ಗದಗ ಬೆಟಗೇರಿ ಅವಳಿ ನಗರದಲ್ಲಿ ಬೀದಿನಾಯಿಗಳ ಹಾವಳಿ

KannadaprabhaNewsNetwork |  
Published : Dec 17, 2025, 02:15 AM IST
ಗದಗ-ಬೆಟಗೇರಿಯಲ್ಲಿ ಗುಂಪು-ಗುಂಪಾಗಿ ಕಂಡು ಬರುವ ಬೀದಿ ನಾಯಿಗಳು. | Kannada Prabha

ಸಾರಾಂಶ

ಬೀದಿನಾಯಿಗಳ ಸಂತಾನಶಕ್ತಿ ಹರಣ ಮತ್ತು ಶಸ್ತ್ರಚಿಕಿತ್ಸೆ ಮಾಡಲು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಪಾಲನೆ ಎಷ್ಟಾಗುತ್ತಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಮಹೇಶ ಛಬ್ಬಿ

ಗದಗ: ಗದಗ- ಬೆಟಗೇರಿ ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ.

ಅವಳಿ ನಗರದ ಪ್ರಮುಖ ರಸ್ತೆ, ಬಡಾವಣೆ, ಬಜಾರ್‌ಗಳಲ್ಲಿ ಹತ್ತಾರು ಬೀದಿನಾಯಿಗಳು ಗುಂಪು ಗುಂಪಾಗಿ ಕಂಡು ಬರುತ್ತಿವೆ. ಇವುಗಳ ಅವಾಂತರಗಳಿಂದ ಜನತೆ ರೋಸಿ ಹೋಗಿದ್ದು, ರಸ್ತೆಯಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಒಂಟಿಯಾಗಿ ಓಡಾಡಲಾಗದ ಸ್ಥಿತಿ ನಿರ್ಮಾಣಗೊಂಡಿದೆ.

ನಿತ್ಯ ಶಾಲೆಗೆ ಹೋಗುವ ಮಕ್ಕಳು ಕೈಯಲ್ಲಿ ತಿನಸು ಹಿಡಿದುಕೊಂಡಿದ್ದರೆ, ಮಕ್ಕಳನ್ನು ಅಟ್ಟಿಸಿಕೊಂಡು ಓಡಿಸಿ, ಮಕ್ಕಳ ಕೈಯಲ್ಲಿರುವ ತಿನಿಸಿಗೆ ಬಾಯಿ ಹಾಕುತ್ತವೆ. ಇನ್ನು ಬೈಕ್ ಸವಾರರ ಮೇಲೆ ದಾಳಿ, ಬೆನ್ನಟ್ಟುವ ಘಟನೆಗಳು ಸರ್ವೇಸಾಮಾನ್ಯವಾಗಿದ್ದು, ಬೈಕ್‌ ಸವಾರರು ಆಯ ತಪ್ಪಿ ಬಿದ್ದಂತಹ ಘಟನೆಗಳು ಜರುಗಿವೆ.ಮನೆಯವರು ಮಕ್ಕಳನ್ನು ಅಕ್ಕ- ಪಕ್ಕದಲ್ಲಿರುವ ಅಂಗಡಿಗೆ ಕಳುಹಿಸಬೇಕಾದರೂ ಹತ್ತಾರು ಬಾರಿ ಯೋಚಿಸಬೇಕಾದಂತಹ ಸ್ಥಿತಿ ಇದ್ದು, ಮಕ್ಕಳನ್ನು ಶಾಲೆಗೆ ಒಬ್ಬೊಬ್ಬರಾಗಿ ಕಳುಹಿಸುವುದಕ್ಕೂ ಸಾಧ್ಯವಾಗದೆ ಪಾಲಕರು ಸಂಕಷ್ಟದಲ್ಲಿದ್ದಾರೆ.

