ಸಂವಿಧಾನವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸದೃಢಗೊಳಿಸಲಿದೆ : ಸಾಹಿತಿ ಡಾ. ಕೃಷ್ಣಕುಮಾರ್

KannadaprabhaNewsNetwork |  
Published : Apr 20, 2026, 02:00 AM IST
ಸಂವಿಧಾನವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸದೃಢಗೊಳಿಸಲಿದೆ : ಸಾಹಿತಿ ಡಾ. ಕೃಷ್ಣಕುಮಾರ್ | Kannada Prabha

ಸಾರಾಂಶ

ಅಂಬೇಡ್ಕರ್ ಅವರು ನೈತಿಕ ಮೌಲ್ಯಗಳನ್ನು ರೂಢಿಸುವುದೇ ನಿಜವಾದ ಶಿಕ್ಷಣ ಎಂದು ಹೇಳಿದ್ದರು. ಶಿಕ್ಷಣವೆಂಬುದು ಪ್ರತಿಯೊಬ್ಬರಿಗೂ ಒಂದು ಅಸ್ತ್ರ. ಶಿಕ್ಷಣವು ದೇಶದ ಸಾಮಾಜಿಕ ಬದಲಾವಣೆಗೆ ಕಾರಣವಾಗಲಿದೆ. ಮಹಿಳೆಯರಿಗೆ ಸಮಾನತೆ ಸೇರಿದಂತೆ ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನ ಹಕ್ಕನ್ನು ಕಲ್ಪಿಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂವಿಧಾನ ದೇಶಕ್ಕಾಗಿ ಮಾತ್ರವಲ್ಲ, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢವಾಗಿಸಲಿದೆ ಎಂದು ಸಾಹಿತಿ ಡಾ. ಬಿ.ಆರ್. ಕೃಷ್ಣಕುಮಾರ್ ಅವರು ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರು. ಸಾಮಾಜಿಕ ನ್ಯಾಯದ ಹರಿಕಾರರು ಹಾಗೂ ಜ್ಞಾನದ ಸಂಕೇತವಾಗಿರುವ ಅಂಬೇಡ್ಕರ್ ಜನ್ಮದಿನವನ್ನು ಪ್ರತಿವರ್ಷ ಕೇವಲ ಹಳ್ಳಿ, ಪಟ್ಟಣಗಳಲ್ಲಿ ಮಾತ್ರವಲ್ಲದೆ ಜಗತ್ತಿನ ೧೯೮ ದೇಶಗಳಲ್ಲಿ ಹಾಗೂ ಅಲ್ಲಿನ ವಿದ್ಯಾನಿಲಯಗಳಲ್ಲಿ ಆಚರಿಸುತ್ತಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ವಿಶ್ವದ ಇತರೆ ದೇಶಗಳು ಅಳವಡಿಸಿಕೊಂಡಿವೆ. ಸಮಾನತೆಯ ಸಾಕಾರಮೂರ್ತಿ ಅಂಬೇಡ್ಕರ್ ಎಂದರೆ ತಪ್ಪಾಗಲಾರದು ಎಂದರು.

ಅಂಬೇಡ್ಕರ್ ಅವರು ನೈತಿಕ ಮೌಲ್ಯಗಳನ್ನು ರೂಢಿಸುವುದೇ ನಿಜವಾದ ಶಿಕ್ಷಣ ಎಂದು ಹೇಳಿದ್ದರು. ಶಿಕ್ಷಣವೆಂಬುದು ಪ್ರತಿಯೊಬ್ಬರಿಗೂ ಒಂದು ಅಸ್ತ್ರ. ಶಿಕ್ಷಣವು ದೇಶದ ಸಾಮಾಜಿಕ ಬದಲಾವಣೆಗೆ ಕಾರಣವಾಗಲಿದೆ. ಮಹಿಳೆಯರಿಗೆ ಸಮಾನತೆ ಸೇರಿದಂತೆ ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನ ಹಕ್ಕನ್ನು ಕಲ್ಪಿಸಿಕೊಟ್ಟರು. ಕಾರ್ಮಿಕರಿಗೆ ಕನಿಷ್ಠ ವೇತನ, ವಿಮಾ ಯೋಜನೆ, ರಜೆ, ಮುಂಬಡ್ತಿ, ಮಹಿಳೆಯರಿಗೆ ಹೆರಿಗೆ ರಜೆ, ಹಿಂದೂ ಕೋಡ್ ಬಿಲ್ ಇತರೆ ಅನೇಕ ಸೌಲಭ್ಯಗಳನ್ನು ಪ್ರತಿಪಾದಿಸಿದರು. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಆದರ್ಶ ಚಿಂತನೆ, ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾಹಿತಿ ಕೃಷ್ಣಕುಮಾರ್ ಅವರು ತಿಳಿಸಿದರು.

