ಹನುಮಸಾಗರ: ಗ್ರಾಮದಲ್ಲಿ ಬೀದಿನಾಯಿಗಳನ್ನು ಸೆರೆಹಿಡಿಯಲು ಗ್ರಾಪಂ ವತಿಯಿಂದ ಕೇರಳದಿಂದ ತಂಡ ಕರೆಸಲಾಗಿದೆ.
ಬೆಳ್ಳಂಬೆಳಗ್ಗೆ ತಂಡ ಹಾಜರು: ಬೀದಿನಾಯಿಗಳನ್ನು ಹಿಡಿಯಲು ಗ್ರಾಮದಲ್ಲಿ ಗುರುವಾರ ಬೆಳಂಬೆಳಗ್ಗೆ ಕೇರಳ ರಾಜ್ಯದ ಅಯ್ಯಪ್ಪನ್ ನೇತೃತ್ವದ ತಂಡ ಆಗಮಿಸಿದೆ. ತಂಡದಲ್ಲಿ ಮೂವರು ಸದಸ್ಯರಿದ್ದು, ಅವರೊಂದಿಗೆ ಗ್ರಾಪಂ ಸಿಬ್ಬಂದಿ ನಾಯಿ ಹಿಡಿಯುವ ಕಾರ್ಯಕ್ಕೆ ನಿಂತಿದ್ದಾರೆ. ಸದ್ಯ ಗ್ರಾಮದಲ್ಲಿ ಮೊದಲನೇ ದಿನ ನಾನಾ ವಾರ್ಡ್‌ಗಳಲ್ಲಿ ೧೨೩ ನಾಯಿಗಳನ್ನು ಹಿಡಿಯಲಾಗಿದೆ. ಇನ್ನೂ ಇದ್ದು, ಅವುಗಳನ್ನು ಇನ್ನೆರಡು ದಿನ ಕಾರ್ಯಾಚರಣೆ ನಡೆಸಿ, ಹಿಡಿಯಲಾಗುತ್ತದೆ ಎಂದು ಗ್ರಾಪಂ ಹೇಳಿದೆ. ಗ್ರಾಮದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಹಿಡಿಯಲು ತಂಡ ಆಗಮಿಸಿದೆ. ಜನರು ಸಾಕುನಾಯಿಗಳನ್ನು ತಮ್ಮ ಮನೆಯ ಆವರಣದಲ್ಲಿ ಕಟ್ಟಿ ಹಾಕಿಕೊಳ್ಳಬೇಕು. ಈ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ, ಬೇರೆ ಪ್ರದೇಶಗಳಿಗೆ ಬಿಟ್ಟು ಬರಲಾಗುತ್ತದೆ ಎಂದು ಹನುಮಸಾಗರ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.