ಕನ್ನಡಪ್ರಭ ವಾರ್ತೆ ಸೊರಬ
ಪಕ್ಷ ಸಂಘಟನೆಯ ಮೂಲಕ ತಾಲೂಕಿನಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಿಷ್ಟಗೊಳಿಸಬೇಕು. ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಕರೆ ನೀಡಿದರು.ಗುರುವಾರ ತಾಲೂಕಿನ ಚಂದ್ರಗುತ್ತಿ ಮಹಾಶಕ್ತಿ ಕೇಂದ್ರದ ಹಿರೇಕಲಗೋಡು ಗ್ರಾಮದಲ್ಲಿ ಪಕ್ಷ ಸಂಘಟನೆಗಾಗಿ ನೂತನ ಬೂತ್ ರಚನೆಯ ಅಭಿಯಾನದ ವಿಶೇಷ ಸಭೆ ನಡೆಸಿ ಅವರು ಮಾತನಾಡಿದರು.
ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಪಕ್ಷ ಸಂಘಟಿಸುವುದು ನಮ್ಮ ಮುಂದಿನ ಗುರಿಯಾಗಿದೆ. ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಜವಾಬ್ದಾರಿ ನನಗೆ ನೀಡಿದ್ದು, 239 ಭೂತ್‌ಗಳಿಗೂ ಭೇಟಿ ನೀಡಿ ಅಧ್ಯಕ್ಷರು ಸೇರಿದಂತೆ ಕಾರ್ಯಕಾರಿ ಸಮಿತಿ ರಚನೆ ಮಾಡುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಿ ಸಂಘಟಿಸಲಾಗುವುದು ಎಂದು ಹೇಳಿದರು.ಸಂಘಟನಾ ಪರ್ವಕ್ಕೆ ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕಿದೆ. ಈಗಾಗಲೇ 239 ಬೂತ್‌ನ ಸದಸ್ಯತ್ವ ಅಭಿಯಾನ ನಡೆದಿದ್ದು, 40 ರಿಂದ 45 ಸಾವಿರ ಸದಸ್ಯತ್ವ ಗುರಿ ಹೊಂದಲಾಗಿತ್ತು. ಆದರೆ 30 ಸಾವಿರ ಸದಸ್ಯರ ನೋಂದಣಿಯಾಗಿದೆ ಎಂದು ತಿಳಿಸಿದರು.
ತಮ್ಮ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ರು.ಅನುದಾನ ತಂದಿದ್ದು, ಸೊರಬ-ಶಿರಾಳಕೊಪ್ಪ, ಶಿಗ್ಗಾ-ಶಿರಾಳಕೊಪ್ಪ, ತವನಂದಿ-ಬಿಳಗಲಿ ಸೇರಿದಂತೆ ಅನೇಕ ರಸ್ತೆಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅನುಮೋದನೆ ನೀಡಲಾಗಿತ್ತು. ಅಂತಿಮವಾಗಿ ಹಣಕಾಸು ಒಪ್ಪಿಗೆ ಮಾತ್ರ ಬಾಕಿ ಉಳಿದಿತ್ತು. ಈಗ ಕಾಮಗಾರಿ ಪ್ರಾರಂಭವಾಗಿದ್ದು, ಇಲ್ಲಿನ ಶಾಸಕರು ಎಲ್ಲವೂ ತಮ್ಮವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ರೈತರು ಮತ್ತು ಸಾರ್ವಜನಿಕರ ಯಾವುದೇ ಸಮಸ್ಯೆಗಳು ಬಗೆಹರಿದಿಲ್ಲ. ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಬಿಡಿಗಾಸು ಬಂದಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್, ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಮುಖಂಡರಾದ ಸತೀಶ್ ಹೆಗಡೆ, ಧರ್ಮಣ್ಣ ನ್ಯಾರ್ಶಿ, ರಮೇಶ್ ಮಾವಿನಬಳ್ಳಿಕೊಪ್ಪ, ಮಹೇಶ್ ದ್ಯಾವಸ, ಕೃಷ್ಣಪ್ಪ ನೆಲ್ಲೂರು, ಉಮಾಕಾಂತ, ಸುನಿಲ್, ಚಂದ್ರಪ್ಪ, ವಸಂತ್, ಮಹಾಬಲೇಶ್ವರ, ಮಂಜು, ಕೃಷ್ಣಮೂರ್ತಿ, ಮೂಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವನಗೌಡ, ಕೃಷ್ಣಮೂರ್ತಿ, ಮಲ್ಲಿಕಾರ್ಜುನ್, ಚಂದ್ರು, ಪ್ರವೀಣ್ ನೇರಲಿಗಿ, ಪ್ರಕಾಶ್ ಹುಣಸವಳ್ಳಿ ಮೊದಲಾದವರು ಹಾಜರಿದ್ದರು.