ರಾಮನಗರ: ಬೀದಿ ಬದಿ ವ್ಯಾಪಾರಿಗಳು ನಗರ ಪ್ರದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಅವರ ಅನುಕೂಲಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕಾಭಿವೃದ್ಧಿ ಸಾಧಿಸುವಂತೆ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕಿವಿಮಾತು ಹೇಳಿದರು.
ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೆ ಬೀದಿ ಬದಿ ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕಾಗಿ ಪ್ರತಿ ದಿನ ಹೋರಾಡುತ್ತಿದ್ದಾರೆ. ಅವರ ವ್ಯಾಪಾರ ಲಾಭದಾಯಕವಾಗಿ ಆರ್ಥಿಕಾಭಿವೃದ್ಧಿ ಸುಧಾರಿಸಲೆಂದೇ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ವ್ಯಾಪಾರಿಗಳು ತಮ್ಮ ಹಕ್ಕುಗಳ ಜೊತೆಗೆ ಬ್ಯಾಂಕಿನ ವ್ಯವಹಾರ, ಡಿಜಿಟಲ್ ವಹಿವಾಟಿನ ಬಗ್ಗೆಯೂ ತಿಳಿವಳಿಕೆ ಹೊಂದಬೇಕು ಎಂದು ಹೇಳಿದರು.
ವ್ಯಾಪಾರಿಗಳು ಸೂಕ್ತ ದಾಖಲೆಗಳು, ಸಾಲ ಮರುಪಾವತಿ, ಆರ್ಥಿಕ ಶ್ರಮತೆ ಸರಿಯಾಗಿದ್ದರೆ ಬ್ಯಾಂಕಿನವರೇ ಹುಡುಕಿಕೊಂಡು ಬಂದು ಸಾಲ ಕೊಡುತ್ತಾರೆ. ಈಗ ಎಲ್ಲರು ಕ್ಯಾಶ್ ಲೆಸ್ ನತ್ತ ಮುಖ ಮಾಡುತ್ತಿರುವ ಕಾರಣ ವ್ಯಾಪಾರಿಗಳು ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಅರಿವು ಹೊಂದಬೇಕು. ಇದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ರಸ್ತೆ ಬದಿ ವ್ಯಾಪಾರಿಗಳು ಸಮಾಜದ ನಿಜವಾದ ಆಸ್ತಿ. ನಾವು ನಿಮ್ಮಗಳ ಪರವಾಗಿದ್ದೇವೆ. ನಗರಸಭೆಯಿಂದ ನಿಮಗೆಂದೂ ತೊಂದರೆ ಕೊಟ್ಟಿಲ್ಲ. ಆದರೆ, ನೀವುಗಳು ರಸ್ತೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದೀರಿ. ತೆರವು ಮಾಡುವಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡಬೇಡಿ. ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು. ನಮ್ಮವರೆ ಆಗಿರುವ ಎಲ್ಲರ ಹಿತ ಕಾಪಾಡುವುದು ನಗರಸಭೆ ಕರ್ತವ್ಯವಾಗಿದೆ ಎಂದು ಕೆ.ಶೇಷಾದ್ರಿ ಹೇಳಿದರು.
ನಗರಸಭೆ ಆಯುಕ್ತ ಜಯಣ್ಣ ಮಾತನಾಡಿ, ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ಯೋಜನೆ (ಪಿಎಂ ಸ್ವನಿಧಿ) ಅಡಿಯಲ್ಲಿ ಯಾವುದೇ ಭದ್ರತೆ ಇಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಮೂರು ಹಂತಗಳಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಈಗ 1 ರಿಂದ 2 ಲಕ್ಷ ರುಪಾಯಿವರೆಗೂ ಸಾಲಸೌಲಭ್ಯ ಪಡೆಯಲು ಅವಕಾಶ ಇದೆ ಎಂದರು.
ಅಭಿಯಾನ ವ್ಯವಸ್ಥಾಪಕ ಸಿ.ರಾಮಕೃಷ್ಣರವರು ಪಿಎಂ ಸ್ವಾನಿಧಿ ಮತ್ತು ಸ್ವಯಂ ಉದ್ಯೋಗ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ರವರು ಬ್ಯಾಂಕಿನ ವ್ಯವಹಾರ ಮತ್ತು ಮರುಪಾವತಿ, ಸಮುದಾಯ ಸಂಪನ್ಮೂಲ ವ್ಯಕ್ತಿಯಾದ ವಿಜಯಮ್ಮರವರ ಜ್ಞಾನ ಹಾಗೂ ಅಭಿವೃದ್ಧಿ, ಮಹೇಶ್ವರಿರವರು ಡಿಜಿಟಲ್ ವಹಿವಾಟು ಹಾಗೂ ಅಭಿಯಾನ ವ್ಯವಸ್ಥಾಪಕ ನಟರಾಜೇಗೌಡರವರು ಬೀದಿ ಬದಿ ವ್ಯಾಪಾರಿಗಳ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.
7ಕೆಆರ್ ಎಂಎನ್ 4.ಜೆಪಿಜಿ