ಅಸ್ಪೃಶ್ಯತೆ ನಿರ್ಮೂಲನೆಗೆ ವಿವಿಧ ಗ್ರಾಮಗಳಲ್ಲಿ ಬೀದಿ ನಾಟಕ

KannadaprabhaNewsNetwork | Published : Feb 16, 2024 1:51 AM

ಸಾರಾಂಶ

ಅಸ್ಪೃಶ್ಯತೆ ವಿರುದ್ಧ ಬಸವಣ್ಣನವರು ಸಮರ ಸಾರಿ ಕಲ್ಯಾಣ ಕರ್ನಾಟಕ ನಾಂದಿಗೆ ಕಾರಣರಾದರು. ಸಮಾಜದಲ್ಲಿ ಅಸ್ಪೃಶ್ಯತೆ ತೊಲಗದ ಹೊರತು ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ವಿಜಯಕುಮಾರ್, ಅಸ್ಪೃಶ್ಯತೆ ಸಮಾಜಕ್ಕೆ ಅಂಟಿರುವ ಶಾಪವಾಗಿದೆ. 12ನೇ ಶತಮಾನದಲ್ಲಿ ಮೇಲುಕೀಳು ವಿರುದ್ಧ ಶರಣರು ಹೋರಾಟ ನಡೆಸಿದರು. ಮಾನವ ಕುಲ ಒಂದೇ ಎಂಬುದಾಗಿ ಸಾರಿದರು. ಅಸ್ಪೃಶ್ಯತೆ ವಿರುದ್ಧ ಬಸವಣ್ಣನವರು ಸಮರ ಸಾರಿ ಕಲ್ಯಾಣ ಕರ್ನಾಟಕ ನಾಂದಿಗೆ ಕಾರಣರಾದರು. ಸಮಾಜದಲ್ಲಿ ಅಸ್ಪೃಶ್ಯತೆ ತೊಲಗದ ಹೊರತು ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಮಾಜದಿಂದ ಜಾತೀಯತೆ ತೊಲಗಬೇಕು ಎಂದು ಕರೆ ನೀಡಿದರು.

ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿ, ಸಮಾಜದಲ್ಲಿ ಸಮಾನತೆ ಹೋಗಿ ಅಸಮಾನತೆ ಉಂಟಾಗಿ ಗೊಂದಲುಗಳು ಮೂಡುತ್ತಿವೆ. ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರು ಸಮಾನರು. ಆದ್ದರಿಂದ ಅಸ್ಪೃಶ್ಯತೆ ಉಂಟು ಮಾಡುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಅಸ್ಪೃಶ್ಯತೆ ಹೋಗಲಾಡಿಸಲು ಪ್ರತಿಯೊಬ್ಬರೂ ಸಾಮರಸ್ಯದಿಂದ ಜೀವಿಸಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಎಂ. ಶೃತಿ, ಮೊಹ್ಮದ್‌ ಸಲೀಂ ಮಾತನಾಡಿದರು.

ತಾಲೂಕಿನ ದೇವಿಕೇರಿ, ದೇವರ ಗೋನಾಲ, ಹೆಬ್ಬಾಳ, ಕಲ್ಲದೇವನಹಳ್ಳಿ, ಕಕ್ಕೇರಿ ಪುರಸಭೆಯ ವ್ಯಾಪ್ತಿಯಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಬೀದಿ ನಾಟಕದ ಮೂಲಕ ಜಾಗೃತಿ ಕಾರ್ಯಕ್ರಮಗಳು ಜರುಗಿದವು.

ಕಕ್ಕೇರಾ ಪುರಸಭೆ ಮುಖ್ಯ ಅಧಿಕಾರಿ ಪ್ರವೀಣ್ ಕುಮಾರ್, ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮರಾಯ ಸಿದಗೇರಿ, ಶರಣು ನಾಟೇಕಾರ, ನಾಗಯ್ಯ ಸ್ವಾಮಿ, ಕಲಾವಿದರದ ಗೀತಮ್ಮ, ಗಂಗಮ್ಮ, ಶಂಕ್ರಯ್ಯ, ಹನುಮಂತ, ಸುಭಾಷ್ ಸೇರಿದಂತೆ ಇತರರಿದ್ದರು.

Share this article