ಕಥೆಗಾರ, ಪ್ರಾಧ್ಯಾಪಕ ಮೊಗಳ್ಳಿ ಗಣೇಶ ನಿಧನ

KannadaprabhaNewsNetwork |  
Published : Oct 06, 2025, 01:00 AM ISTUpdated : Oct 06, 2025, 01:08 PM IST
Ganesh Mogalli passess Away

ಸಾರಾಂಶ

ಖ್ಯಾತ ಕಥೆಗಾರ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ। ಮೊಗಳ್ಳಿ ಗಣೇಶ್ (63) ಬಹು ಅಂಗಾಗ ವೈಫಲ್ಯದಿಂದ ಭಾನುವಾರ ಬೆಳಗಿನ ಜಾವ ನಗರದ ಎಂ.ಪಿ.ಪ್ರಕಾಶ ನಗರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.

  ಹೊಸಪೇಟೆ :  ಖ್ಯಾತ ಕಥೆಗಾರ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ। ಮೊಗಳ್ಳಿ ಗಣೇಶ್ (63) ಬಹು ಅಂಗಾಗ ವೈಫಲ್ಯದಿಂದ ಭಾನುವಾರ ಬೆಳಗಿನ ಜಾವ ನಗರದ ಎಂ.ಪಿ.ಪ್ರಕಾಶ ನಗರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನ ಮಾದನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಶಿವರಾಜ್‌ ತಂಗಡಗಿ, ಜಮೀರ್‌ ಅಹಮದ್‌ ಖಾನ್‌, ಕನ್ನಡ ವಿವಿ ಕುಲಪತಿ ಡಾ। ಡಿ.ವಿ.ಪರಮಶಿವಮೂರ್ತಿ ಅವರು ಸಂತಾಪ ಸೂಚಿಸಿದ್ದಾರೆ.

ಕನ್ನಡ ವಿವಿಯ 80 ಎಕರೆ ಉಳಿಸಿಕೊಂಡರು:

ಡಾ। ಮೊಗಳ್ಳಿ ಗಣೇಶ ಹಂಪಿ ಕನ್ನಡ ವಿವಿ 700 ಎಕರೆ ವಿದ್ಯಾರಣ್ಯ ಆವರಣದ ಪೈಕಿ 80 ಎಕರೆ ಜಾಗವನ್ನು ಆಗಿನ ಸಿಎಂ ಬಿ.ಎಸ್‌. ಯಡಿಯೂರಪ್ಪ (2010ರಲ್ಲಿ) ಸರ್ಕಾರ ಥೀಮ್‌ ಪಾರ್ಕ್‌ ಯೋಜನೆಗಾಗಿ ಹಸ್ತಾಂತರ ಮಾಡಿಕೊಳ್ಳಲು ಹೊರಟಾಗ ಸರ್ಕಾರದ ವಿರುದ್ಧವೇ ಕನ್ನಡ ವಿವಿಯಲ್ಲಿ ಇದ್ದುಕೊಂಡೇ ಹೋರಾಟ ರೂಪಿಸಿದರು. ಆಗಿನ ಸರ್ಕಾರ ಅವರ ಮೇಲೆ ಒತ್ತಡ ಹೇರಿದರೂ ಜಗ್ಗದೇ ಹೋರಾಟ ಸಂಘಟಿಸಿ, ಕನ್ನಡ ವಿವಿ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು ಹಾಗೂ ಸಾಹಿತಿಗಳ ಸಹಾಯದಿಂದ 80 ಎಕರೆ ಅಮೂಲ್ಯ ಜಮೀನು ಉಳಿಸಿದರು.

ಮೂಲತಃ ರಾಮನಗರದ ಚನ್ನಪಟ್ಟಣ ತಾಲೂಕಿನ ಮೊಗಳ್ಳಿ ಗ್ರಾಮದ ಗಣೇಶ್ 1963ರ ಜು.1ರಂದು ಜನಿಸಿದ್ದರು. ತಮ್ಮ ಕಥೆಗಳಿಂದ ಮನೆ ಮಾತಾಗಿದ್ದರು. ಅವರ ಕಥೆಗಳನ್ನು ಓದಿ ಆಗ ಮಂತ್ರಿ ಆಗಿದ್ದ ಎಂ.ಪಿ.ಪ್ರಕಾಶ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆ ಆಫರ್‌ ನೀಡಿದ್ದರು. ಒಲ್ಲದ ಮನಸ್ಸಿನಿಂದ ಅವರನ್ನು ಕಾಣಲು ವಿಧಾನಸೌಧಕ್ಕೆ ತೆರಳಿದ್ದರು.

ಹಂಪಿ ಕನ್ನಡ ವಿವಿಗೆ 1996ರಲ್ಲಿ ಸಂಶೋಧನಾ ಸಹಾಯಕರಾಗಿ ಗಣೇಶ್ ಮೊಗಳ್ಳಿ ಸೇರಿದರು. 1997ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿ, ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ, ಜಾನಪದ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