ಬಿರುಗಾಳಿ ಸಹಿತ ಮಳೆ: 104 ಮನೆಗಳ ಶೆಡ್, ಗುಡಿಸಲು ಹಾನಿ

KannadaprabhaNewsNetwork | Published : May 29, 2024 12:48 AM
Follow Us

ಸಾರಾಂಶ

ಹುಣಸಗಿ ತಾಲೂಕಿನ ಭಾಗ್ಯ ನಗರದಲ್ಲಿ ಮನೆಯ ಮೇಲ್ಛಾವಣೆ ಕುಸಿತ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಗುಡುಗು, ಸಿಡಿಲಿನಿಂದ ಕೂಡಿದ ಭಾರೀ ಮಳೆಗೆ ತಾಲೂಕಿನ ಹಲವು ಗ್ರಾಮಗಳಲ್ಲಿ 104 ಗಳ ಶೆಡ್ಡು ಹಾಗೂ ಗುಡಿಸಲುಗಳು ಹಾನಿಯಾಗಿವೆ ಎಂದು ಕಂದಾಯ ಮೂಲಗಳು ತಿಳಿಸಿವೆ.

ತಾಲೂಕಿನಾದ್ಯಂತ ಗಾಳಿ, ಮಳೆ ಸುರಿದಿದ್ದು ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. 30ಕ್ಕೂ ಹೆಚ್ಚು ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತವಾಗಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಹುಣಸಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ. ರಾತ್ರಿ ಸುರಿದ ಮಳೆ ಹಾಗೂ ಬಿರುಗಾಳಿಗೆ ಎಲ್ಲೆಂದರಲ್ಲಿ ವಿದ್ಯುತ್‌ ಕಂಬಗಳು ಹಾಗೂ ಬಿರುಗಾಳಿಗೆ ವಿದ್ಯುತ ತಂತಿ ಮೇಲೆ ಮರಗಿಡಗಳು ಬಿದ್ದ ಪರಿಣಾಮ ಇಡೀ ರಾತ್ರಿ ಕತ್ತಲ್ಲಲೇ ಕಾಲ ಕಳೆಯಬೇಕಾಯಿತು.

ಮಳೆಗಾಳಿಗೆ ಕೋಳಿಹಾಳ, ಗುಳಬಾಳ, ಹುಣಸಗಿ, ಗೆದ್ದಲಮರಿ, ತೆಗ್ಗೆಳ್ಳಿ, ಚನ್ನೂರು ಸೇರಿದಂತೆ ಯಡಿಯಾಪುರ ಗ್ರಾಮದ 35ಕ್ಕೂ ಹೆಚ್ಚು ಕುಟುಂಬಕ್ಕೆ ಸಂಬಂಧಿಸಿದ ಶೆಡ್ ಪತ್ರಾಸ್ ಕಿತ್ತಿ ಹಾನಿಯಾಗಿವೆ. ಗ್ರಾಮದ ಲಕ್ಷ್ಮಣ್ಣ ಪರಮಣ್ಣ, ಹೊನ್ನಮ್ಮ ಸಂಗಪ್ಪ ಭೀರಪ್ಪ ಸಿದ್ದಪ್ಪ ಹೀಗೇ ವಿವಿಧ ಗ್ರಾಮಗಳಲ್ಲಿ 104 ಶೆಡ್‌ಗಳಿಗೆ ಕೆಲವೊಂದು ಗುಡಿಸಲು, ಮನೆಗಳಿಗೂ ಭಾಗಶ ಹಾನಿಯಾಗಿವೆ.

ಆದರೆ, ಯಾವುದೇ ಜೀವಹಾನಿ ಆಗಿಲ್ಲ, ಆಯಾ ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ ವರದಿ ಸಿದ್ಧಪಡಿಸಲು ಸೂಚಿಸಲಾಗಿದ್ದು, ವರದಿ ನಂತರ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರು ತಿಳಿಸಿದ್ದಾರೆ.

ಹುಣಸಗಿ 48.4 ಮಿ.ಮೀ, ಕೊಡೇಕಲ್ 49.4 ಮಿ.ಮೀ, ನಾರಾಯಣಪೂರ 53.8 ಮಿ.ಮೀ ಮಳೆಯಾಗಿದೆ. ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ.

ತೆಗ್ಗೆಳ್ಳಿ ಗ್ರಾಮದ ಬೀರಪ್ಪ ಪೂಜಾರಿ ಎಂಬುವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನು ಬಿರುಗಾಳಿಗೆ ಮನೆಯ ಮೇಲಿನ ತಗಡಿನ ಶೀಟ್ ಗಳು ಬಹುದೂರ ಬಿದ್ದಿವೆ.

ಮನೆಯಲ್ಲಿರೋ ದವಸ-ಧಾನ್ಯಗಳು ಸಹ ನೀರು ಪಾಲಾಗಿವೆ. ಅದೇ ಗ್ರಾಮದಲ್ಲಿನ ರವಿ ಕಲ್ಮನಿ ಎಂಬುವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಮನೆಯಲ್ಲಿರೋ ಲ್ಯಾಪ್ ಟಾಪ್, ಪ್ರಿಂಟರ್ ಹಾಳಾಗಿದೆ. ತಡರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಕೆಸರು ಗದ್ದೆಯಂತಾಗಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಧಾವಿಸಿ ಸೂಕ್ತ ಪರಿಹಾರ ನೀಡುವಂತೆ ಭೀರಪ್ಪ ಪೂಜಾರಿ ಮತ್ತು ರವಿ ಕಲ್ಮನಿ ಆಗ್ರಹಿಸಿದ್ದಾರೆ.