ಬೀದಿ ನಾಯಿಗಳ ಹಾಟ್‌ಸ್ಪಾಟ್‌:

ಆಹಾರ ಅರಸಿ ಬರುವ ಬೀದಿನಾಯಿಗಳಿಗೆ ಮಾರುಕಟ್ಟೆಯ ಹೋಟೆಲ್‌, ಮಾಂಸದಂಗಡಿಗಳು, ಎಗ್‌ರೈಸ್‌ ಅಂಗಡಿಗಳು, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳು ವಾಸಸ್ಥಳಗಳಾಗಿವೆ. ಮಾಂಸದ ಆಸೆಗಾಗಿ ಬೀದಿನಾಯಿಗಳು ಕಚ್ಚಾಡುತ್ತಾ ಇರುವಾಗ ಸಾರ್ವಜನಿಕರು ಅವುಗಳನ್ನ ಚದುರಿಸಲು ಹೋದಾಗ ಅವರ ಮೇಲೆ ದಾಳಿ ನಡೆಸಿವೆ. ಇವುಗಳ ಕಚ್ಚಾಟ ಸಾರ್ವಜನಿಕರಲ್ಲಿ ಭಯ ಹೆಚ್ಚಿಸುವಂತಿರುತ್ತದೆ.

ರಾತ್ರಿ ವೇಳೆ ದ್ವಿಚಕ್ರ ಸವಾರರ ಮೇಲೆ ಬೀದಿನಾಯಿಗಳು ಬೆನ್ನಟ್ಟಿ ಹೋಗುವುದರಿಂದ ಬೈಕ್‌ ಸವಾರರು ಆತಂಕಗೊಂಡು ಬೈಕ್‌ಗಳಿಂದ ಬಿದ್ದು ಕೈ- ಕಾಲು ಮುರಿದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ.

ಬೀದಿನಾಯಿಗಳ ಸಂತಾನಶಕ್ತಿ ಹರಣ ಮತ್ತು ಶಸ್ತ್ರಚಿಕಿತ್ಸೆ ಮಾಡಲು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಪಾಲನೆ ಎಷ್ಟಾಗುತ್ತಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಸುಪ್ರೀಂ ಕೋರ್ಟ್‌ ನಿರ್ದೇಶನ: ಈಗಾಗಲೇ ಸುಪ್ರೀಂ ಕೋರ್ಟ್‌ ಶಾಲೆ, ಕಾಲೇಜು, ಬಸ್‌ ನಿಲ್ದಾಣ, ಅಂಗನವಾಡಿ ಕೇಂದ್ರ, ಹೋಟೆಲ್ , ಹಾಸ್ಟೆಲ್‌ಗಳ ವ್ಯಾಪ್ತಿಯಲ್ಲಿ ಸಂಬಂಧಿತ ಅಧಿಕಾರಿಗಳು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಬೀದಿನಾಯಿಗಳ ವಿವರಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸರಿಗೆ ಸಲ್ಲಿಸಲು ಹಾಗೂ ಸ್ಥಳಾಂತರಿಸಲು ನಿರ್ದೇಶನ ನೀಡಿದೆ. ಆದರೆ ಅಧಿಕಾರಿಗಳು ಎಷ್ಟು ಗಂಭೀರವಾಗಿ ಕ್ರಮ ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವನ್ಯಜೀವಿಗಳಿಗೆ ಮಾರಕ: ಬೀದಿನಾಯಿಗಳಿಂದ ಕ್ಯಾನೈನ್ ಡಿಸ್ಟೆಂಪರ್ ವೈರಸ್ ವನ್ಯಜೀವಿಗಳಾದ ತೋಳ ಮತ್ತು ನರಿಗಳಿಗೆ ಹರಡಿ ಅವುಗಳ ಸಂತತಿಗೆ ಕುತ್ತು ತರುತ್ತದೆ.ಬೀದಿ ನಾಯಿಗಳು ಬೇಟೆಗಾರರಾಗಿ(ಪ್ರಿಡೇಟರ್) ಪಕ್ಷಿಗಳು ಮತ್ತು ಸಣ್ಣ ಪ್ರಾಣಿಗಳನ್ನು ಕೊಲ್ಲುತ್ತವೆ. ಅವುಗಳ ಆವಾಸಸ್ಥಾನಗಳನ್ನು ಅತಿಕ್ರಮಿಸುತ್ತವೆ ಮತ್ತು ಸಂರಕ್ಷಿತ ಪ್ರದೇಶಗಳ ಪರಿಣಾಮಕಾರಿತ್ವವನ್ನು ಕಡಿಮೆಗೊಳಿಸುತ್ತವೆ. ಇದು ವನ್ಯಜೀವಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ.ರೋಸಿ ಹೋದ ಜನ:

ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನತೆ ಅಕ್ಷರಶಃ ರೋಸಿ ಹೋಗಿದ್ದಾರೆ. ಮಹಿಳೆಯರು, ಮಕ್ಕಳು ಒಂಟಿಯಾಗಿ ಹೊರಗಡೆ ಹೋಗಲಾರದಂತಾಗಿದೆ. ರಾತ್ರಿಯಂತೂ ಇವುಗಳ ಹಾವಳಿ ಹೇಳತೀರದಾಗಿದ್ದು, ರಸ್ತೆ, ಓಣಿಗಳಲ್ಲಿ ನಡು ರಸ್ತೆಗಳಲ್ಲಿ ಹತ್ತಾರು ನಾಯಿಗಳು ಮಲಗಿಕೊಂಡು ಬೈಕ್‌ ಸವಾರರನ್ನು ಬೆನ್ನಟ್ಟಿ ಹೋಗುತ್ತವೆ. ಇದರಿಂದ ಆತಂಕಗೊಂಡು ಸವಾರರು ಅತೀ ವೇಗದಲ್ಲಿ ಬೈಕ್‌ ಚಲಾಯಿಸಿಕೊಂಡು ಹೋಗುವುದರಲ್ಲಿ ಆಯ ತಪ್ಪಿ ಬಿದ್ದಂತಹ ಸಾಕಷ್ಟು ಪ್ರಕರಣಗಳು ನಡೆದಿವೆ ಎಂದು ಸ್ಥಳೀಯರಾದ ಶರಣಯ್ಯ ಹಿರೇಮಠ, ವೀರುಪಾಕ್ಷಪ್ಪ ಬೂದಿಹಾಳ ತಿಳಿಸಿದರು. ಸಂತಾನಶಕ್ತಿ ಹರಣ ಚಿಕಿತ್ಸೆ: ಈಗಾಗಲೇ 795ಕ್ಕೂ ಅಧಿಕ ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿದ್ದು, ಇನ್ನೂ ಕಾರ್ಯಾಚರಣೆ ನಡೆದಿದೆ. ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಶಾಲೆ, ಕಾಲೇಜು, ಬಸ್‌ ನಿಲ್ದಾಣ, ಆಸ್ಪತ್ರೆ, ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಬಂಧಿತ ಅಧಿಕಾರಿಗಳು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಬೀದಿನಾಯಿಗಳ ಸಂಖ್ಯೆಯ ವಿವರ ಸಲ್ಲಿಸಬೇಕೆಂದು ಇದೆ. ಆ ಪ್ರಕಾರ ಸಾಕಷ್ಟು ಮಾಹಿತಿ ಬಂದಿದೆ. ಆ ಮಾಹಿತಿ ಪ್ರಕಾರ ಅಲ್ಲಿ ಕೂಡಾ ಕಾರ್ಯಚರಣೆ ನಡೆಸಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಕಾರ್ಯ ನಡೆದಿದೆ ಎಂದು ನಗರಸಭೆ ಪರಿಸರ ಅಭಿಯಂತರ ಆನಂದ ಬದಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!