- ಶಾಸಕ ಹರೀಶ್, ಮಾಜಿ ಶಾಸಕ ರಾಮಪ್ಪ, ನಂದಿಗಾವಿ ಶ್ರೀನಿವಾಸ್‌ಗೆ ಕದಸಂಸ ಮುಖಂಡರ ಒತ್ತಾಯ
ಕನ್ನಡಪ್ರಭ ವಾರ್ತೆ ಹರಿಹರ
ನಿಗದಿ ಆಗಿರುವ ನಿವೇಶನದಲ್ಲಿಯೇ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಆದಷ್ಟು ಬೇಗನೇ ಗುದ್ದಲಿ ಪೂಜೆ ನೆರೆವೇರಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ನಗರದಲ್ಲಿ ಶನಿವಾರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಸ್.ರಾಮಪ್ಪ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.ನಂತರ ಕದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಮಾತನಾಡಿ, ಹರಿಹರದ ಹರಪನಹಳ್ಳಿ ರಸ್ತೆಯ ಹಳೇ ಕೋರ್ಟ್ ಆವರಣದ ನಗರಸಭೆ ಒಡೆತನದ ನಿವೇಶನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ರಾಜ್ಯ ಸರ್ಕಾರ 2022ರಲ್ಲಿ ಮಂಜೂರಾತಿ ಆದೇಶ ಮಾಡಿದೆ ಎಂದರು.
ನಿವೇಶನ ಹಾಗೂ ಅನುದಾನ ಮಂಜೂರಾತಿಯಾಗಿ ಹಲವು ವರ್ಷಗಳು ಕಳೆದರೂ ಕಾಮಗಾರಿ ಆರಂಭ ಏಕೆ ಮಾಡಲಾಗುತ್ತಿಲ್ಲ ಎಂಬ ಪ್ರಶ್ನೆ ತಾಲೂಕಿನ ದಲಿತ ಸಮುದಾಯ ಹಾಗೂ ಪ್ರಜ್ಞಾವಂತರಿಗೆ ಕಾಡುತ್ತಿದೆ. ಹೀಗೆಯೇ ಕಾಲಹರಣ ಮಾಡಿದಲ್ಲಿ ಬಿಡುಗಡೆಯಾದ ಅನುದಾನವೂ ಸರ್ಕಾರಕ್ಕೆ ವಾಪಸ್ ಹೋಗುವ ಅಪಾಯವಿದೆ ಎಂದರು.
ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಈ ಸಮುದಾಯ ಭವನ ನಿರ್ಮಾಣದಿಂದ ನಗರದ ದಲಿತರೂ ಸೇರಿದಂತೆ ಎಲ್ಲ ಸಮುದಾಯದ ಜನರ ವಿಶೇಷವಾಗಿ ಬಡ ಹಾಗೂ ದುರ್ಬಲ ಕುಟುಂಬದವರ ಕಲ್ಯಾಣ ಹಾಗೂ ಇತರೆ ಕಾರ್ಯಕ್ರಮ, ಸಭೆ, ಸಂವಾದ ನಡೆಸಲು ಅನುಕೂಲವಾಗುತ್ತದೆ. ನೆಪಗಳನ್ನು ಒಡ್ಡುತ್ತಾ ಸದರಿ ಸಮುದಾಯ ಭವನ ನಿರ್ಮಾಣಕ್ಕೆ ಇಂತಹುದೇ ತಾತ್ಸಾರ ಮನೋಭಾವ ಮುಂದುವರಿದರೆ ನಮ್ಮ ಸಂಘಟನೆ ಹಾಗೂ ಸಮುದಾಯದ ಜನರು ಸೇರಿ ಉಗ್ರ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಜಿ.ಸಂತೋಷ್ ಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಎಸ್.ಬಾಬುಲಾಲ್, ಮುಖಂಡರಾದ ಇಮ್ತಿಯಾಜ್ ಜಲಾಲ್, ಶಶಿ ನಾಯಕ್, ತಿಮ್ಮಣ್ಣ ಕಡ್ಲೆಗೊಂದಿ, ಲೋಕೇಶ್, ಸುರೇಶ್ ಡಿ. ಕೆಂಚನಹಳ್ಳಿ, ಅಲೆಮಾರಿ ಸಮುದಾಯ ಸಂಘಟನೆಯ ರಾಜ್ಯ ಉಪಾಧ್ಯಕ್ಷ ದುರುಗೇಶ್ ಎಸ್., ಗ್ರಾಪಂ ಸದಸ್ಯ ಗುಳದಹಳ್ಳಿ ಮಂಜಪ್ಪ, ಮಂಜುನಾಥ ನಡುವಲಕೇರಿ, ಎಚ್.ಎಂ.ಗುಡದಯ್ಯ ರಾಜನಹಳ್ಳಿ, ಈ.ಈರಣ್ಣ, ಗಂಗಪ್ಪ, ಪಕ್ಕೀರಪ್ಪ, ಸೋಮಣ್ಣ, ನಾಗರಾಜ್ ಹಾಗೂ ಇತರರಿದ್ದರು.
-18HRR.02: