್ಣಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಎಂ.ಎಂ.ಸ್ವಾಮಿ ಸ್ವಾಗತಿಸಿ, ಕೆ.ಎಸ್.ಮಂಜಪ್ಪ ನಿರೂಪಿಸಿದರು.

Share this article