ಸರ್ಕಾರಿ ಪ್ರಥಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಎಸ್. ಅಶ್ವಿನಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾನತೆ, ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳ ಮೂಲಕ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ತನ್ನ ಜೀವನವನ್ನು ಮುಡುಪಿಟ್ಟ ಮಹಾನ್ ವ್ಯಕ್ತಿ ಡಾ. ಬಿ.ಆರ್ ಅಂಬೇಡ್ಕರ್ ಅವರು. ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಕಥೆಗಳಿಗಿಂತ ಸಂವಿಧಾನದ ನೈತಿಕ ಮೌಲ್ಯವುಳ್ಳ ಚಿಂತನೆಗಳನ್ನು ಅಳವಡಿಸಿಕೊಂಡು ಜ್ಞಾನದ ಹಣತೆ ಹಚ್ಚಬೇಕು. ಆಚರಣೆಗಳಿಗಿಂತ ವಿಚಾರಧಾರೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ವಕೀಲರು ಹಾಗೂ ಪುಲೆ- ಅಂಬೇಡ್ಕರ್ ವಾದಿಗಳಾದ ಎನ್. ಮಹೇಂದ್ರ ಮಾತನಾಡಿ, ಅಂಬೇಡ್ಕರ್ ಅವರು ಪ್ರತಿದಿನ ೧೮ ಗಂಟೆಗಳ ಕಾಲ ಓದುತ್ತಿದ್ದರು. ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಶ್ರದ್ಧೆಯಿಂದ ಓದುವುದೇ ಅಂಬೇಡ್ಕರ್ ಅವರಿಗೆ ಕೊಡುವ ಉನ್ನತ ಗೌರವ. ಯಾವುದೆ ಜನಾಂಗಕ್ಕೆ ತನ್ನ ಜೀವನವನ್ನೇ ಮುಡುಪಿಟ್ಟ ನಾಯಕನನ್ನು ಗೌರವಿಸದಿದ್ದರೆ ಅದು ಅನಾಚಾರ ಎಂದು ಅರಿಸ್ಟಾಟಲ್ ಹೇಳಿದ್ದಾರೆ. ಆದ್ದರಿಂದ ದೇಶದ ಎಲ್ಲಾ ಸಮುದಾಯ, ವರ್ಗಗಳಿಗಾಗಿ ತಮ್ಮ ವೈಯಕ್ತಿಕ ಜೀವನವನ್ನು ಮುಡುಪಾಗಿಟ್ಟ ಅಂಬೇಡ್ಕರ್ ಅವರನ್ನು ಎಲ್ಲರೂ ಸ್ಮರಿಸಲೇಬೇಕು ಎಂದರು.

ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ನೀಲಕಂಠಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರ ಜ್ಞಾನದಿಂದ ಪ್ರತಿಫಲವನ್ನು ಪಡೆದ ನಾವು ಸಮಾಜಕ್ಕೆ ನಮ್ಮಿಂದ ಕೊಡುಗೆ ನೀಡಬೇಕು. ಜಯಂತಿ ಕಾರ್ಯಕ್ರಮ ಕುಣಿತ, ಆಡಂಬರದ ಕಾರ್ಯಕ್ರಮವಾಗಬಾರದು. ಸ್ತ್ರೀಯರು ಸೇರಿದಂತೆ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕುಗಳು, ಸ್ಥಾನಮಾನ ನೀಡಿರುವುದು ಸಂವಿಧಾನ. ಅಂಬೇಡ್ಕರ್ ಅವರು ಸಮಸಮಾಜವನ್ನು ಎಳೆಯುವ ಶಕ್ತಿ ಮಹಿಳೆಯರಿಗೆ ಮಾತ್ರ ಇದೆ ಎಂದು ನಂಬಿದ್ದರು ಎಂದು ಹೇಳಿದರು.

ಗಣಿತಶಾಸ್ತ್ರ ಮುಖ್ಯಸ್ಥರಾದ ಚಂದ್ರಶೇಖರ್. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲೇಶ್. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸಿ.ಎನ್. ನಾರಾಯಣ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಾಗೇಂದ್ರಕುಮಾರ್, ಲೆಕ್ಕ ವ್ಯವಸ್ಥಾಪಕರಾದ ಡಾ. ಶಾಲಿನಿ, ಪತ್ರಾಂಕಿತ ವ್ಯವಸ್ಥಾಪಕರಾದ ಪೂರ್ಣಿಮಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

------

17ಸಿಎಚ್ಎನ್‌15

ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಸಾಹಿತಿ ಡಾ. ಕೃಷ್ಣಕುಮಾರ್‌ ಅವರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ: ಜೆಡಿಎಸ್‌ ಪ್ರತಿಭಟನೆ
ವಿಶ್ವಕರ್ಮ ಸಮಾಜ ಸಂಘಟಿತರಾಗಲಿ: ಕೆ.ಪಿ. ನಂಜುಂಡಿ