ಹುಬ್ಬಳ್ಳಿ: ಕನ್ನಡ ಕಟ್ಟುವ ಕಾರ್ಯದಲ್ಲಿ ಗಟ್ಟಿತನದ ಅಗತ್ಯವಿದೆ, ಹೊಂದಾಣಿಕೆ ಮನೋಭಾವ ಭಾಷಾ ಬೆಳವಣಿಗೆ ವಿಷಯದಲ್ಲಿ ಆತಂಕವನ್ನುಂಟು ಮಾಡಲಿದೆ ಎಂದು ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಹೇಳಿದರು.
ನಾಡು- ನುಡಿ ಸೇವೆಯಲ್ಲಿ ಸದಾ ಕಾರ್ಯನಿರತವಾದ ಕಚುಸಾಪ ಸರ್ಕಾರದ ಅನುದಾನ ಇಲ್ಲದೇ ಹೋದರೂ ಮಠಾಧೀಶರ, ಸಾಹಿತ್ಯಾಸಕ್ತರ ಸಹಕಾರದಿಂದ ನಾಡಿನ ಉದ್ದಗಲಕ್ಕೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆ. ನಾವು ಸ್ಥಳೀಯ ಸಂಸ್ಥೆಗಳಿಗೆ ಕರ ಕಟ್ಟಿದ ಬಳಿಕ ಜಮೆಯಾದ ಗ್ರಂಥಾಲಯ ಮೊತ್ತ ಸಂಸ್ಥೆಯ ಖಾತೆಯಲ್ಲಿದ್ದರೂ ಅದರ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಕುರಿತು ನಾವ್ಯಾರು (ಸಾರ್ವಜನಿಕರು) ಪ್ರಶ್ನಿಸುವುದಿಲ್ಲ ಯಾಕೆ? ಎಂದು ಪ್ರಶ್ನಿಸಿದ ಅವರು, ಅಗತ್ಯದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟದ ಮನೋಭಾವ ಅಗತ್ಯ ಮತ್ತು ಅನಿವಾರ್ಯ ಎಂದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸರಿಸಮನಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆ ಒಳಗೊಂಡಿದೆ. ಮುಂಬರುವ ದಿನಗಳಲ್ಲಿ ಕಚುಸಾಪ ಸೇರಿದಂತೆ ಲೇಖಕಿಯರ ಸಂಘ ಹೆಚ್ಚು ಅನುದಾನ ಪಡೆಯಲಿದೆ ಎಂದು ಹೇಳಿದರು.ಡಾ. ಶಾಂತಣ್ಣ ಕಡಿವಾಲ ಅವರು, "ನಮ್ಮ ನಿಮ್ಮೆಲ್ಲರ ಈತ " ಕೇಸಿಕೆ-72 ಸಂಸ್ಮರಣ ಸಂಚಿಕೆ ಅನಾವರಣ ಮಾಡಿ ಮಾತನಾಡಿ, ನಿರಂತರವಾಗಿ ಸಾಹಿತ್ಯ ಚಟುವಟಿಕೆಯನ್ನು ರಾಜ್ಯವ್ಯಾಪ್ತಿ ಏರ್ಪಡಿಸುವ ಕಚುಸಾಪಕ್ಕೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ ಎಂದರು.
ಲೇಖಕಿಯರ ಸಂಘದ ಅಧ್ಯಕ್ಷೆ ರೂಪಾ ಜೋಶಿ ಕೃಷ್ಣಮೂರ್ತಿ ಕಾದಂಬರಿ ಕುರಿತು, ಪದ್ಮಜಾ ಉಮರ್ಜಿ ಚುಟುಕು ಶಾಯರಿ ಬಗ್ಗೆ ಉಪನ್ಯಾಸ ನೀಡಿದರು. ಆನಂತರ ವಿವಿಧ ಗೋಷ್ಠಿಗಳು ನಡೆದವು. ವೀರೇಶ ಕುಬಸದ, ವೀರಣ್ಣ ಕುಬಸದ, ಶಾಂತಾ ನಾಡಗೀರ ಮುಂತಾದವರಿದ್ದರು. ಮೃತ್ಯುಂಜಯ ಮಟ್ಟಿ ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭುವನೇಶ್ವರಿ ಅಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.