ಗಜೇಂದ್ರಗಡ: ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಸಂಘ ಸಿಐಟಿಯು ಸಂಯೋಜಿತ ತಾಲೂಕು ಸಮಿತಿಯಿಂದ ಬೀದಿ ಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣೆಗಾಗಿ ಹಾಗೂ ವಿವಿಧ ಬೇಡಿಕೆಗಾಗಿ ಬುಧವಾರ ತಾಲೂಕು ಸಮ್ಮೇಳನ ನಡೆಯಿತು.
ಪ್ರಾಸ್ತಾವಿಕವಾಗಿ ತಾಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಪಟ್ಟಣವು ವ್ಯಾಪಾರಸ್ಥರ ಕೇಂದ್ರವಾಗಿದ್ದು, ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಬದುಕು ಕಷ್ಟಕರವಾಗಿದೆ. ಹೀಗಾಗಿ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳಿಗೆ ನೀಡಬೇಕಾದ ಕಾನೂನುಬದ್ಧ ಸೌಲಭ್ಯಗಳನ್ನು ನೀಡದಿದ್ದಾಗ ಬೀದಿಗಿಳಿದು ಹೋರಾಟ ನಡೆಸಿ ಕೆಲವು ಬೇಡಿಕೆಗಳನ್ನು ಈಡೇರಿವೆ. ಆದರೆ ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರಬೇಕಿದ್ದು, ಸಂಘಟನೆ ಅನಿವಾರ್ಯವಾಗಿದೆ. ಸರ್ಕಾರ ಮಟ್ಟದಲ್ಲಿ ಒತ್ತಡ ಹೇರಿ ಸ್ಥಳೀಯ ಆಡಳಿತ ಮಂಡಳಿಗಳು ನಮಗೆ ನೀಡಬೇಕಾದ ಸೌಲಭ್ಯಗಳನ್ನು ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ಚಿಲ್ಲರೆ ವ್ಯಾಪಾರ ಎಂದರೆ ವಿದೇಶಿ ಬಂಡವಾಳದ ಕಂಪನಿಗಳು ದೇಶಿಯ ವ್ಯಾಪಾರಸ್ಥರನ್ನು ಚಿಲ್ಲರೆ ಎಂದು ಪರಿಗಣಿಸುತ್ತಿವೆ. ಕಿರಾಣಿ, ಬಟ್ಟೆ, ಬೇಕರಿ, ಫುಟ್‌ವೇರ್, ಹಾರ್ಡ್‌ವೇರ್ ಸೇರಿ ರಸಗೊಬ್ಬರ, ಅಕ್ಕಡಿಕಾಳು, ಬೀದಿಬದಿ ವ್ಯಾಪಾರಸ್ಥರನ್ನು ದಿವಾಳಿ ಮಾಡಿ ವಿದೇಶಿ ಕಂಪನಿಗಳು ದೊಡ್ಡ ದೊಡ್ಡ ಮಾಲ್‌ಗಳನ್ನು ನಿರ್ಮಿಸುವ ಹುನ್ನಾರು ಹೊಂದಿವೆ ಎಂದರು.
ವಕೀಲ ಎಫ್.ಎಫ್. ತೋಟದ, ರಾಜು ಮಾಂಡ್ರೆ, ಎಸ್.ಬಿ. ದಿಂಡವಾಡ ಹಾಗೂ ಗಣೇಶ್ ರಾಥೋಡ್ ಮಾತನಾಡಿದರು.ಇದಕ್ಕೂ ಮುನ್ನು ತಾಲೂಕು ಸಮ್ಮೇಳನದ ಮೆರವಣಿಗೆಯು ಇಲ್ಲಿನ ದುರ್ಗಾ ಸರ್ಕಲ್‌ನಿಂದ ಪ್ರಾರಂಭಗೊಂಡು ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ ಮಾರ್ಗವಾಗಿ ಕುಷ್ಟಗಿ ರಸ್ತೆ ಮೂಲಕ ಸಿಐಟಿಯು ಕಚೇರಿ ಆವರಣ ತಲುಪಿತು.
ಮೈಬು ಹವಾಲ್ದಾರ್, ಅಂದಪ್ಪ ಕುರಿ, ಚಂದ್ರು ರಾಥೋಡ, ಚೌಡಮ್ಮ ಯಲ್ಪು, ರಾಜು ಮಾಂಡ್ರೆ, ಮಂಜುಳಾ ಪಮ್ಮಾರ, ಚಂದ್ರಶೇಖರ ರಾಠೋಡ, ಅಂಬರೀಶ ಚವ್ವಾಣ, ಕಳಕಪ್ಪ ಮಾಳೋತ್ತರ, ಕೆ.ಸಿ. ಗೋಡೇಕಾರ, ಉಮೇಶ ನಾವಡೆ ಇದ್ದರು.